ADVERTISEMENT

ಕುಷ್ಟಗಿ: ಬಂದ್‌ಅಪೂರ್ಣ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 7:00 IST
Last Updated 7 ಅಕ್ಟೋಬರ್ 2012, 7:00 IST

ಕುಷ್ಟಗಿ:  ತಮಿಳುನಾಡಿಗೆ ಕಾವೇರಿ ನೀರು ಹರಿಸಿದ್ದನ್ನು ವಿರೋಧಿಸಿ ವಿವಿಧ ಕನ್ನಡಪರ ಸಂಘಟನೆಗಳು ಶನಿವಾರ ಕರೆ ನೀಡಿದ್ದ `ಕರ್ನಾಟಕ ಬಂದ್~ಗೆ ಇಲ್ಲಿ ಉತ್ತಮ ಪ್ರತಿಕ್ರಿಯೆ  ವ್ಯಕ್ತವಾಗಲಿಲ್ಲ, ಅಲ್ಲದೇಜನಜೀವನ ಯಥಾಸ್ಥಿತಿಯಲ್ಲಿದ್ದುದರಿಂದ ಬಂದ್ ಸಫಲವಾಗಲಿಲ್ಲ.

ಸ್ಥಳೀಯ ಘಟಕದ ಸಾರಿಗೆ, ಖಾಸಗಿ ವಾಹನಗಳ ವ್ಯವಸ್ಥೆ ಯಥಾರೀತಿ ಇದ್ದರೆ ಪ್ರಯಾಣಿಕರ ಸಂಖ್ಯೆ ಕಡಿಮೆ ಇತ್ತು, ದೂರದ ಊರಿನ ಬಸ್‌ಗಳು ಮಧ್ಯಾಹ್ನದ ವೇಳೆಗೆ ಸಂಚಾರ ಆರಂಭಿಸಿದವು.

 ಅನ್ಯ ರಾಜ್ಯದವರಿಗೆ ಸೇರಿದ ಬೆರಳೆಣಿಕ ಅಂಗಡಿಗಳು ಮುಚ್ಚಿದ್ದನ್ನು ಬಿಟ್ಟರೆ ಉಳಿದಂತೆ ಪಟ್ಟಣದಲ್ಲಿ ಇತರೆ ಎಲ್ಲ ಅಂಗಡಿ ಮುಂಗಟ್ಟುಗಳು, ಹೋಟೆಲ್‌ಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ವ್ಯಾಪಾರ ವಹಿವಾಟು ಉತ್ತಮವಾಗಿತ್ತು, ಹಾಗಾಗಿ ಸಾರ್ವಜನಿಕರಿಗೆ ಬಂದ್‌ನ ಬಿಸಿ ತಟ್ಟಲಿಲ್ಲ.

ಕರ್ನಾಟಕ ಬಂದ್‌ಗೆ ಬೆಂಬಲ ವ್ಯಕ್ತಪಡಿಸಿದ ಇಲ್ಲಿಯ ವಕೀಲರ ಸಂಘದ ಸದಸ್ಯರು ಅಧ್ಯಕ್ಷ ನಾಗಪ್ಪ ಸೂಡಿ ಅವರ ನೇತೃತ್ವದಲ್ಲಿ ಕೋರ್ಟ್ ಕಲಾಪ ಬಹಿಷ್ಕರಿಸಿದ್ದರೆ, ಕರವೇ (ಶೆಟ್ಟಿ ಬಣ) ಕಾರ್ಯಕರ್ತರು ತಮಿಳುನಾಡಿಗೆ ನೀರು ಬಿಟ್ಟಿದ್ದನ್ನು ಖಂಡಿಸಿ ತಹಸೀಲ್ದಾರರ ಮೂಲಕ ರಾಜ್ಯ ಸರ್ಕಾರಕ್ಕೆ ಪ್ರತಿಭಟನಾಪತ್ರ ಸಲ್ಲಿಸಿದರು.
ಅಧ್ಯಕ್ಷ ಅಜ್ಜಪ್ಪ ಕರಡಕಲ್, ಆರಿಫ್ ಮುಲ್ಲಾ, ಮಹೆಬೂಬ್ ಕಮ್ಮಾರ, ರಾಘವೇಂದ್ರ ಭಜಂತ್ರಿ ಮೊದಲಾದವರು ಇದ್ದರು.

ಆದರೆ ಪಟ್ಟಣದಲ್ಲಿನ ಇತರೆ ಯಾವುದೇ ಸಂಘಟನೆಗಳು ಬೀದಿಗಿಳಿದಿದ್ದು ಕಂಡುಬರಲಿಲ್ಲ.
ಶಾಲಾ ಕಾಲೇಜುಗಳು, ಸರ್ಕಾರಿ ಕಚೇರಿಗಳು ಎಂದಿನಂತೆ ತೆರೆದಿದ್ದವು. ಮುಂಜಾಗ್ರತೆಗಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ವ್ಯವಸ್ಥೆ ಕಲ್ಪಿಸಲಾಗಿತ್ತಾದರೂ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ. ಒಟ್ಟಾರೆ ಸಾರ್ವಜನಿಕರಿಗೆ ಬಂದ್ ಅನುಭವಕ್ಕೆ ಬರಲಿಲ್ಲ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.