ಕೊಪ್ಪಳ: ಜಿಲ್ಲೆಯಲ್ಲಿ ಸರ್ವಶಿಕ್ಷಣ ಅಭಿಯಾನ ಯೋಜನೆ ಅಡಿಯಲ್ಲಿ ಕಂಪ್ಯೂಟರ್ ಆಧಾರಿತ ಕಲಿಕಾ ಕೇಂದ್ರ (ಸಿಎಎಲ್‌ಸಿ) ಕಾರ್ಯಕ್ರಮದಲ್ಲಿ ಕಂಪ್ಯೂಟರ್ ದುರಸ್ತಿ ನೆಪದಲ್ಲಿ ರೂ 46 ಲಕ್ಷ ಹಣ ದುರಪಯೋಗಕ್ಕೆ ಸಂಬಂಧಿಸಿದ ವಿಷಯ ಮಂಗಳವಾರ ಇಲ್ಲಿ ನಡೆದ ಜಿ.ಪಂ ಕೆಡಿಪಿ ಸಭೆಯಲ್ಲಿ ಪ್ರಸ್ತಾಪಗೊಂಡು ಸಂಬಂಧಿಸಿದ ಅಧಿಕಾರಿಗಳ ಮೇಲೆ ಶಿಸ್ತಿನ ಕ್ರಮ ಜರುಗಿಸುವುದಕ್ಕಾಗಿ ಸಮಗ್ರ ತನಿಖೆಗೆ ಸಮಿತಿ ರಚಿಸಲು ತೀರ್ಮಾನಿಸಲಾಯಿತು.
ಈ ವಿಷಯಕ್ಕೆ ಸಂಬಂಧಿಸಿದಂತೆ ಮಂಗಳವಾರದ ಸಂಚಿಕೆಯಲ್ಲಿ ಪ್ರಕಟವಾದ `ಪ್ರಜಾವಾಣಿ' ವರದಿ ಪ್ರದರ್ಶಿಸಿದ ಕೃಷಿ ಮತ್ತು ಕೈಗಾರಿಕೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ ಮೇಲಿನಮನಿ, ಸಂಬಂಧಿಸಿದ ಇಲಾಖೆ ಅಧಿಕಾರಿಯನ್ನು ತೀವ್ರ ತರಾಟಗೆ ತೆಗೆದುಕೊಂಡು, ಖರ್ಚಿನ ವಿವರ ನೀಡುವಂತೆ ಕೇಳಿದರು.
ಆದರೆ ಯೋಜನೆ ಅಧಿಕಾರಿಯಿಂದ ಸಮರ್ಪಕ ಉತ್ತರ ಬಾರದ ಕಾರಣ ಆಕ್ರೋಶಗೊಂಡು ತಪ್ಪಿತಸ್ಥ ಅಧಿಕಾರಿಯನ್ನು ಅಮಾನತುಗೊಳಿಸುವಂತೆ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಕೆ.ರವಿ ಅವರನ್ನು ಒತ್ತಾಯಿಸಿದರು.
ವಂತಿಗೆ ಹಾವಳಿ: ಜಿಲ್ಲೆಯಲ್ಲಿರುವ ಖಾಸಗಿ ಶಾಲೆಗಳಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ವಂತಿಗೆ ಹಾವಳಿ ವಿಪರೀತವಾಗಿರುವ ಬಗ್ಗೆ ಸಾಕಷ್ಟು ದೂರುಗಳು ಬಂದಿವೆ, ಅಂಥ ಸಂಸ್ಥೆಗಳ ಮೇಲೆ ಕ್ರಮ ತೆಗೆದುಕೊಂಡಿರುವುದನ್ನು ವಿವರಿಸುವಂತೆ ಸ್ಥಾಯಿ ಸಮಿತಿ ಅಧ್ಯಕ್ಷ ವಿನಯಕುಮಾರ ಮೇಲಿನಮನಿ ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಜಿ.ಎಚ್.ವೀರಣ್ಣ ಅವರನ್ನು ಪ್ರಶ್ನಿಸಿದರು.
ಅಲ್ಲದೇ ಯಾವ ಕಾಯ್ದೆ ಅಡಿಯಲ್ಲಿ ಕ್ರಮ ಜರುಗಿಸಬಹುದು ಎಂಬುದನ್ನು ಜಿ.ಪಂ ಸಿಇಒ ರವಿ ತಿಳಿಯಬಯಸಿದರು. ಆದರೆ ಡಿಡಿಪಿಐ ಅವರಿಂದ ಅದಕ್ಕೆ ಸಮರ್ಪಕ ಉತ್ತರ ಬರಲಿಲ್ಲ, ಈ ಸಂದರ್ಭದಲ್ಲಿ ಸಿಟ್ಟಿಗೆದ್ದ ಮೇಲಿನಮನಿ, `ನಿಮ್ಮ ಅಸಹಾಯಕತೆಯನ್ನು ನೋಡಿದರೆ ಖಾಸಗಿ ಶಿಕ್ಷಣ ಸಂಸ್ಥೆಗಳೊಂದಿಗೆ ನೀವೂ ಕೈಜೋಡಿಸಿ ಡೊನೆಷನ್‌ಗೆ ಪರೋಕ್ಷ ಪ್ರೋತ್ಸಾಹ ನೀಡುತ್ತಿರುವಂತಿದೆ ಎಂದು ಆರೋಪಿಸಿದರು.
ಹಂಗಾಮಿ ಅಧ್ಯಕ್ಷೆಯಾಗಿರುವ ಜಿ.ಪಂ ಉಪಾಧ್ಯಕ್ಷೆ ಅನ್ನಪೂರ್ಣಮ್ಮ ವಾಲ್ಮೀಕಿ ಅಧ್ಯಕ್ಷತೆ ವಹಿಸಿದ್ದರು. ಅಧಿಕಾರಿ ಟಿ.ಪಿ.ದಂಡಿಗದಾಸರ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.