ADVERTISEMENT

ಕುಡಿತ ವಿರೋಧಿ ಫಲಕಕ್ಕೂ

​ಪ್ರಜಾವಾಣಿ ವಾರ್ತೆ
Published 14 ಮಾರ್ಚ್ 2011, 7:05 IST
Last Updated 14 ಮಾರ್ಚ್ 2011, 7:05 IST

ಕುಷ್ಟಗಿ: ಮದ್ಯಪಾನ (ಕುಡಿತ)ದಿಂದ ಆಗುವ ಅನಾಹುತಗಳ ಬಗ್ಗೆ ಜನತೆಯ  ಮನಮುಟ್ಟುವ ರೀತಿಯಲ್ಲಿ ಸಾರಬೇಕಿದ್ದ ಮಹಾತ್ಮ ಗಾಂಧೀಜಿ ಅವರ ಸಂದೇಶದ ಗೋಡೆಫಲಕ ಬೆಳಗಾಗುವುದರೊಳಗೆ ನೆಲಕಚ್ಚಿದ್ದು ಭಾನುವಾರ ಇಲ್ಲಿಯ ತಾಲ್ಲೂಕು ಪಂಚಾಯಿತಿ ಆವರಣದಲ್ಲಿ ಕಂಡುಬಂದಿತು.

ಕರ್ನಾಟಕ ಮದ್ಯಮಾನ ಸಂಯಮ ಮಂಡಳಿಗೆ ಸೇರಿದ ಈ ಫಲಕದಲ್ಲಿ ‘ಬೆಂಕಿ ದೇಹವನ್ನು ಸುಟ್ಟರೆ ಕುಡಿತ ದೇಹ ಮತ್ತು ಆತ್ಮ ಎರಡನ್ನೂ ನಾಶಮಾಡುತ್ತದೆ’, ‘ಕುಡಿತ ಆರೋಗ್ಯ ಮತ್ತು ಬುದ್ಧಿಗೆ ಮಾರಕ’ ಎಂಬ ಮಹಾತ್ಮ ಗಾಂಧಿಯವರ ಸಂದೇಶ ಮುದ್ರಿಸಲಾಗಿದೆ.

ಹೆಚ್ಚಿಗೆ ಜನ ಬಂದುಹೋಗುವ ಸರ್ಕಾರಿ ಕಚೇರಿ, ಸಾರ್ವಜನಿಕ ಸ್ಥಳಗಳಲ್ಲಿ ಈ ಫಲಕಗಳನ್ನು ಅಳವಡಿಸುವ ಮೂಲಕ ‘ಮದ್ಯಪ್ರಿಯ’ರನ್ನು ಚಟದಿಂದ ಮುಕ್ತರನ್ನಾಗಿಸುವ ಸದಾಶಯ ಮದ್ಯಪಾನ ಸಂಯಮ ಮಂಡಳಿಯದ್ದಾಗಿದೆ. ಆದರೆ ಈ ರೀತಿ ಬೇಕಾಬಿಟ್ಟಿಯಾಗಿ ಫಲಕಗಳನ್ನು ಅಳವಡಿಸಲು ಮುಂದಾಗಿರುವ ಮಂಡಳಿಯೇ ಅಮಲಿನಲ್ಲಿ ಇರುವಂತಿದೆ ಎಂಬ ಅಸಮಾಧಾನವನ್ನು ಸಾರ್ವಜನಿಕರು ವ್ಯಕ್ತಪಡಿಸಿದರು.

ಫ್ಲೆಕ್ಸ್‌ಗಳು ಬಂದ ನಂತ ಇಂಥ ಅದ್ವಾನಗಳು ಸಾಮಾನ್ಯವಾಗಿವೆ. ಒಂದು ವಾರವೂ ಗೋಡೆ ಅಥವಾ ಬೋರ್ಡ್‌ಗೆ ಅಂಟಿಕೊಳ್ಳದ ಇಂಥ ಪ್ಲಾಸ್ಟಿಕ್ ಫಲಕಕ್ಕೆ ಸರ್ಕಾರ ಲೆಕ್ಕದಲ್ಲಿ ಸಹಸ್ರಾರು ರೂಪಾಯಿ ವೆಚ್ಚ ತಗುಲಿರುತ್ತದೆ. ಆದರೆ ಒಬ್ಬ ಪೇಂಟರ್‌ಗೆ ಹೇಳಿದ್ದರೆ ತೀರಾ ಕಡಿಮೆ ವೆಚ್ಚದಲ್ಲಿ ಗೋಡೆ ಮೇಲೆ ಅಂದವಾಗಿ ಬರಹವನ್ನು ಬರೆಯುತ್ತಿದ್ದ. ಅಷ್ಟೇ ಅಲ್ಲ ಅಳಿಸಿಹೋಗದೇ ಬಹುದಿನಗಳವರೆಗೂ ಸಂದೇಶ ಗೋಡೆ ಮೇಲೆ ಉಳಿಯುತ್ತಿತ್ತು. ಮದ್ಯಪಾನ ಸಂಯಮ ಮಂಡಳಿಯ ಈ ಕಾಟಾಚಾರದ ಕೆಲಸಕ್ಕೆ ಬೇರೆ ಸಾಕ್ಷಿ ಬೇಕೆ? ಎಂಬುದು ಜನರ ಪ್ರಶ್ನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.