ADVERTISEMENT

ಕನಕಗಿರಿ: ಮಹಾರಥೋತ್ಸವ ಇಂದು

​ಪ್ರಜಾವಾಣಿ ವಾರ್ತೆ
Published 2 ಏಪ್ರಿಲ್ 2013, 8:33 IST
Last Updated 2 ಏಪ್ರಿಲ್ 2013, 8:33 IST

ಕನಕಗಿರಿ: ದಕ್ಷಿಣ ಭಾರತದ ಪ್ರಸಿದ್ಧ ಜಾತ್ರೆಗಳಲ್ಲಿ ಒಂದಾದ ಇಲ್ಲಿನ ಲಕ್ಷ್ಮೀ ನರಸಿಂಹನ ಜಾತ್ರೆ ಇತಿಹಾಸದಲ್ಲಿ ತನ್ನದೆಯಾದ ಪ್ರಾಮುಖ್ಯತೆಯನ್ನು ಪಡೆದುಕೊಂಡಿದೆ.

ರಾಜ್ಯದಲ್ಲಿರುವ ಲಕ್ಷ್ಮೀ ನರಸಿಂಹ ದೇವಾಲಯಗಳಿಗೆ ಈ ದೇವಸ್ಥಾನ ಮೂಲ ಎಂದು ಇತಿಹಾಸದಿಂದ ತಿಳಿದು ಬರುತ್ತದೆ. ಶ್ರೀ ಮಧ್ವಾಳ್ವರ ಶಿಲಾ ಕೃತಿಗಳು ಇಲ್ಲಿ ಲಭ್ಯವಿದ್ದು ಶ್ರೀವೈಷ್ಣವರಿಗೆ ಪವಿತ್ರ ಸ್ಥಳ ಇದಾಗಿದೆ.
ಮೌರ‌್ಯ ಮತ್ತು ವಿಜಯನಗರ ಸಾಮ್ರಾಜ್ಯದಿಂದಲೂ ಈ ಸ್ಥಳವನ್ನು `ಸುವರ್ಣಗಿರಿ' ಹೇಮಗಿರಿ ಎಂದು ಕರೆಯಲಾಗುತ್ತದೆ.

ಹಿನ್ನೆಲೆ: ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಕಾಡು ಬೆಳೆದು ನಿರ್ಜನ ಪ್ರದೇಶವಾಗಿದ್ದಾಗ ಒಮ್ಮೆ ಸುರಿದ ಧಾರಾಕಾರ ಮಳೆ ಮತ್ತು ಪ್ರವಾಹದಿಂದ ಕೊಚ್ಚಿಹೋದ ಹುತ್ತವೊಂದರ ಸ್ಥಳದಲ್ಲಿ `ಲಿಂಗಾಕಾರ'ದ ಒಂದು ನುಣುಪಾದ ಗುಂಡು ಕಲ್ಲು ಹೊರಬಿದ್ದಿತ್ತು, ಇದನ್ನು ಕಂಡ ದನಗಾಯಿಗಳ ಮನಸ್ಸಿನಲ್ಲಿ ಗಾಢವಾದ ಭಕ್ತ ಮೂಡಿ ನೀರು, ಉತ್ತರಣಿ ಕಡ್ಡಿ, ತಂದು ಕಲ್ಲಿಗೆ ಹೂವು ಏರಿಸಿ ಪೂಜೆ ಸಲ್ಲಿಸಿದರು.

ಯಾವ ಶಿಲ್ಪಿಯ `ಉಳಿ' ತಗುಲದೇ ತಾನೇ ಉದ್ಭವಿಸಿದ ಗುಂಡುಗ್ಲ್ಲಲುನ್ನು ಭೂ ದೇವರು ಎಂದು ಕರೆಯಲಾಯಿತು, ಕನಕಗಿರಿ ಪ್ರದೇಶದಲ್ಲಿದ್ದರಿಂದ “ಕನಕರಾಯ” ಎಂದು ಹೆಸರಿಸಲಾಯಿತು ಎಂದು ತಿಳಿದು ಬರುತ್ತದೆ.

ಕನಕಮುನಿ: ಸ್ಕಂದ ಪುರಾಣದ ತುಂಗಾ ಮಹಾತ್ಮೆಯಲ್ಲಿ `ಸುವರ್ಣಗಿರಿ' ಕುರಿತು ಉಲ್ಲೇಖ ಇದೆ. ಕನಕ  ಹೆಸರಿನ ಮುನಿ ಪುಷ್ಪ, ಜಯಂತಿ, ಗೋಪಿಕಾ ನದಿಗಳ ದಡದಲ್ಲಿ ಕುಳಿತು ತಪಸ್ಸುಗೈದು `ಚಿನ್ನದ ಮಳೆ' ತರಿಸಿದ್ದರಿಂದ ಸುವರ್ಣಗಿರಿ ಎಂದು ಹೆಸರು ಬಂತು ಎನ್ನಲಾಗುತ್ತದೆ.
ಬೌದ್ಧ ಮತ ಪ್ರಸಾರ ಕೇಂದ್ರ: ದಕ್ಷಿಣ ಭಾರತದಲ್ಲಿ ಕನಕಗಿರಿಯು ಬೌದ್ಧ ಮತದ ಪ್ರಸಾರ ಕೇಂದ್ರವಾಗಿತ್ತು. ಕೊಪ್ಪಳ, ಮಸ್ಕಿಯಲ್ಲಿ ದೊರೆತ ಅಶೋಕನ ಕುರಿತಾದ ಶಾಸನಗಳು ಇದಕ್ಕೆ ಪುಷ್ಟಿ ನೀಡಿವೆ.

ದೇವಾಲಯದ ಗರ್ಭಗುಡಿಯನ್ನು ಪರಸಪ್ಪ ಉಡಿಚ ನಾಯಕನು ಕಟ್ಟಿಸಿದನು. ಈತನ ಶೌರ‌್ಯ, ಸಾಹಸ ಮೆಚ್ಚಿ ಪ್ರೌಢದೇವರಾಯ 12 ಗ್ರಾಮಗಳನ್ನು `ಉಂಬಳಿ'ಯಾಗಿ ನೀಡಿದನು. `ಪಂಚ ಕಳಸ ದರ್ಶನಂ, ಮಹಾ ಪಾಪ ವಿನಾಶಂ' ಎಂಬ ಉಕ್ತಿಯಂತೆ ಐದು ಕಳಸ ದರ್ಶನ ಮಾಡುವ ಭಾಗ್ಯ ಇಲ್ಲಿದೆ.
ಗರ್ಭಗುಡಿಯ ಎಲ್ಲಾ ಬಾಗಿಲುಗಳನ್ನು ಮುಚ್ಚಿದರೆ ಬಲ ಭಾಗದ ಬಾಗಿಲಿನ ಸಣ್ಣ ಕಿಂಡಿ ಮೂಲಕ ದಕ್ಷಿಣ ಭಾಗದ ಗೋಪುರ ಗೋಚರಿಸುವುದು ನೋಡುಗರಿಗೆ ಅಚ್ಚರಿ ಮೂಡಿಸುತ್ತದೆ.

ಕಲೆಯ ತವರೂರು: ಕನಕಗಿರಿಯು ಕಲೆ, ಸಂಸ್ಕೃತಿ, ಸಾಹಿತ್ಯದ ತವರೂರು. ಕನ್ನಡ ಮತ್ತು ಸಂಸ್ಕೃತ ಭಾಷೆಯಲ್ಲಿ ಪಾಂಡಿತ್ಯ ಪಡೆದ ಜಯ ವೆಂಕಟಚಾರ‌್ಯ, ಕವಿಗಳಾದ ಅಪರಾಳ ತಮ್ಮಣ್ಣ, ಚಿದಾನಂದ ಅವದೂತರು ಇಲ್ಲಿ ನೆಲಸಿದ್ದರು. `ಶ್ರೀ ಕೃಷ್ಣ ಪಾರಿಜಾತ' ಮಹಾಕಾವ್ಯ ಇಲ್ಲಿ ರಚನೆಯಾಗಿದೆ. ಕನ್ನಡ ಸಾಹಿತ್ಯ ಪ್ರಕಾರದಲ್ಲಿ ತೀರ ವಿರಳವಾದ ದಂಡಕ ಹಾಗೂ ಭಟ್ಟಂಗಿ ಸಾಹಿತ್ಯ ಪ್ರಕಾರಗಳನ್ನು ಸೃಷ್ಟಿಸಿದ ಕೀರ್ತಿ ಜಯವೆಂಕಟಾಚಾರ್ಯಗೆ ಸಲ್ಲುತ್ತದೆ.

ಪುರಂದರ ದಾಸರು ಕನಕಾಚಲನ್ನು ಕಂಡು `ದೇವರ ದೇವರು ನೀನೆಂದು, ಎನ್ನ ಕಾಯೋ ಕನಕಾಚಲ ಕೃಷ್ಣ ಕರುಣದಿ' ಎಂದು ಬೇಡಿದ್ದಾರೆ.
ಕನಕರಾಯನ ದರ್ಶನ ಮಾಡಿದವರಿಗೆ ಮನದೊಳಗಿದ್ದ ಮಹಾಭೀಷ್ಠೆ ಸಲ್ಲುವುದುದೆಂದು ವಿಜಯದಾಸರು ಹೇಳುತ್ತಾರೆ. ಶೃಂಗೇರಿಮಠದ ಶ್ರೀ ಶಂಕರಭಾರತಿಸ್ವಾಮಿ, ಶ್ರೀ ಪಂಚಮಿ ನರಸಿಂಹ ಭಾರತೀ ಸ್ವಾಮಿಗಳು ಇಲ್ಲಿಗೆ ಬಂದು ದರ್ಶನ ಪಡೆದಿದ್ದಾರೆ.

ರಥೋತ್ಸವ: ಎರಡನೇಯ ತಿರುಪತಿಯಾಗಿರುವ ಕನಕಗಿರಿಯ ಲಕ್ಷ್ಮೀ ನರಸಿಂಹ ರಥ ದಕ್ಷಿಣ ಭಾರತದಲ್ಲಿ ಅತಿ ಎತ್ತರದಾಗಿದೆ. ಈ ಮಹಾತೇರಿನ ನಿರ್ಮಾಣದ ಬಗ್ಗೆ ಜನಪದ ಹಾಡೊಂಡು ಹೀಗಿದೆ:
`ಕನಗೇರಿ ಕಿಲ್ಲೇವು ಮಳ ಮಳ ತುರೇವು/
       ಮಾಲ ಕಟ್ಟೈತಿ ಮಲ ಕೀಲೆ/ ಕನಕರಾಯನ
       ತೇರು ಕಟ್ಟೈತಿ ಗಗನಕ//     
ರಥಕ್ಕೆ ಆರು ಗಾಲಿಗಳಿವೆ, ಗಡ್ಡಿಯ ಮೇಲೆ ಐದು ಪ್ರಕಾರದ ಚಟ್ಟಗಳನ್ನು ಕಟ್ಟಿ, ತಳಿರು ತೋರಣ,  ಇತರೆ ಸುಂದರವಾದ ಗೊಂಬೆಗಳನ್ನು ಕಟ್ಟಲಾಗುತ್ತದೆ.    
-ಮೆಹಬೂಬ ಹುಸೇನ ಕನಕಗಿರಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.