ADVERTISEMENT

ಕಾಂಗ್ರೆಸ್‌ ಅಭ್ಯರ್ಥಿಯಿಂದ ರೋಡ್‌ ಶೋ

ಕೊಪ್ಪಳ ವಿಧಾನಸಭಾ ಕ್ಷೇತ್ರ: ಮೂರು ಬಾರಿ ನಾಮಪತ್ರ ಸಲ್ಲಿಸಿದ ರಾಘವೇಂದ್ರ ಹಿಟ್ನಾಳ್‌

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2018, 10:49 IST
Last Updated 24 ಏಪ್ರಿಲ್ 2018, 10:49 IST

ಕೊಪ್ಪಳ: ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ರಾಘವೇಂದ್ರ ಹಿಟ್ನಾಳ್‌ ಸೋಮವಾರ ರೋಡ್‌ ಷೋ ನಡೆಸಿದರು.

ಕಾಂಗ್ರೆಸ್‌ನ ಬಲಪ್ರದರ್ಶನದಂತಿದ್ದ ಈ ರೋಡ್‌ ಷೋನಲ್ಲಿ ಕಾಂಗ್ರೆಸ್‌ನ ಹಲವು ಮುಖಂಡರು ಹಾಗೂ ಸಾವಿರಾರು ಕಾರ್ಯಕರ್ತರು ಭಾಗಿ ಯಾಗಿದ್ದರು. ನಗರದ ಸಿರಸಪ್ಪಯ್ಯ ನಮಠದ ಆವರಣದಿಂದ ಆರಂಭ ವಾದ ಮೆರವಣಿಗೆ ಸಾವಿರಾರು ಕಾರ್ಯಕರ್ತರೊಂದಿಗೆ ಜವಾಹರ ರಸ್ತೆ, ಅಶೋಕ ವೃತ್ತದ ಮೂಲಕ ತಹಶೀಲ್ದಾರ್‌ ಕಚೇರಿವರೆಗೆ ನಡೆಯಿತು.

ರೋಡ್‌ ಷೋಗಾಗಿ ಅಂದು ಬೆಳಿಗ್ಗೆ 9 ಗಂಟೆಯಿಂದಲೇ ಮಠದ ಆವರಣದಲ್ಲಿ ಜನ ಜಮಾವಣೆಗೊಳ್ಳುತ್ತಿದ್ದರು. ಮುಖಂಡರು ತಮ್ಮ ತಮ್ಮ ಭಾಗಗಳಿಂದ ಕಾರ್ಯಕರ್ತರನ್ನು ಇಲ್ಲಿಗೆ ಕರೆ ತಂದರು. ಮಧ್ಯಾಹ್ನ 12.15ಕ್ಕೆ ಆರಂಭವಾದ ಮೆರವಣಿಗೆಗಾಗಿ ಜವಾಹರ ರಸ್ತೆಯನ್ನು ವಾಹನ ಮುಕ್ತಗೊಳಿಸಲಾಗಿತ್ತು. ಇದರಿಂದಾಗಿ ನಗರದ ಸಿಂಪಿಲಿಂಗಣ್ಣ ಹಾಗೂ ಸಾಲಾರ್‌ಜಂಗ್‌ ರಸ್ತೆಯಲ್ಲಿ ಹೆಚ್ಚಿನ ವಾಹನ ದಟ್ಟಣೆ ಕಂಡುಬಂತು. ಸುಗಮ ಸಂಚಾರಕ್ಕಾಗಿ ಪೊಲೀಸರು ಹೆಚ್ಚಿನ ಶ್ರಮವಹಿಸಿದರು. 

ADVERTISEMENT

ಬಿಳಿ ಬಣ್ಣದ ಅರ್ಧ ತೋಳಿನ ಅಂಗಿ ಧರಿಸಿದ್ದ ರಾಘವೇಂದ್ರ ಹಿಟ್ನಾಳ್‌ ತೆರೆದ ವಾಹನದಲ್ಲಿ ಪಕ್ಷದ ಮುಖಂಡರೊಂದಿಗೆ ಜನರತ್ತ ಕೈಬೀಸುತ್ತ ಸಾಗಿದರು. ಮೆರವಣಿಗೆಯ ಕೆಲವೆಡೆ ಅಭ್ಯರ್ಥಿಗೆ ಹೂಮಾಲೆ, ಪುಷ್ಪವೃಷ್ಟಿಗರೆಯಲಾಯಿತು. ಕೆಲ ವೃತ್ತಗಳಲ್ಲಿ ಪಟಾಕಿ ಸಿಡಿಸಿ ಸಂಭ್ರಮಿಸಿದರು. ಮೆರವಣಿಗೆಯಲ್ಲಿ ಭಾಗವಹಿಸಿದ್ದ ಕಾರ್ಯಕರ್ತರು ಪಕ್ಷದ ಧ್ವಜ, ಟೋಪಿ ಮತ್ತು ಶಾಲು ಧರಿಸಿ, ಅಭ್ಯರ್ಥಿ ಪರ ಘೋಷಣೆ ಕೂಗಿದರು.

ಮಧ್ಯಾಹ್ನದ ನಮಾಜ್‌ನ ಆಜಾನ್‌ ಕೇಳಿದ್ದರಿಂದ ಯೂಸೂಫಿಯಾ ಮಸೀದಿ ಬಳಿ ಮೆರವಣಿಗೆಯನ್ನು ಕೆಲ ಕಾಲ ಸ್ಥಗಿತಗೊಳಿಸಲಾಯಿತು. ಕಾರ್ಯಕರ್ತರಿಗೆ ಅಲ್ಲಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಉರಿಬಿಸಿಲಿನಿಂದಾಗಿ ರ‍್ಯಾಲಿ ಆರಂಭಗೊಂಡ ಕೆಲವೇ ಸಮಯದಲ್ಲಿ ಮಹಿಳೆಯರು ತಮ್ಮ ಮಕ್ಕಳೊಂದಿಗೆ ತಮ್ಮ ಮನೆಯತ್ತ ಹೆಜ್ಜೆ ಹಾಕಿದ್ದು ಕಂಡುಬಂತು. ಅಲ್ಲದೆ ಕೆಲ ಕಾರ್ಯಕರ್ತರು ನೆರಳು ಕಂಡಲ್ಲಿ ಕೊಂಚ ವಿಶ್ರಾಂತಿ ಪಡೆದು ಮುಂದೆ ಸಾಗುವುದು ಕಂಡು ಬಂತು.

ಹೆಚ್ಚಿನ ಸಂಖ್ಯೆಯಲ್ಲಿ ನಗರಕ್ಕೆ ಜನ ಆಗಮಿಸಿದ್ದರಿಂದ ನಗರದ ಬಹುತೇಕ ಹೋಟೆಲ್‌, ಖಾನಾವಳಿ, ಪಾನೀಯ ಅಂಗಡಿಗಳು ಜನರಿಂದ ತುಂಬಿದ್ದವು. ಮೆರವಣಿಗೆ ಬಳಿಕ ತಹಶೀಲ್ದಾರ್‌ ಕಚೇರಿಯಲ್ಲಿ ಅಭ್ಯರ್ಥಿ ತಮ್ಮ ಮುಖಂಡರೊಡನೆ ಚುನಾವಣಾಧಿಕಾರಿ ಸಿ.ಡಿ.ಗೀತಾ ಅವರಿಗೆ ನಾಮಪತ್ರ ಸಲ್ಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.