ADVERTISEMENT

ಕಿನ್ನಾಳ ಗೇಟ್‌ನಲ್ಲಿ ಸೇತುವೆ ನಿರ್ಮಿಸಲು ಒತ್ತಾಯ

​ಪ್ರಜಾವಾಣಿ ವಾರ್ತೆ
Published 1 ಅಕ್ಟೋಬರ್ 2012, 19:30 IST
Last Updated 1 ಅಕ್ಟೋಬರ್ 2012, 19:30 IST

ಕೊಪ್ಪಳ: ನಗರದಲ್ಲಿ ಕಿನ್ನಾಳ ರಸ್ತೆಯಲ್ಲಿರುವ ಲೆವೆಲ್ ಕ್ರಾಸಿಂಗ್ 64ರಲ್ಲಿ (ಕಿನ್ನಾಳ ಗೇಟ್) ಸೇತುವೆ ನಿರ್ಮಿಸಬೇಕು ಎಂದು ಒತ್ತಾಯಿಸಿ ಕೊಪ್ಪಳ- ಕಿನ್ನಾಳ ರೈಲ್ವೆ ಗೇಟ್ 64 ಹೋರಾಟ ಸಮಿತಿ ಸದಸ್ಯರು ಸೋಮವಾರ ಪ್ರತಿಭಟನೆ ನಡೆಸಿದರು.

ಹೋರಾಟವನ್ನು ಬೆಂಬಲಿಸಿ ಮಾತನಾಡಿದ ಮಾಜಿ ಶಾಸಕ ಕೆ.ಬಸವರಾಜ ಹಿಟ್ನಾಳ್, ಕಿನ್ನಾಳ ಗೇಟ್‌ನಲ್ಲಿ ಸೇತುವೆ ನಿರ್ಮಾಣ ಮಾಡುವಂತೆ ಕೋರಿ ಪಕ್ಷದ ನಿಯೋಗವೊಂದು ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಿದೆ ಎಂದು ಭರವಸೆ ನೀಡಿದರು. ರಾಜ್ಯ ಸರ್ಕಾರವೂ ತನ್ನ ಪಾಲಿನ ಹಣ ನೀಡಬೇಕು. ತಪ್ಪಿದಲ್ಲಿ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದು ಎಚ್ಚರಿಸಿದರು.

ಹೋರಾಟ ಸಮಿತಿ ಗೌರವಾಧ್ಯಕ್ಷರ ಪೈಕಿ ಎಚ್.ಎಸ್.ಪಾಟೀಲ ಮಾತನಾಡಿ, ಸೇತುವೆ ನಿರ್ಮಾಣಕ್ಕೆ ಸಂಬಂಧಿಸಿದ ಹೋರಾಟಕ್ಕೆ ಈ ಭಾಗದ ಜನಪ್ರತಿನಿಧಿಗಳು ಸ್ಪಂದಿಸಬೇಕು. ಇಲ್ಲದೇ ಹೋದರೆ ಹೋರಾಟ ತೀವ್ರ ಸ್ವರೂಪ ಪಡೆದುಕೊಳ್ಳುತ್ತದೆ ಎಂದರು.

ರೈಲು ಮಾರ್ಗದಲ್ಲಿ ಲೆವೆಲ್ ಕ್ರಾಸಿಂಗ್‌ಗಳು ಇರಬಾರದು ಎಂಬ ಬಗ್ಗೆ ರೈಲ್ವೆ ಇಲಾಖೆ ನಿರ್ಣಯ ಕೈಗೊಂಡಿದೆ. ಈ ಹಿನ್ನೆಲೆಯಲ್ಲಿ ಕಿನ್ನಾಳ ಗೇಟ್‌ನಲ್ಲಿ ರಸ್ತೆ ಮೇಲು ಸೇತುವೆ ಇಲ್ಲವೇ ಕೆಳ ಸೇತುವೆ ನಿರ್ಮಾಣಕ್ಕೆ ಅನುಕೂಲವಾಗುವಂತೆ ಹೊಸದಾಗಿ ಪ್ರಸ್ತಾವನೆ ಸಲ್ಲಿಸಬೇಕು ಸಮಿತಿ ಮುಖಂಡರು ಒತ್ತಾಯಿಸಿದರು.

ಹೋರಾಟ ಸಮಿತಿ ಗೌರವ ಅಧ್ಯಕ್ಷ ವಿರೂಪಾಕ್ಷಪ್ಪ ಅಗಡಿ, ಅಧ್ಯಕ್ಷ ಅಲ್ಲಮಪ್ರಭು ಬೆಟ್ಟದೂರು, ಕಾರ್ಯಾಧ್ಯಕ್ಷರಾದ ಜಾಕಿರ್ ಹುಸೇನ್ ಕಿಲ್ಲೇದಾರ್, ಪ್ರಶಾಂತ ರಾಯ್ಕರ್, ಉಪಾಧ್ಯಕ್ಷ ವೈಜನಾಥ್ ದಿವಟರ್, ಖಜಾಂಚಿ ಯಲ್ಲಪ್ಪ ಕಾಟ್ರಹಳ್ಳಿ, ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಕೆ.ರಾಘವೇಂದ್ರ ಹಿಟ್ನಾಳ್, ಬಿಎಸ್‌ಆರ್ ಕಾಂಗ್ರೆಸ್ ಮುಖಂಡ ಕೆ.ಎಂ.ಸೈಯದ್ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.