ADVERTISEMENT

ಕನಕಗಿರಿ: ಜೂಜಾಟ ಅಡ್ಡೆಯಾದ ಉಪ ತಹಶೀಲ್ದಾರ್ ಕಚೇರಿ ಆವರಣ

​ಪ್ರಜಾವಾಣಿ ವಾರ್ತೆ
Published 1 ಜೂನ್ 2018, 13:40 IST
Last Updated 1 ಜೂನ್ 2018, 13:40 IST
ಕನಕಗಿರಿ ಉಪ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ನಿರುಪಯುಕ್ತ ಶೌಚಾಲಯ
ಕನಕಗಿರಿ ಉಪ ತಹಶೀಲ್ದಾರ್ ಕಚೇರಿ ಆವರಣದಲ್ಲಿರುವ ನಿರುಪಯುಕ್ತ ಶೌಚಾಲಯ   

ಕನಕಗಿರಿ: ಪಟ್ಟಣದ ಉಪ ತಹಶೀಲ್ದಾರ್ ಕಚೇರಿ ಆವರಣ ಜೂಜಾಟದ ಅಡ್ಡೆಯಾಗಿದೆ ಎಂದು ಅಲ್ಲಿನ ನಿವಾಸಿಗಳು ದೂರಿದ್ದಾರೆ. ಕಚೇರಿ ಆವರಣದಲ್ಲಿ ಗಿಡ ಮರಗಳು ಬೆಳೆದಿದ್ದು, ನೆರಳು ನೀಡುತ್ತಿವೆ. ವಿಶ್ರಾಂತಿ ನೆಪದಲ್ಲಿ ಇದನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದು, ಅಲ್ಲಿ ಯುವಕರು ಚೌಕಾಬಾರ, ಕ್ರಿಕೆಟ್‌ ಬೆಟ್ಟಿಂಗ್ ದಂಧೆಯಲ್ಲಿ ತೊಡಗುತ್ತಾರೆ.

ರಾತ್ರಿ ವೇಳೆ ಕುಡುಕರ ಹಾವಳಿ ಮಿತಿ ಮೀರುತ್ತದೆ. ಕಚೇರಿ ಆವರಣದಲ್ಲಿ ಜೂಜಾಟ ಆಡದಂತೆ ಮನವಿ ಮಾಡಿದರೂ ಕೇಳುತ್ತಿಲ್ಲ ಎಂದು ಗ್ರಾಮ ಸಹಾಯಕರು ತಿಳಿಸಿದರು.

ಉಪ ತಹಶೀಲ್ದಾರ್, ಕಂದಾಯ ನಿರೀಕ್ಷಕರು ಸೇರಿ ಕನಕಗಿರಿ, ಮುಸಲಾಪುರ, ಕನ್ನೇರಮಡಗು ಹಾಗೂ ಇತರೆ ಗ್ರಾಮಗಳ ಗ್ರಾಮ ಲೆಕ್ಕಾಧಿಕಾರಿಗಳ ಕೊಠಡಿಗಳು ಇಲ್ಲಿ ಇವೆ. ಪ್ರತಿ ದಿನ ವಿವಿಧ ಗ್ರಾಮಗಳ ನೂರಾರು ಜನ ಪಹಣಿ ತಿದ್ದುಪಡಿ, ಪಹಣಿ ವರ್ಗಾವಣೆ, ಭೂ ನ್ಯಾಯ, ಬೆಳೆ ಪರಿಹಾರ ಸೇರಿ ವಿವಿಧ ಸಮಸ್ಯೆಗಳ ಪರಿಹಾರಕ್ಕೆ ಕಚೇರಿಗೆ ಬರುತ್ತಾರೆ. ಇದರಿಂದ ಅವರಿಗೆ ತೊಂದರೆ ಆಗುತ್ತದೆ.
ಕೆಲ ವರ್ಷಗಳ ಹಿಂದೆ ಇದೇ ಸ್ಥಳದಲ್ಲಿ ನಡೆಯುತ್ತಿದ್ದ ಜೂಜಾಟದ ಅಡ್ಡೆ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ಆಗ ನಿಂತಿದ್ದ ದಂಧೆ ಮತ್ತೆ ಈಗ ತಲೆ ಎತ್ತಿದೆ ಎಂದು ಇಮಾಮಸಾಬ, ವೆಂಕಪ್ಪ ತಿಳಿಸಿದರು.

ADVERTISEMENT

ಕಚೇರಿ ಆವರಣ ಸಾರ್ವಜನಿಕ ಶೌಚಾಲಯವೂ ಆಗಿದೆ. ಮಹಿಳಾ ನೌಕರರನ್ನು ಲೆಕ್ಕಿಸದೆ ಮೂತ್ರ ವಿಸರ್ಜನೆ ಮಾಡುತ್ತಾರೆ. ಹೀಗಾಗಿ ಕಚೇರಿಗೆ ಬರುವುದು ಮುಜುಗರ ಎನ್ನಿಸುತ್ತದೆ ಎಂದು ಮಹಿಳಾ ಸಿಬ್ಬಂದಿ ಅಳಲು ತೋಡಿಕೊಂಡರು.

ರಾತ್ರಿ ವೇಳೆ ಇಲ್ಲಿ ಕುಡುಕರ ಹಾವಳಿ ಮಿತಿ ಮೀರುತ್ತದೆ. ಮದ್ಯ ಸೇವಿಸಿ ಬಾಟಲಿಗಳನ್ನು ಒಡೆದು ಹೋಗುತ್ತಾರೆ. ಮೊಬೈಲ್‌ಗಳಲ್ಲಿ ಹಾಡು ಹಾಕಿ ಕುಣಿಯುವ ಕಾರಣ ಈ ಪರಿಸರದಲ್ಲಿರುವ ಜನರಿಗೆ ನಿದ್ರೆ ಇಲ್ಲವಾಗಿದೆ ಎಂದು ಹುಸೇನಬೀ ಹೇಳಿದರು.

ಜೂಜಾಟದ ಸಮಸ್ಯೆ ಜತೆಗೆ ಕಟ್ಟಡ ದುಸ್ಥಿತಿಯನ್ನು ಕೇಳುವವರು ಇಲ್ಲದಂತಾಗಿದೆ. ಕೊಠಡಿಗಳು ದುರಸ್ತಿಯಲ್ಲಿದ್ದು ಮೇಲ್ಚಾವಣಿಗೆ ಹಾಕಿದ ಕಂಕರ್‌ ಕಿತ್ತು ಹೋಗಿದೆ. ಮಳೆ ಬಂದರೆ ಸೋರುತ್ತದೆ. ಕಾಗದ ಪತ್ರ ಉಳಿಸಿಕೊಳ್ಳುವುದು ಕಷ್ಟವಾಗಿದೆ. ಶೌಚಾಲಯ ನೀರಿಲ್ಲದ ಕಾರಣ ಬಳಕೆಯಾಗುತ್ತಿಲ್ಲ ಎಂದು ಸಿಬ್ಬಂದಿ ಅಳಲು ತೋಡಿಕೊಂಡರು.

**
ಜೂಜಾಡದಂತೆ ಸಾಕಷ್ಟು ಬಾರಿ ಎಚ್ಚರಿಕೆ ನೀಡಲಾಗಿದೆ. ಅಧಿಕಾರಿಗಳು ಕಚೇರಿಗೆ ಬಂದರೆ ಓಡಿ ಹೋಗುತ್ತಾರೆ ಇಲ್ಲದ ಸಮಯದಲ್ಲಿ ಮತ್ತೆ ಆರಂಭಿಸುತ್ತಾರೆ
– ವಿಜಯಕುಮಾರ ಚಿತ್ರಗಾರ, ಕಂದಾಯ ನಿರೀಕ್ಷಕ 

ಮೆಹಬೂಬಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.