ADVERTISEMENT

ಅದಾನಿ ಹಣ ಚುನಾವಣೆಗೆ ಹೂಡಿಕೆ

ಶರಣರ ನೆಲದಲ್ಲಿ ಅಮಿತ್ ಶಾ–ನರೇಂದ್ರ ಮೋದಿ ಕಾಲಿಡಲು ಬಿಡಬೇಡಿ: ಜಿಗ್ನೇಶ್

​ಪ್ರಜಾವಾಣಿ ವಾರ್ತೆ
Published 7 ಏಪ್ರಿಲ್ 2018, 9:53 IST
Last Updated 7 ಏಪ್ರಿಲ್ 2018, 9:53 IST
ಅದಾನಿ ಹಣ ಚುನಾವಣೆಗೆ ಹೂಡಿಕೆ
ಅದಾನಿ ಹಣ ಚುನಾವಣೆಗೆ ಹೂಡಿಕೆ   

ಗಂಗಾವತಿ: ‘ಸಾವಿರಾರು ಕೋಟಿ ವಂಚನೆ ಮಾಡಿರುವ ನಿರವ್ ಮೋದಿ, ಗೌತಮ್ ಅದಾನಿ, ಅಂಬಾನಿ ಅವರ ಅಕ್ರಮ ಹಣವನ್ನು ಬಳಸಿ ಕರ್ನಾಟಕವನ್ನು ಗೆಲ್ಲಬೇಕು ಎಂದು ಅಮಿತ್ ಶಾ ಹಾಗೂ ನರೇಂದ್ರ ಮೋದಿ ಯೋಜಿಸಿದ್ದಾರೆ ಎಂದು ಗುಜರಾತಿನ ಪಕ್ಷೇತರ ಶಾಸಕ ಜಿಗ್ನೇಶ್ ಮೇವಾನಿ ಗಂಭಿರ ಆರೋಪ ಮಾಡಿದರು.

ನಗರದಲ್ಲಿ ಶುಕ್ರವಾರ ಸಂಜೆ ಸಂವಿಧಾನ ಉಳಿವಿಗಾಗಿ ಕರ್ನಾಟಕ ಸಂಘಟನೆ ಆಯೋಜಿಸಿದ್ದ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಮಾತನಾಡಿದ ಅವರು, ‘ಶರಣ-ಸೋಫಿ ಸಂತರ ಪರಂಪರೆಯಿತುವ ಭತ್ತದ ನಾಡಿನಲ್ಲಿ ಮೋದಿ, ಅಮಿತ್ ಶಾ ಅವರನ್ನು ಕಾಲಿಡಬೇಕು ಬಿಡಬೇಡಿ’ ಎಂದು ಮತದಾರರಿಗೆ ಕರೆ ಕೊಟ್ಟರು.

‘ಹಿಂದೂ-ಮುಸ್ಲಿಂ ಪರಸ್ಪರ ಸಹೋದರರಂತಿರುವ ಈ ನೆಲದಲ್ಲಿ ಅವರು ಜೋಡಿ ಕಾಲಿಟ್ಟರೆ ಕೋಮು ಸೌಹಾರ್ದಕ್ಕೆ ಹೆಸರಾದ ನಾಡಲ್ಲಿ ಸಾಮರಸ್ಯಕ್ಕೆ ಧಕ್ಕೆಯಾಗಲಿದೆ. ಹಿಂದೂ-ಮುಸ್ಲಿಮರು ಬಡಿದಾಡಿಕೊಂಡ ಸಾಯಬೇಕಾದ ಸ್ಥಿತಿ ಎದುರಾಗುತ್ತದೆ’ ಎಂದು ಆತಂಕ ವ್ಯಕ್ತಪಡಿಸಿದರು.

ADVERTISEMENT

‘ದೇಶದ ಯಾವುದೇ ಭಾಗಕ್ಕೂ ಹೋದರೂ ಎಲ್ಲ ಕಡೆ ಒಂದೇ ವಿಷಯ ಚರ್ಚೆಯಾಗುತ್ತಿದೆ. ದೇಶದ ಸಂವಿಧಾನ ಅಪಾಯದಲ್ಲಿದೆ ಎಂಬುದು. 22 ರಾಜ್ಯಗಳನ್ನು ಕೈಯಲ್ಲಿಟ್ಟುಕೊಂಡಿರುವ ಬಿಜೆಪಿ ಸಂವಿಧಾನವನ್ನು ಹುನ್ನಾರದಲ್ಲಿದೆ’ ಎಂದು ಟೀಕಿಸಿದರು.

‘ದೇಶದ ದೊಡ್ಡ ಸೇವಕ, ಕಾವಲುಗಾರ ಎಂದು ಸುಳ್ಳಿನ ಕಂತೆ ಹೆಣೆಯುವ ಪ್ರಧಾನಿ ಮೋದಿ ದೇಶದ ಯುವಕರಿಗೆ, ದಲಿತರಿಗೆ, ಮಹಿಳೆಯರಿಗೆ, ಕೃಷಿಕರಿಗೆ ಚುನಾವಣೆಯ ಪೂರ್ವದಲ್ಲಿ ನೀಡಿದ ಯಾವುದೇ ಭರವಸೆಗಳನ್ನು ಈಡೇರಿಸಿಲ್ಲ’ ಎಂದು ಆರೋಪಿಸಿದರು.

ತೆರಿಗೆ ವಂಚಕರ ಹಣದಲ್ಲಿ ಚುನಾವಣೆಗಳನ್ನು ಎದುರಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ , ಈ ದೇಶದ ನಂಬರ್ ಭ್ರಷ್ಟ ಎಂದು ನೇರವಾಗಿ ಅಪಾದನೆ ಮಾಡಿದ ಮೇವಾನಿ, ‘ಇಂಥವರ ರಕ್ಷಣೆಗೆ ಅಗತ್ಯಬಿದ್ದರೆ ಬಿಜೆಪಿ, ಆಸ್‌ಎಸ್‌ಎಸ್‌, ಎಬಿವಿಪಿ ಗೂಂಡಾಗಳು ಬೀದಿಗಳಿಯುತ್ತಾರೆ’ ಎಂದು ಜರಿದರು.

‘2019ರ ಲೋಕಸಭಾ ಚುನಾವಣೆ ಯಲ್ಲಿ ಬಿಜೆಪಿ ಗೆದ್ದರೆ ದೇಶದ ಸಂವಿಧಾನ ಉಳಿಯುವುದು ಕಷ್ಟ. ಜಾತ್ಯತೀತ ಶಕ್ತಿಗಳು ಒಗ್ಗೂಡಿ ಕೋಮುಶಕ್ತಿಗಳ ವಿರುದ್ಧ ಹೋರಾಟ ಮಾಡಬೇಕಿದೆ. ಈ ಕಾರಣಕ್ಕಾಗಿಯೇ ಎಡಪಂಥೀಯರು ಒಗ್ಗೂಡಬೇಕು’ ಎಂದು ಕರೆಕೊಟ್ಟರು.

ವಿಠ್ಠಪ್ಪ ಗೋರಂಟ್ಲಿ ಅಧ್ಯಕ್ಷತೆ ವಹಿಸಿದ್ದರು. ಮಾಜಿ ಸಚಿವ ಬಿ.ಟಿ. ಲಲಿತಾನಾಯಕ್, ವಿವಿಧ ಪ್ರಗತಿಪರ ಸಂಘಟನೆಗಳ ಪ್ರಮುಖರಾದ ಕೆ.ಎಲ್. ಅಶೋಕ್, ನೂರ್ ಶ್ರೀಧರ, ಇರ್ಷಾದ್ ಆಹ್ಮದ್ ದೇಸಾಯಿ, ಗೌರಿ, ಪೀರ್‌ಭಾಷಾ, ಕರಿಯಪ್ಪ ಗುಡಿಮನಿ ಮಾತನಾಡಿದರು.

**

ಪ್ರಧಾನಿ ಮೋದಿ ನಾಯಕತ್ವವನ್ನು ವಿಶ್ವ ಒಪ್ಪುತ್ತಿದೆ. ಮೇವಾನಿ ಅರೆಪ್ರಜ್ಞಾವಂತ. ಅವರು ಭಾಷಣ ಮಾಡಿದ ಮಾತ್ರಕ್ಕೆ ಏನೂ ನಷ್ಟವಿಲ್ಲ. ಇಂಥವರಿಂದಲೇ ಕೋಮುಸಾಮರಸ್ಯಕ್ಕೆ ಧಕ್ಕೆಯಾಗಲಿದೆ – ಪರಣ್ಣ ಮುನವಳ್ಳಿ, ಮಾಜಿ ಶಾಸಕ.

**

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.