ಕನಕಗಿರಿ: ಮುಂಬರುವ ವಿಧಾನಸಭಾ ಚುನಾವಣೆಯನ್ನು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರ ನೇತೃತ್ವದಲ್ಲಿ ಎದುರಿಸಿದರೆ ಮಾತ್ರ ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ ಎಂದು ಮಾಜಿ ಸಚಿವ, ಶಾಸಕ ಶಿವನಗೌಡ ನಾಯಕ ತಿಳಿಸಿದರು.
ಇಲ್ಲಿಗೆ ಸಮೀಪದ ಹುಲಿಹೈದರ ಗ್ರಾಮದಲ್ಲಿ ಭಾನುವಾರ ನಡೆದ ಗುತ್ತಿಗೆದಾರ ನರಸಿಂಹ ನಾಯಕ ಅವರ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಂತರ ಅವರು ಪತ್ರಕರ್ತರೊಂದಿಗೆ ಮಾತನಾಡಿದರು.
ರಾಜ್ಯದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿದವರಲ್ಲಿ ಯಡಿಯೂರಪ್ಪ ಮೊದಲಿಗರು, ಈ ಹಿಂದಿನ ವಿಧಾನಸಭಾ ಚುನಾವಣೆ ಸಹ ಅವರ ನೇತೃತ್ವದಲ್ಲಿ ಎದುರಿಸಿದ್ದರಿಂದಲೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂತು, ಅವರೊಬ್ಬ ಪ್ರಶ್ನಾತೀತ ಹಾಗೂ ಸರ್ವ ಜಾತಿಯ ನಾಯಕ ಎಂದು ಬಣ್ಣಿಸಿದರು.
ಯಡಿಯೂರಪ್ಪರ ವಿರುದ್ಧವೆ ಬಂಡಾಯ ಎದ್ದು ನೀವು ಶಾಸಕತ್ವ ಕಳೆದುಕೊಂಡು ವನವಾಸ ಅನುಭವಿಸಿದಿರಲ್ಲ ಎಂದು `ಪ್ರಜಾವಾಣಿ~ ಪ್ರಶ್ನಿಸಿದಾಗ ಅದು ಮುಗಿದ ವಿಷಯ, ಈಗ ಯಡಿಯೂರಪ್ಪನವರೆ ನಮ್ಮ ನಾಯಕ ಎಂದು ತಿಳಿಸಿದರು.
ಸದಾನಂದಗೌಡ, ಈಶ್ವರಪ್ಪ ನೇತೃತ್ವದಲ್ಲಿ ಚುನಾವಣೆ ಬೇಡವೆ ಎಂದಾಗ ರಾಜ್ಯದಲ್ಲಿ ಶೇ. 90 ರಷ್ಟು ವೀರಶೈವ ಜನಾಂಗ ಬಿಜೆಪಿಗೆ ಬೆಂಬಲಿಸಿದೆ, ಯಡಿಯೂರಪ್ಪನವರಿಗೆ ತಮ್ಮದೆಯಾದ ಓಟ ಬ್ಯಾಂಕ್ ಇದೆ, ಅವರ ಮುಖಂಡತ್ವದಲ್ಲಿಯೆ ಚುನಾವಣೆ ನಡೆಯಬೇಕೆಂಬುದು ಬಹುತೇಕರ ಒತ್ತಾಸೆಯಾಗಿದೆ ಎಂದು ನಾಯಕ ಹೇಳಿದರು.
ಮುಖ್ಯಮಂತ್ರಿ ಸದಾನಂದಗೌಡರು ಸಚಿವ ಸಂಪುಟ ವಿಸ್ತರಣೆ ಮಾಡಿ ಆದ್ಯತೆ ದೊರೆಯದ ಜಿಲ್ಲೆಗಳಿಗೆ ಸಚಿವ ಸ್ಥಾನ ನೀಡಬೇಕೆಂಬುದು ತಾವು ಒತ್ತಾಯಿಸಿದ್ದೇವೆ, ಸಾಮಾಜಿಕ ನ್ಯಾಯ ಹಾಗೂ ಭೌಗೋಳಿಕ ಆಧಾರದ ಮೇಲೆ ಸಚಿವ ಸ್ಥಾನ ನೀಡಬೇಕು ಎಂದು ಅವರು ಆಗ್ರಹಿಸಿದರು.
ಆಂತರಿಕ ಕಚ್ಚಾಟದ ಮಧ್ಯೆಯೂ ಬಿಜೆಪಿ ಸರ್ಕಾರ ಉತ್ತಮ ಕೆಲಸಗಳನ್ನು ಮಾಡಿದೆ, ಈಚೆಗೆ ಪದವೀಧರ ವಿಧಾನ ಪರಿಷತ್ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತದಾರರು ಬೆಂಬಲಿಸಿದ್ದಾರೆ, ಡಿಸೆಂಬರ್‌ನಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ ಎಂಬುದು ಸತ್ಯಕ್ಕೆ ದೂರವಾದ ಸಂಗತಿ, ಅವಧಿ ಪೂರ್ಣಗೊಂಡ ನಂತರವೆ ಚುನಾವಣೆ ನಡೆಯಲಿವೆ ಎಂದು ತಿಳಿಸಿದರು.
ಶಾಸಕ ಶಿವರಾಜ ತಂಗಡಗಿ, ಮಾಜಿ ಶಾಸಕರಾದ ವೀರಪ್ಪ ಕೇಸರಹಟ್ಟಿ, ದೊಡ್ಡನಗೌಡ ಪಾಟೀಲ ಕುಷ್ಟಗಿ, ಪ್ರಮುಖರಾದ ಕೆ. ಮಹೇಶ, ಹನುಮೇಶ ನಾಯಕ ಇತರರು ಹಾಜರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.