ADVERTISEMENT

ಉತ್ಸವದಿಂದ ಸಾಂಸ್ಕೃತಿಕ ನೆಲೆ ಗಟ್ಟಿ

​ಪ್ರಜಾವಾಣಿ ವಾರ್ತೆ
Published 24 ಮಾರ್ಚ್ 2011, 8:50 IST
Last Updated 24 ಮಾರ್ಚ್ 2011, 8:50 IST
ಉತ್ಸವದಿಂದ ಸಾಂಸ್ಕೃತಿಕ ನೆಲೆ ಗಟ್ಟಿ
ಉತ್ಸವದಿಂದ ಸಾಂಸ್ಕೃತಿಕ ನೆಲೆ ಗಟ್ಟಿ   

ಪ್ರೌಢದೇವರಾಯ ವೇದಿಕೆ (ಆನೆಗೊಂದಿ): ರಾಮ ಭಕ್ತ ಹನುಮಂತನಿಗೆ ಜನ್ಮ ನೀಡಿರುವ, ಕರ್ಮ ಭೂಮಿ-ಧರ್ಮ ಭೂಮಿಯೂ ಆಗಿರುವ ಆನೆಗೊಂದಿಯ ಗತವೈಭವವನ್ನು ನೆನಪು ಮಾಡಿಕೊಳ್ಳುವ ಉತ್ಸವ ಇದಾಗಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು.

ಅವರು ಇಲ್ಲಿನ ಬುಧವಾರ ಎರಡು ದಿನಗಳ ಆನೆಗೊಂದಿ ಉತ್ಸವವನ್ನು ಉದ್ಘಾಟನೆ ನೆರವೇರಿಸಿ ಮಾತನಾಡಿದರು.ನಮ್ಮ ನಾಡಿಗೆ ಉಜ್ವಲ ಪರಂಪರೆ ಇದೆ. ಈ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ಇಂತಹ ಉತ್ಸವಗಳಿಂದ ನಮ್ಮ ಸಾಂಸ್ಕೃತಿಕ ನೆಲೆಯನ್ನು ಗಟ್ಟಿಗೊಳಿಸಲು ಸಾಧ್ಯ ಎಂದೂ ಅವರು ಹೇಳಿದರು.

ಹಂಪಿ ಪರಿಸರದಲ್ಲಿ ವಿಜಯನಗರದ ಗತವೈಭವ ಸಾರುವ ‘ಥೀಮ್ ಪಾರ್ಕ್’ ನಿರ್ಮಾಣಕ್ಕೆ 100 ಕೋಟಿ ರೂಪಾಯಿಗಳನ್ನು ಈಗಾಗಲೇ ಬಜೆಟ್‌ನಲ್ಲಿ ಒದಗಿಸಿದ್ದೇನೆ. ಈ ಪಾರ್ಕ್ ನಿರ್ಮಾಣದ ಜವಾಬ್ದಾರಿಯನ್ನು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಅವರಿಗೆ ವಹಿಸುವುದಾಗಿ ಅವರು ಇದೇ ಸಂದರ್ಭದಲ್ಲಿ ಹೇಳಿದರು.ಜಿಲ್ಲೆಯ ಅಭಿವೃದ್ಧಿಗೆ ತಮ್ಮ ಸರ್ಕಾರ ಸಾಕಷ್ಟು ಕ್ರಮ ಕೈಗೊಂಡಿದೆ ಎಂದ ಅವರು, ಜಾಗತಿಕ ಹೂಡಿಕೆದಾರರ ಸಮಾವೇಶದ ಫಲವಾಗಿ ಜಿಲ್ಲೆಯಲ್ಲಿ 700 ಕೋಟಿ ರೂಪಾಯಿ ಬಂಡವಾಳ ಹೂಡಿಕೆಯಾಗಲಿದ್ದು, ಸಾವಿರಾರು ಉದ್ಯೋಗ ಸೃಷ್ಟಿಯಾಗಲಿದೆ ಎಂದು ಹೇಳಿದರು.

ಆನೆಗೊಂದಿ ಮತ್ತು ಹಂಪಿಯನ್ನು ಸಂಪರ್ಕಿಸುವ ಸೇತುವೆಯನ್ನು ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮದಿಂದ ಕೈಗೆತ್ತಿಕೊಳ್ಳಲಾಗುವುದು. ಜಿಲ್ಲೆಯಲ್ಲಿ ಸ್ಥಾಪಿಸಲಾಗುವ ಎಂಜಿನಿಯರಿಂಗ್ ಕಾಲೇಜಿಗೆ ಸಹ ಅನುದಾನ ಬಿಡುಗಡೆ ಮಾಡಲಾಗುವುದು ಎಂದ ಅವರು, ಜಿಲ್ಲೆಯ ಅಭಿವೃದ್ಧಿಗಾಗಿ ಹಣದ ಕೊರತೆ ಇಲ್ಲ ಎಂದು ಸ್ಪಷ್ಟಪಡಿಸಿದರು.ಇದಕ್ಕೂ ಮುನ್ನ ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಅವರು, ಇಲಾಖೆಗೆ ಈಗ ಹಣಕಾಸಿನ ಕೊರತೆ ಇಲ್ಲ ಎಂದು ಹೇಳಿದರು.

ಈ ಮುಂಚಿನ ಸರ್ಕಾರಗಳಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಕೇವಲ 5 ಕೋಟಿ ರೂಪಾಯಿ ಅನುದಾನ ಬಿಡುಗಡೆಯಾಗುತ್ತಿತ್ತು. ಆದರೆ, ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾದ ನಂತರ ಇಲಾಖೆಗೆ 150 ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಹೀಗಾಗಿ ಆನೆಗೊಂದಿ ಉತ್ಸವವನ್ನು ವಿಜೃಂಭಣೆಯಿಂದ ಹಮ್ಮಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.

ನಂತರ, ಜಿಲ್ಲಾ ಉಸ್ತುವಾರಿ ಸಚಿವ ಲಕ್ಷ್ಮಣ ಸವದಿ ಅವರು ‘ಆನೆಗೊಂದಿ’ ಎಂಬ ಗ್ರಂಥದ ಕನ್ನಡ ಆವೃತ್ತಿಯನ್ನು ಬಿಡುಗಡೆ ಮಾಡಿದರೆ, ಇದೇ ಪುಸ್ತಕದ ಇಂಗ್ಲಿಷ್ ಆವೃತ್ತಿಯನ್ನು ಪ್ರವಾಸೋದ್ಯಮ ಸಚಿವ ಜಿ.ಜನಾರ್ದನ ರೆಡ್ಡಿ ಬಿಡುಗಡೆಗೊಳಿಸಿದರು. ಆನೆಗೊಂದಿ ಕುರಿತ ಮಾಹಿತಿ ಪುಸ್ತಕವನ್ನು ಕನ್ನಡ ಮತ್ತು ಸಂಸ್ಕೃತಿ ಸಚಿವ ಗೋವಿಂದ ಕಾರಜೋಳ ಬಿಡುಗಡೆ ಮಾಡಿದರು.

ಗದಗ ವೀರೇಶ್ವರ ಪುಣ್ಯಾಶ್ರಮದ ಕಲ್ಲಯ್ಯ ಅಜ್ಜ ಅವರು ಸಾನ್ನಿಧ್ಯ ವಹಿಸಿದ್ದರು. ಲೋಕೋಪಯೋಗಿ ಸಚಿವ ಸಿ.ಎಂ.ಉದಾಸಿ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವ ಸಿ.ಸಿ.ಪಾಟೀಲ, ಸಂಸದ ಶಿವರಾಮಗೌಡ, ರಾಜ್ಯ ಕರಕುಶಲ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಲಲಿತಾರಾಣಿ ಶ್ರೀರಂಗದೇವರಾಯಲು, ಶಾಸಕರಾದ ಅಮರೇಗೌಡ ಬಯ್ಯಾಪೂರ, ಹಾಲಪ್ಪ ಆಚಾರ್, ಜಿಲ್ಲಾ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ ನಾಗರಾಜ ಬಿಲ್ಗಾರ್, ಉಪಾಧ್ಯಕ್ಷೆ ಡಾ.ಸೀತಾ ಗೂಳಪ್ಪ ಹಲಗೇರಿ, ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ಹೊನ್ನೂರಸಾಬ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜಯತುನ್ನಾ ಹುಸೇನಸಾಬ ಜಿಲ್ಲಾ ಪಂಚಾಯಿತಿ ಸದಸ್ಯೆ ವಿಜಯಲಕ್ಷ್ಮಿ ಚಿಲಕೂರಿ, ತಾಲ್ಲೂಕು ಪಂಚಾಯಿತಿ ಸದಸ್ಯೆ ರಾಜೇಶ್ವರಿ ಸುರೇಶ, ಆನೆಗೊಂದಿ ರಾಜ ವಂಶಸ್ಥರಾದ ಶ್ರೀರಂಗದೇವರಾಯಲು, ರಾಜಾ ರಾಮದೇವರಾಯಲು, ರಾಜಾ ನರಸಿಂಹದೇವರಾಯಲು, ಕೃಷ್ಣದೇವರಾಯಲು ಹಾಗೂ ಇತರರು ವೇದಿಕೆ ಮೇಲೆ ಉಪಸ್ಥಿತರಿದ್ದರು.
ವಿಶೇಷ ಆಹ್ವಾನಿತರಾಗಿ ಮಾಜಿ ಸಂಸದ ಹೆಚ್.ಜಿ.ರಾಮುಲು ಸಹ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.