ADVERTISEMENT

ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ತೆರೆ

​ಪ್ರಜಾವಾಣಿ ವಾರ್ತೆ
Published 10 ಜೂನ್ 2013, 9:50 IST
Last Updated 10 ಜೂನ್ 2013, 9:50 IST

ಯಲಬುರ್ಗಾ: ತಾಲ್ಲೂಕಿನ ಕರಮುಡಿ ಗ್ರಾಮದಲ್ಲಿ ಕಳೆದ ಎರಡು ದಿನಗಳಿಂದ ನಡೆದ ಕೊಪ್ಪಳ 6ನೆಯ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಭಾನುವಾರ ರಾತ್ರಿ ತೆರೆಬಿದ್ದಿತ್ತು. ಜಿಲ್ಲೆಯ ಹಿರಿಯ ಕಿರಿಯ ಸಾಹಿತಿಗಳ ಸಮ್ಮಿಲನಕ್ಕೆ ವೇದಿಕೆಯಾಗಿದ್ದ ಈ ಸಮ್ಮೇಳನ ವಿವಿಧ ಮಹತ್ವದ ವಿಷಯಗಳ ಅಭಿವ್ಯಕ್ತಿಗೆ ವೇದಿಕೆಯಾಗಿ ಪರಿಣಮಿಸಿತ್ತು.

ನಿರೀಕ್ಷೆಗೂ ಮೀರಿ ಯಶಸ್ವಿಯಾಗಿದ್ದಕ್ಕೆ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಪದಾಧಿಕಾರಿಗಳು ಕರಮುಡಿ ಗ್ರಾಮಸ್ಥರನ್ನ, ಸಾಹಿತ್ಯಾಸಕ್ತರನ್ನ, ಸಾಹಿತಿಗಳನ್ನ ಹಾಗೂ ವಿವಿಧ ಘಟಕಗಳ ಪರಿಷತ್ತಿನ ಪದಾಧಿಕಾರಿಗಳನ್ನು ಸ್ಮರಿಸುತ್ತಿದ್ದಾರೆ. ಮೊದಲ ದಿನದ ಅದ್ದೂರಿಯ ಮೆರವಣಿಗೆ, ವಿವಿಧ ಗೋಷ್ಠಿಗಳಲ್ಲಿ ಅರ್ಥಪೂರ್ಣ ವಿಷಯ ಮಂಡನೆ, ಭರ್ಜರಿ ಭೋಜನ ಹಾಗೂ ವಿವಿಧ ಪುಸ್ತಕಗಳ ಬಿಡುಗಡೆ ಹೀಗೆ ಸಾಹಿತ್ಯದ ಹಲವು ಮಜಲುಗಳ ಮೂಲಕ ಕರಮುಡಿಯಲ್ಲಿ ಕನ್ನಡ ಕಲರವ ಮಾದರಿಯಾಗಿತ್ತು.

ಗ್ರಾಮೀಣ ಪ್ರದೇಶದಲ್ಲಿ ಆಯೋಜಿಸಿದ್ದರಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನತೆ ಸೇರುತ್ತಾರೋ ಇಲ್ಲೋ ಎನ್ನುವ ಆತಂಕವನ್ನು ದೂರ ಮಾಡಿದ ಜಿಲ್ಲೆಯ ಸಾಹಿತಿಗಳು, ಹಾಗೂ ಸಾಹಿತ್ತಾಸಕ್ತರು ಸಂಭ್ರಮ ಸಡಗರದಿಂದ ಪಾಲ್ಗೊಂಡು ಕನ್ನಡ ಭಾಷೆ, ನಾಡು ನುಡಿ ರಕ್ಷಣೆಗೆ ಪ್ರೋತ್ಸಾಹಿಸುತ್ತಾ ಗ್ರಾಮೀಣ ಪ್ರದೇಶದ ಆತಿಥ್ಯವನ್ನು ಅತ್ಯಂತ ಪ್ರೀತಿಯಿಂದ ಸ್ವೀಕರಿಸಿದ್ದಾರೆ ಎಂಬ ಭಾವನೆಯನ್ನು ವ್ಯಕ್ತಪಡಿಸಿದ್ದ ಜಿಲ್ಲಾ ಕಸಾಪ ಅಧ್ಯಕ್ಷ ವೀರಣ್ಣ ನಿಂಗೋಜಿ, ಎರಡು ದಿನಗಳ ಕಾಲ ಕರಮುಡಿಯಲ್ಲಿ ಹಬ್ಬದ ವಾತಾವರಣ ಸೃಷ್ಟಿಯಾಗಿತ್ತು, ಗ್ರಾಮದ ಜನತೆ ಮನೆಯ ಕಾರ್ಯಕ್ರಮ ಎಂದು ಭಾವಿಸಿ ಪ್ರತಿಯೊಬ್ಬರು ತಮ್ಮಷ್ಟಕ್ಕೆ ತಾವು ತಿಳಿದು ಕೆಲಸ ಮಾಡಿ ಯಶಸ್ವಿಗೊಳಿಸಿದ್ದಾರೆ. ಈ ಯಶಸ್ಸು ಇನ್ನೂ ಹೆಚ್ಚಿನ ಜವಾಬ್ದಾರಿ ಹೊರುವ ಹುಮ್ಮಸ್ಸು ಮೂಡಿಸಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಅನೇಕ ಗಣ್ಯ ಮಾನ್ಯರ ಅನುಪಸ್ಥಿತಿಯಲ್ಲಿಯೂ ಒಳ್ಳೆಯ ಸಾಹಿತ್ಯ ಸಮ್ಮೇಳನ ನಡೆದಿದ್ದು, ತಾಲ್ಲೂಕಿಗೆ ಒಂದು ಕೀರ್ತಿ ಸಿಕ್ಕಂತಾಗಿದೆ. ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸೇರಿದ್ದರೆ ಇನ್ನೂ ಸೊಗಸಾಗಿರುತ್ತಿತ್ತು, ಪುಸ್ತಕ ಮಳಿಗೆಯಲ್ಲಿ ಪುಸ್ತಕಗಳ ಕೊರತೆಯನ್ನು ಹೊರತು ಪಡಿಸಿದರೆ ಉಳಿದಂತೆ ಎಲ್ಲವೂ ಚನ್ನಾಗಿ ನಡೆದಿದೆ ಎಂದು ನಿವೃತ್ತ ಮುಖ್ಯೋಪಾಧ್ಯಾಯ ಹೇಮಂತಪ್ಪ ಬಡಿಗೇರ ಅಭಿಪ್ರಾಯಪಟ್ಟಿದ್ದಾರೆ.

ನಿವೃತ್ತ ಶಿಕ್ಷಕರಿಗೆ, ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಮಾಡಿದ್ದು, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಸ್ಥಳೀಯ ಹಾಗೂ ಜಿಲ್ಲೆಯ ವಿವಿಧ ಪ್ರಾಕಾರದ ಕಲಾವಿದರಿಗೆ ಕಲೆ ಪ್ರದರ್ಶನಕ್ಕೆ ಅವಕಾಶ ಮಾಡಿಕೊಟ್ಟಿದ್ದು ಮೆಚ್ಚುಗೆಗೆ ಪಾತ್ರವಾಗಿದೆ ಎಂದು ಭಾಷಾಂತರ ಇಲಾಖೆಯ ಅಧಿಕಾರಿ ಲಲಿತ ಪ್ರಬಂದಕಾರ ಈರಪ್ಪ ಎಂ. ಕಂಬಳಿ ತಿಳಿಸಿದ್ದಾರೆ.

ಚುನಾಯಿತ ಪ್ರತಿನಿಧಿಗಳು ಆಗಮಿಸಿಲ್ಲ ಎಂಬ ಕಾರಣಕ್ಕೆ ಕೊಪ್ಪಳ ಜಿಲ್ಲೆಯ ಅಭಿವೃದ್ಧಿ ಸವಾಲುಗಳು ಕುರಿತ ಮೊದಲ ಗೋಷ್ಠಿ ರದ್ದುಪಡಿಸಿದ್ದು ಸ್ಥಳೀಯ ಸಾಹಿತ್ಯಾಸಕ್ತಿರಿಗೆ ಬೇಸರ ಮೂಡಿಸಿದೆ. ಇದು ಗೋಷ್ಠಿಯಲ್ಲಿ ಭಾಗವಹಿಸಲು ಸಿದ್ಧತೆ ಮಾಡಿಕೊಂಡಿದ್ದ ಬುದ್ದಿ ಜೀವಿಗಳಿಗೆ ನಿರಾಶೆಯನ್ನುಂಟು ಮಾಡಿದೆ ಎಂದು ಸ್ಥಳೀಯ ಹಿರಿಯ ಸಾಹಿತಿ ಮುನಿಯಪ್ಪ ಹುಬ್ಬಳ್ಳಿ ಅಸಮಧಾನ ವ್ಯಕ್ತಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.