ADVERTISEMENT

ಎಣಿಕೆ ಕೇಂದ್ರದಲ್ಲಿ ಮತಯಂತ್ರ ಭದ್ರ

ಗವಿಸಿದ್ದೇಶ್ವರ ಕಾಲೇಜಿನಲ್ಲಿ ನಾಳೆ ಮತ ಎಣಿಕೆ

ಶರತ್‌ ಹೆಗ್ಡೆ
Published 14 ಮೇ 2018, 10:18 IST
Last Updated 14 ಮೇ 2018, 10:18 IST

ಕೊಪ್ಪಳ: ಮತದಾನ ಮುಗಿದ ಮರುದಿನವಾದ ಭಾನುವಾರ ಜಿಲ್ಲೆಯ ಎಲ್ಲ ಮತಗಟ್ಟೆಗಳ ಮತಯಂತ್ರಗಳು ನಗರದ ಗವಿಸಿದ್ದೇಶ್ವರ ಕಾಲೇಜಿನ ಮತ ಎಣಿಕೆ ಕೇಂದ್ರ ಸೇರಿವೆ.

ಸುಮಾರು ಐವತ್ತಕ್ಕೂ ಹೆಚ್ಚು ಭದ್ರತಾ ಸಿಬ್ಬಂದಿ ಬಿಗಿ ಪಹರೆ ನಡೆಸಿದ್ದಾರೆ. ಯಂತ್ರಗಳ ಸುರಕ್ಷತೆ ಬಗ್ಗೆ ಹದ್ದಿನ ಕಣ್ಣಿಡಲು ಸಿಸಿ ಟಿವಿ ಕ್ಯಾಮೆರಾಗಳು ಕಾರ್ಯ ನಿರ್ವಹಿಸುತ್ತಿವೆ. ಮೇ 15ರಂದು ಅಭ್ಯರ್ಥಿಗಳ ಭವಿಷ್ಯ ಬಯಲಾಗಲಿದೆ.

ನಗರದ ಹರಟೆಕಟ್ಟೆಗಳಲ್ಲಿ ಚಹದಂಗಡಿಗಳಲ್ಲಿ ಸೋಲು, ಗೆಲುವಿನ ಲೆಕ್ಕಾಚಾರ ಜೋರಾಗಿಯೇ ಸಾಗಿದೆ. ಕೆಲವೆಡೆ ಬೆಟ್ಟಿಂಗ್‌ ಕೂಡಾ ನಡೆದಿದೆ. ಕಾಂಗ್ರೆಸ್‌ - ಬಿಜೆಪಿ ನಡುವಿನ ನೇರ ಹಣಾಹಣಿಯಲ್ಲಿ ಗೆಲ್ಲುವವರು ಯಾರು ಎಂಬುದೇ ಚರ್ಚೆಯ ಪ್ರಧಾನ ವಸ್ತು. ಸುಮಾರು 20 ದಿನಗಳಿಂದ ವಿವಿಧ ಅಭ್ಯರ್ಥಿಗಳ ಪರ ಪ್ರಚಾರ ಮಾಡುತ್ತಿದ್ದ ಧ್ವನಿವರ್ಧಕಗಳು ಬಂದ್‌ ಆಗಿವೆ. ಗೌಜು, ಗದ್ದಲಗಳಿಂದ ಮುಕ್ತವಾಗಿ ಶಾಂತತೆ ನೆಲೆಸಿದೆ. ಬಾಕಿ ಉಳಿದಿದ್ದ ರಸ್ತೆ ಕಾಮಗಾರಿ ವೇಗ ಪಡೆದಿದೆ. ನೀತಿ ಸಂಹಿತೆಯ ಒತ್ತಡದಿಂದ ಮದ್ಯ ಮಾರಾಟಗಾರರು ಕೊಂಚ ನಿರಾಳವಾಗಿದ್ದಾರೆ. ಬಾರ್‌ಗಳಲ್ಲಿ ಗ್ರಾಹಕರ ಪ್ರಮಾಣ ಹೆಚ್ಚಿದೆ.

ADVERTISEMENT

ನೀತಿ ಸಂಹಿತೆ ಪಾಲನೆ, ಅಪರಾಧ ಪ್ರಕರಣ, ಅಪರಾಧಿಗಳ ಮೇಲೆ ನಿಗಾ ಇಡಬೇಕಾಗಿದ್ದ ಪೊಲೀಸರೂ ನಿರಾಳವಾಗಿದ್ದಾರೆ. ದೂರದ ಆಂಧ್ರಪ್ರದೇಶದಿಂದ ಬಂದ ಪೊಲೀಸರು ತವರಿಗೆ ಮರಳಿದ್ದಾರೆ.

ಐದೂ ಕ್ಷೇತ್ರಗಳ ಮತ ಎಣಿಕೆಗೆ 70 ಟೇಬಲ್‌ಗಳನ್ನು ನಿಗದಿಪಡಿಸಲಾಗಿದೆ. 85 ಮತ ಎಣಿಕೆ ಮೇಲ್ವಿಚಾರಕರು, ಸಹಾಯಕರು ಮತ್ತು ಅಂಕಿ ಅಂಶ ವೀಕ್ಷಕರು ಇದ್ದಾರೆ. ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಮತ್ತು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಡಾ.ಅನೂಪ್‌ ಎ. ಶೆಟ್ಟಿ ಮತ ಯಂತ್ರಗಳನ್ನು ಅಚ್ಚುಕಟ್ಟಾಗಿ ಜೋಡಿಸಿರುವುದು, ಭದ್ರತಾ ಕ್ರಮಗಳನ್ನು ಪರಿಶೀಲಿಸಿದರು.

ಚುನಾವಣಾ ಕಾವು ಇಳಿದ ನಗರದ ಜನಜೀವನ ಯಥಾಸ್ಥಿತಿಗೆ ಮರಳುತ್ತಿದೆ. ಭಾನುವಾರವಾದ್ದರಿಂದ ವ್ಯಾಪಾರ ವಹಿವಾಟು ಅಷ್ಟಾಗಿ ಇರಲಿಲ್ಲ. ಆದರೆ, ಮತದಾನ ಮಾಡಿ ಮರಳುವವರು, ಬೇರೆಡೆಯಿಂದ ಬರುವವರು ಹೆಚ್ಚಾಗಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.