ಕುಷ್ಟಗಿ: ಗ್ರಾಮಿಣ ಪ್ರದೇಶದಲ್ಲಿರುವ ಜನಸಾಮಾನ್ಯರಿಗೆ ಕಾನೂನಿನ ಅರಿವು ಮೂಡಿಸಲು ತಾಲ್ಲೂಕಿನ ವಿವಿಧ ಗ್ರಾಮಗಳಲ್ಲಿ ಸಂಚರಿಸಲು ಹೊರಟ `ಕಾನೂನು ಸಾಕ್ಷರತಾ ರಥ~ ಸಂಚಾರಕ್ಕೆ ಬುಧವಾರ ಚಾಲನೆ ನೀಡಲಾಯಿತು.
ಇಲ್ಲಿಯ ನ್ಯಾಯಾಲಯದ ಆವರಣದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ವಿಶೇಷವಾಗಿ ಸಿದ್ಧಪಡಿಸಲಾಗಿರುವ ವಾಹನಕ್ಕೆ ಇಲ್ಲಿಯ ಪ್ರಧಾನ ಸಿವಿಲ್ ನ್ಯಾಯಾಧೀಶ ವಿ.ವೆಂಕಟೇಶಪ್ಪ ಹಸಿರು ನಿಶಾನೆ ತೋರಿಸುವ ಮೂಲಕ ಸಂಚಾರಕ್ಕೆ ಅನುವುಮಾಡಿಕೊಟ್ಟರು.
ಈ ಸಂದರ್ಭದಲ್ಲಿ ಹಿರಿಯ ವಕೀಲರಾದ ಎಂ.ಎಂ.ಹಿರೇಮಠ, ನಾಗಪ್ಪ ಸೂಡಿ, ಆರ್.ಕೆ.ದೇಸಾಯಿ, ಉಪ್ಪಿನ, ಡಿ.ಗೋಪಾಲರಾವ್ ಇತರೆ ವಕೀಲರು, ಸಬ್ ಇನ್ಸ್‌ಪೆಕ್ಟರ್ ನಾರಾಯಣ ದಂಡಿನ ಹಾಜರಿದ್ದರು.
ಗ್ರಾಮೀಣ ಪ್ರದೇಶದಲ್ಲಿ ಸಂಚರಿಸುವ ಈ ವಾಹನದ ಮೂಲಕ ಜನರಿಗೆ ಕಾನೂನಿನ ತಿಳುವಳಿಕೆ ಅವಶ್ಯಕತೆ ಕುರಿತು ಮಾಹಿತಿ ನೀಡಲಾಗುತ್ತಿದೆ ಎಂದು ತಿಳಿಸಲಾಯಿತು.
ಏ.20ರಂದು ಬೆಳಿಗ್ಗೆ 10 ಗಂಟೆಗೆ ನಂದಾಪುರ ಸಮುದಾಯಭವನದಲ್ಲಿ, ಮಧ್ಯಾಹ್ನ 2 ಗಂಟೆಗೆ ಕಿಲಾರಟ್ಟಿ ಗ್ರಾ.ಪಂ ಕಚೇರಿಯಲ್ಲಿ ಮತ್ತು ಸಂಜೆ 5 ಗಂಟೆಗೆ ವೆಂಕಟೇಶ್ವರ ಕಲ್ಯಾಣ ಮಂಟಪ ತಾವರಗೇರಾದಲ್ಲಿ ನಡೆಯಲಿರುವ ಕಾನೂನು ವಿದ್ಯಾಪ್ರಸಾರ ಕಾರ್ಯಕ್ರಮಗಳನ್ನು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್ಯಕ್ಷರೂ ಆಗಿರುವ ಹಿರಿಯ ಸಿವಿಲ್ ನ್ಯಾಯಾಧೀಶ ಎಂ.ಎಚ್.ಶಿರವಾಳಕರ ಉದ್ಘಾಟಿಸುವರು. ನ್ಯಾಯಾಧೀಶ ವಿ.ವೆಂಕಟೇಶಪ್ಪ ಹಾಗೂ ಇತರೆ ಚುನಾಯಿತ ಪ್ರತಿನಿಧಿಗಳು, ಅಧಿಕಾರಿಗಳು, ವಕೀಲರು ಉಪಸ್ಥಿತರಿರುವರು ಎಂದು ಪ್ರಕಟಣೆ ತಿಳಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.