ADVERTISEMENT

ತೆರೆದ ಕೊಳವೆ ಬಾವಿಗಳಿಗೆ ಮುಕ್ತಿ

ಪ್ರಜಾವಾಣಿ ಫಲಶ್ರುತಿ

​ಪ್ರಜಾವಾಣಿ ವಾರ್ತೆ
Published 17 ಜೂನ್ 2013, 11:54 IST
Last Updated 17 ಜೂನ್ 2013, 11:54 IST

ಹನುಮಸಾಗರ: ಹನುಮಸಾಗರ ಸುತ್ತಮುತ್ತಲಿನ ಹಳ್ಳಿಗಳಲ್ಲಿನ ರಸ್ತೆ ಬದಿಗಳಲ್ಲಿ ತೆರೆದ ಕೊಳವೆಬಾವಿಗಳು ಕಂಡು ಬಂದಿದ್ದು ಸಾರ್ವಜನಿಕರ ಆತಂಕಗೊಂಡಿದ್ದರು.

ಈ ವಿಷಯವಾಗಿ `ಪ್ರಜಾವಾಣಿ' ಶುಕ್ರವಾರದ ಸಂಚಿಕೆಯಲ್ಲಿ `ಅಲ್ಲಲ್ಲಿ ತೆರೆದ ಕೊಳವೆಬಾವಿಗಳು, ಆತಂಕದಲ್ಲಿ ಜನತೆ' ಎಂಬ ತಲೆ ಬರಹದಡಿಯಲ್ಲಿ ಸುದ್ದಿ ಪ್ರಕಟಿಸಿತ್ತು. ಕೂಡಲೆ ಸುದ್ದಿಗೆ ಸ್ಪಂದಿಸಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಹನುಮಸಾಗರದ ಪೊಲೀಸ್‌ಠಾಣೆ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ಗೆ ದೂರವಾಣಿಯ ಮೂಲಕ ಸೂಚನೆ ನೀಡಿ ಕೂಡಲೆ ತೆರೆದ ಎಲ್ಲ ಕೊಳವೆ ಬಾವಿಗಳನ್ನು ಮುಚ್ಚಿಸಿ ವರದಿ ನೀಡಲು ಸೂಚಿಸಿದ್ದರು.

ಈ ಆದೇಶದ ಹಿನ್ನೆಲೆಯಲ್ಲಿ ಇಲ್ಲಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಮೌನೇಶ್ವರ ಕಮ್ಮಾರ ಪತ್ರಿಕೆಯಲ್ಲಿ ಸುದ್ದಿ ಪ್ರಕಟಗೊಂಡ ದಿನವೆ ಹಳ್ಳಿಗಳಿಗೆ ಸುತ್ತಾಡಿ ತೆರೆದ ನಿರುಪಯುಕ್ತ ಕೊಳವೆ ಬಾವಿಗಳನ್ನು ಸಂಬಂಧಪಟ್ಟ ಗ್ರಾಮ ಪಂಚಾಯಿತಿಗಳಿಂದ ಮುಚ್ಚಿಸಿದ್ದಾರೆ.

ಈ ಹಿಂದೆಯೇ ಸಾರ್ವಜನಿಕರು ಗ್ರಾಮ ಪಂಚಾಯಿತಿಗಳಿಗೆ ಮನವಿ ಮಾಡಿದ್ದರೂ ಯಾವುದೇ ಪ್ರಯೋಜನವಾಗಿದ್ದಿಲ್ಲ. ಆದರೆ ಶುಕ್ರವಾರ ಪೊಲೀಸ್ ಸಬ್ ಇನ್‌ಸ್ಪೆಕ್ಟರ್ ಅವರ ನೇತೃತ್ವದಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಯಿಂದ ತೆರೆದ ಕೊಳವೆಬಾವಿಗಳನ್ನು ಮುಚ್ಚುವ ಕೆಲಸ ನಡೆದಿದೆ.

ಇಂತಹ ಕೊಳವೆಬಾವಿಗಳು ಕಂಡು ಬಂದರೆ ಕೂಡಲೆ ಮಾಹಿತಿ ನೀಡಬೇಕು ಎಂದು ಮೌನೇಶ್ವರ ಕಮ್ಮಾರ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದರ ಜೊತೆಗೆ ಗ್ರಾಮ ಪಂಚಾಯಿತಿಗಳು ನಿರುಪಯುಕ್ತ ತೆರೆದ ಕೊಳವೆಬಾವಿಗಳನ್ನು ಮುಚ್ಚಬೇಕು ಎಂದು ಎಚ್ಚರಿಕೆ ನೀಡಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.