ADVERTISEMENT

‘ದಲಿತರಿಗೆ ನ್ಯಾಯ ಒದಗಿಸಲು ಬದ್ಧ

ಅಂಬೇಡ್ಕರ್ ಮಹಾಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಶಿವರಾಜ ತಂಗಡಗಿ ಹೇಳಿಕೆ

​ಪ್ರಜಾವಾಣಿ ವಾರ್ತೆ
Published 7 ಡಿಸೆಂಬರ್ 2017, 11:58 IST
Last Updated 7 ಡಿಸೆಂಬರ್ 2017, 11:58 IST

ಕನಕಗಿರಿ: ಸಮೀಪದ ತಿಪ್ಪನಾಳ ಗ್ರಾಮದ ಕೆರೆಯ ಭೂಮಿಯಲ್ಲಿ ಸಾಗುವಳಿ ಮಾಡಿರುವ 26 ದಲಿತ ಕುಟುಂಬಗಳಿಗೆ ನ್ಯಾಯ ಒದಗಿಸಲು ಪ್ರಯತ್ನಿಸುತ್ತೇನೆ ಎಂದು ಶಾಸಕ ಶಿವರಾಜ ತಂಗಡಗಿ ಹೇಳಿದರು.

ಇಲ್ಲಿನ ಡಾ. ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ದಲಿತ ಸಂಘಟನೆಗಳು ಬುಧವಾರ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ. ಬಿ. ಆರ್. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

‘ವಿವಾದಿತ ಭೂಮಿ ಕುರಿತು ಈಗಾಗಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೊಂದಿಗೆ ಚರ್ಚಿಸಿದ್ದು, ನ್ಯಾಯ ಒದಗಿಸುವುದಾಗಿ ಭರವಸೆ ನೀಡಿದ್ದಾರೆ. ಒಟ್ಟು 96 ಎಕರೆ ಭೂಮಿಯ ವಿವಾದ ನ್ಯಾಯಾಲಯದಲ್ಲಿದ್ದು, ತೀರ್ಪು ಬಂದ ನಂತರ ಮುಂದಿನ ತೀರ್ಮಾನ ತೆಗೆದುಕೊಳ್ಳಲಾಗುವುದು’ ಎಂದರು.

ADVERTISEMENT

ಸಂವಿಧಾನ ಶಿಲ್ಪಿ ಡಾ. ಬಿ.ಆರ್.ಅಂಬೇಡ್ಕರ್ ಅವರು ಮಹಾನ್ ಶಕ್ತಿ. ಅವರ ನಿರಂತರ ಹೋರಾಟದ ಪ್ರತಿಫಲದಿಂದಾಗಿ ಶತ ಶತಮಾನಗಳಿಂದ ಶೋಷಣೆಗೆ ಒಳಗಾಗಿದ್ದ ಹಿಂದುಳಿದ ವರ್ಗಗಳ ಜನರು ಇಂದು ಸೌಲಭ್ಯಗಳನ್ನು ಪಡೆಯುತ್ತಿದ್ದಾರೆ ಎಂದು ಹೇಳಿದರು.

ಸಾಹಿತಿ ಡಾ. ಡಿ. ಕೆ. ಮಾಳಿ ಮಾತನಾಡಿ, ‘ದೇಶದ ಎಲ್ಲಾ ಜಾತಿ, ಧರ್ಮಗಳಿಗೆ ಅಂಬೇಡ್ಕರ್‌ ಅವರು ಸಾಮಾಜಿಕ ನ್ಯಾಯ, ಸಮಾನತೆಯ ಹಕ್ಕು ಹಾಗೂ ಸೌಲಭ್ಯಗಳನ್ನು ನೀಡಿದ್ದಾರೆ. ಅವರು ಎಸ್‌.ಸಿ, ಎಸ್‌.ಟಿಗೆ ಮಾತ್ರ ಸೀಮಿವಲ್ಲ. ಅವರ ವಿಚಾರಗಳು ಜಗತ್ತಿಗೆ ಮಾದರಿ ಎಂದರು.

ಪಟ್ಟಣ ಪಂಚಾಯಿತಿ ಅಧ್ಯಕ್ಷ ರವಿ ಭಜಂತ್ರಿ, ಯುವ ಮುಖಂಡ ನೀಲಕಂಠ ಬಡಿಗೇರ ಮಾತನಾಡಿದರು.
ಬಿಜೆಪಿ ಎಸ್‌.ಸಿ ಮೋರ್ಚಾ ಕಾರ್ಯದರ್ಶಿ ಮುಕುಂದರಾವ್ ಭವಾನಿಮಠ, ಪಟ್ಟಣ ಪಂಚಾಯಿತಿ ಸದಸ್ಯರಾದ ತಿಪ್ಪಣ್ಣ ನಾಯಕ, ಹುಸೇನಸಾಬ ಸೂಳೇಕಲ್, ಕೆ. ಸುಭಾಸ, ಮುಖ್ಯಾಧಿಕಾರಿ ಎಸ್‌. ವೈ. ಸಂಗನಗೌಡ್ರ, ಮುಖಂಡರಾದ ಫಕೀರಪ್ಪ ಪೂಜಾರ, ಸಣ್ಣ ಕನಕಪ್ಪ, ನಾಗೇಶ ಬಡಿಗೇರ, ಟಿ. ಜೆ. ರಾಮಚಂದ್ರ, ಹನುಮಂತಪ್ಪ ಬಸರಿಗಿಡ, ಕಂಠೆಪ್ಪ ಮ್ಯಾಗಡೆ, ಹೊನ್ನೂರುಸಾಬ ಕಳ್ಳಿಮನಿ, ಆಫೀಜಸಾಬ, ಬೇನಾಳಪ್ಪ, ವೆಂಕಟೇಶ ನೀರಲೂಟಿ, ಪಂಪಾಪತಿ ಜಾಲಿಹಾಳ ಇದ್ದರು.

ಬಿಜೆಪಿ ಕಚೇರಿ: ಇಲ್ಲಿನ ನವಲಿ ರಸ್ತೆಯಲ್ಲಿರುವ ಬಿಜೆಪಿ ಕಚೇರಿಯಲ್ಲಿ ಡಾ. ಬಿ. ಆರ್. ಅಂಬೇಡ್ಕರ್‌ ಅವರ ಮಹಾ ಪರಿನಿರ್ವಾಣ ದಿನ ಆಚರಿಸಲಾಯಿತು. ಬಿಜೆಪಿ ನಗರ ಘಟಕದ ಅಧ್ಯಕ್ಷ ಪ್ರಕಾಶ ಹಾದಿಮನಿ, ಎಸ್‌.ಸಿ ಮೋರ್ಚಾ ಕಾರ್ಯಕಾರಿಣಿ ಸದಸ್ಯ ಸಣ್ಣ ಕನಕಪ್ಪ ಮಾತನಾಡಿದರು. ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಶರಣಪ್ಪ ಭಾವಿಕಟ್ಟಿ ಗ್ರಾಮ ಪಂಚಾಯಿತಿ ಮಾಜಿ ಸದಸ್ಯ ತಿಪ್ಪಣ್ಣ ಮಡಿವಾಳರ, ಪ್ರಮುಖರಾದ ಬಸರಗಿಡದ ಹನುಮಂತಪ್ಪ, ರಾಚಪ್ಪ ಬ್ಯಾಳಿ, ಚಾಂದಪಾಷ ಸಾಡೆ, ವಿನಾಯಕ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.