ADVERTISEMENT

ತೋಟದಲ್ಲಿ ಸಂಘ-ಸಂಸ್ಥೆಯುವಕರ ಗುಪ್ತ ಸಭೆ

​ಪ್ರಜಾವಾಣಿ ವಾರ್ತೆ
Published 4 ಏಪ್ರಿಲ್ 2013, 6:54 IST
Last Updated 4 ಏಪ್ರಿಲ್ 2013, 6:54 IST

ಗಂಗಾವತಿ:  ತಾಲ್ಲೂಕಿನ ದಾಸನಾಳದ ತೋಟವೊಂದರಲ್ಲಿ ಮತ್ತು ಜಯನಗರದ ಮನೆಯೊಂದರಲ್ಲಿ ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷ, ಅಭ್ಯರ್ಥಿಯನ್ನು ಬೆಂಬಲಿಸಬೇಕು ಎಂಬ ನಿರ್ಣಯ ಕೈಗೊಳ್ಳಲು ಶನಿವಾರ ಸಂಜೆ ವಿವಿಧ ಸಮಾಜ ಮತ್ತು ಸಂಘ-ಸಂಸ್ಥೆಗಳ ಯುವಕರ ಸಭೆ ನಡೆಯಿತು.

ಸಭೆಯಲ್ಲಿ ಗಂಗಾವತಿ ನಗರದ 24, 6 ಮತ್ತು 1, 4, 15ನೇ ವಾರ್ಡ್, ಮಲ್ಲಾಪುರ, ಹೊಸಳ್ಳಿ, ವಡ್ಡರಹಟ್ಟಿ, ಬಸವಾಪಟ್ಟಣ ಮೊದಲಾದ ಗ್ರಾಮಗಳಿಂದ ಉಪ್ಪಾರ, ಕುರುಬ, ಗಂಗಾಮತ ಮತ್ತಿತರ ಸಮಾಜದ ಯುವಕರು ಪಾಲ್ಗೊಂಡಿದ್ದರು. ಸನೀಹ ಗ್ರಾಮೀಣಾಭಿವೃದ್ಧಿ ಸಂಸ್ಥೆ ಸೇರಿದಂತೆ ಜೈಭೀಮ್ ಆಟೋ ಚಾಲಕರ ಸಂಘ, ಜೈ ಕರ್ನಾಟಕ ಆಟೋ ಚಾಲಕರ ಸಂಘದಿಂದಲೂ ಪದಾಧಿಕಾರಿಗಳು ಪಾಲ್ಗೊಂಡಿದ್ದರು. ಯಾವ ಪಕ್ಷಕ್ಕೆ ಬೆಂಬಲ ನೀಡಬೇಕು ಎನ್ನುವುದರ ಬಗ್ಗೆ ಸಭೆಯಲ್ಲಿ ಮುಖ್ಯವಾಗಿ ಚರ್ಚೆಗೆ ಬಂತು ಎನ್ನಲಾಗಿದೆ.

ಸುಮಾರು 350ಕ್ಕೂ ಹೆಚ್ಚು ಯುವಕರು ಪಾಲ್ಗೊಂಡಿದ್ದ ಸಭೆಯಲ್ಲಿ 2004, 2008ರ ಚುನಾವಣೆಯಲ್ಲಿ ನಡೆದ ಘಟನಾವಳಿಗಳು, ರಾಜಕಾರಣಿಗಳ ವರ್ತನೆ, ನೀಡಿದ ಭರವಸೆ, ಕೈಗೂಡಿದ ಕೆಲಸ ಮೊದಲಾದವುಗಳ ಬಗ್ಗೆ ಚರ್ಚೆ ನಡೆಯಿತು ಎನ್ನಲಾಗಿದೆ. ಸಮಾನಮನಸ್ಕ ಯುವಕರು ಸೇರಿ, ಮುಂಬರುವ ಚುನಾವಣೆಯಲ್ಲಿ ಯಾವ ಪಕ್ಷ ಮತ್ತು ಅಭ್ಯರ್ಥಿ ಬೆಂಬಲಿಸಬೇಕು ಎಂಬುವುದರ ಬಗ್ಗೆ ಒಮ್ಮತದ ನಿರ್ಣಯ ಕೈಗೊಳ್ಳಲು ಸಭೆ ಆಯೋಜಿಸಲಾಗಿತ್ತು ಎಂದು ಪ್ರತ್ಯಕ್ಷದರ್ಶಿಯೊಬ್ಬರು `ಪ್ರಜಾವಾಣಿಗೆ' ತಿಳಿಸಿದರು.

ADVERTISEMENT

ಶಾಸಕ ಭೇಟಿ: ಯುವಕರು ನಡೆಸುತ್ತಿದ್ದ ಸಭೆಯ ಮಾಹಿತಿ ತಿಳಿದ ಶಾಸಕ ಪರಣ್ಣ ಮುನವಳ್ಳಿ ಸ್ಥಳಕ್ಕೆ ಭೇಟಿ ನೀಡಿದರು. ಈ ಸಂದರ್ಭದಲ್ಲಿ ಕಳೆದ ಅವಧಿಯಲ್ಲಾದ ಒಪ್ಪುಗಳನ್ನು ಸ್ವೀಕರಿ, ತಪ್ಪುಗಳನ್ನು ಮನ್ನಿಸಿ ಮತ್ತೊಮ್ಮೆ ಬೆಂಬಲಿಸುವಂತೆ ಮನವಿ ಮಾಡಿದರು. ಆದರೆ ಶಾಸಕರ ಮನವಿಗೆ ಖಾರವಾಗಿ ಪ್ರತಿಕ್ರಿಯಿಸಿದ ಕೆಲ ಯುವಕರು, `ಪಕ್ಷಕ್ಕಾಗಿ ದುಡಿದವರನ್ನು ದೂರವಿಟ್ಟು, ಹೊಗಳುಭಟ್ಟರಿಗೆ ಆದ್ಯತೆ ನೀಡಿದ್ದೀರಿ. ಕಾರ್ಯಕರ್ತರನ್ನು ಕಡೆಗಣಿಸಿದ್ದೀರಿ ಎಂದು ದೂರಿದರು ಎಂದು ಗೊತ್ತಾಗಿದೆ.

ಅನ್ವರಿ ಸಂಪರ್ಕ : ಯುವಕರು ಸಭೆಯ ಬಗ್ಗೆ ಮಾಹಿತಿ ಪಡೆದ ಕೇಂದ್ರ ಮಾಜಿ ಸಚಿವ ಹಾಗೂ ಗಂಗಾವತಿ ಕ್ಷೇತ್ರದ ಕೆಜೆಪಿ ಅಭ್ಯರ್ಥಿ ಬಸವರಾಜ ಪಾಟೀಲ್ ಅನ್ವರಿ, ತಮ್ಮನ್ನು ಬೆಂಬಲಿಸುವಂತೆ ಮನವಿ ಮಾಡಿ ಕೆಲ ಭರವಸೆಗಳನ್ನು ನೀಡಿದರು ಎನ್ನಲಾಗಿದೆ. ಆದರೆ ಅಂತಿಮ ನಿರ್ಣಯಕ್ಕೆ ಬಾರದ ಯುವಕರು, ಬುಧವಾರ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದರು. ಸಭೆಯಲ್ಲಿ ಪ್ರಮುಖರಾದ ಈ. ಧನರಾಜ, ಯಮನೂರಪ್ಪ, ಮಹೇಂದ್ರಸಿಂಗ್, ಪಂಪಾಪತಿ, ಮರಿಯಪ್ಪ, ನಾಗರಾಜ, ಗಾಳೇಶ, ಯುವರಾಜ, ರಮೇಶ ಗೋನಾಳ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.