ADVERTISEMENT

ನಿಗಾ: ವಿಚಕ್ಷಣ ದಳಕ್ಕೆ ಸೂಚನೆ

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2013, 6:27 IST
Last Updated 10 ಏಪ್ರಿಲ್ 2013, 6:27 IST

ಕೊಪ್ಪಳ: ಚುನಾವಣೆ ಸಂದರ್ಭದಲ್ಲಿ ಸಂಭವಿಸಬಹುದಾದ ಯಾವುದೇ ಅಕ್ರಮಗಳನ್ನು ತಡೆಗಟ್ಟಲು ಕಠಿಣ ಕ್ರಮ ಕೈಗೊಳ್ಳಲು ಹಿಂಜರಿಯಬೇಡಿ ಎಂದು ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದ ರೆಡ್ಡಿ ಅವರು ಫ್ಲೈಯಿಂಗ್ ಸ್ಕ್ವಾಡ್ (ವಿಚಕ್ಷಣ ದಳ)ದ ಮುಖ್ಯಸ್ಥರಿಗೆ ಸೂಚನೆ ನೀಡಿದರು.

ಚುನಾವಣೆ ನಿರ್ವಹಣೆ ಕುರಿತಂತೆ ಸೆಕ್ಟರ್ ಅಧಿಕಾರಿಗಳು, ವಿಡಿಯೋ ವಿಜಿಲೆನ್ಸ್, ಫ್ಲೈಯಿಂಗ್ ಸ್ಕ್ವಾಡ್ ತಂಡಗಳಿಗೆ ತರಬೇತಿ ಕುರಿತು ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಏರ್ಪಡಿಸಲಾಗಿದ್ದ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಚುನಾವಣೆ ಸಂದರ್ಭದಲ್ಲಿ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಕಾರ್ಯಕರ್ತರು ಹಣ, ಉಡುಗೊರೆ, ಸೀರೆ, ಬಂಗಾರದ ಒಡವೆ ಸೇರಿದಂತೆ ಹಲವು ಸಾಮಗ್ರಿಗಳ ಆಮಿಷವೊಡ್ಡಿ, ಹಂಚುವ ಸಾಧ್ಯತೆಗಳು ಇವೆ. ಸಂಭವನೀಯ ಅಕ್ರಮಗಳನ್ನು ತಡೆಗಟ್ಟಲು ಫ್ಲೈಯಿಂಗ್ ಸ್ಕ್ವಾಡ್ ತಂಡದ ಮುಖ್ಯಸ್ಥರಿಗೆ ಚುನಾವಣಾ ಆಯೋಗ `ಎಕ್ಸಿಕ್ಯುಟೀವ್ ಮ್ಯೋಜಿಸ್ಟ್ರೇಟ್' ಎಂಬುದಾಗಿ ವಿಶೇಷ ಅಧಿಕಾರ ನೀಡಿದೆ.

ಈ ತಂಡದ ಮುಖ್ಯಸ್ಥರು ಯಾವುದೇ ಸಂದರ್ಭದಲ್ಲಿ ಯಾವುದೇ ವಾಹನ, ಮನೆ, ಕಟ್ಟಡ ಪರಿಶೀಲನೆ ಹಾಗೂ ಕ್ರಮಕ್ಕೆ ಮುಕ್ತ ಅಧಿಕಾರ ನೀಡಿದೆ. ಯಾವುದೇ ಅಕ್ರಮ ಕಂಡು ಬಂದಲ್ಲಿ, ಯಾವುದೇ ವ್ಯಕ್ತಿಯನ್ನು ಬಂಧಿಸಲು ಇವರಿಗೆ ಅವಕಾಶ ನೀಡಿದೆ.  ಫ್ಲೈಯಿಂಗ್ ಸ್ಕ್ವಾಡ್‌ಗೆ ಪೊಲೀಸ್, ವಿಡಿಯೋ ರೆಕಾರ್ಡಿಂಗ್ ಹಾಗೂ ಅಗತ್ಯ ಸಿಬ್ಬಂದಿಯನ್ನು ಒದಗಿಸಲಾಗಿದೆ.  ಈ ನಿಟ್ಟಿನಲ್ಲಿ ತಂಡ ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ತೀವ್ರ ನಿಗಾ ವಹಿಸಬೇಕು ಎಂದರು.

ಪ್ರತಿ 8-10 ಮತಗಟ್ಟೆಗಳಿಗೆ ಒಬ್ಬರು ಸೆಕ್ಟರ್ ಅಧಿಕಾರಿಗಳನ್ನು ನೀಡಲಾಗಿದೆ. ಇವರೂ ಸಹ ವಿಡಿಯೋ ಚಿತ್ರೀಕರಣ ವ್ಯವಸ್ಥೆಯನ್ನು ಹೊಂದಿದ್ದು, ಯಾವುದೇ ರಾಜಕೀಯ ಸಭೆ, ಸಮಾರಂಭಗಳ ಬಗ್ಗೆ ತೀವ್ರ ನಿಗಾ ವಹಿಸಿ, ಅಕ್ರಮ ಚಟುವಟಿಕೆಗಳ ಬಗ್ಗೆ ಚಿತ್ರೀಕರಣ ಮಾಡಿಕೊಳ್ಳಬೇಕು. ಅನುಮತಿಗಿಂತ ಹೆಚ್ಚಿನ ವಾಹನ, ಸಾಮಗ್ರಿ ಬಳಕೆಯಾಗಿದ್ದಲ್ಲಿ ಅಂತಹ ಎಲ್ಲ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಬೇಕು ಎಂದು ಹೇಳಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯ ನಿರ್ವಾಹಕ ಅಧಿಕಾರಿ ಡಿ.ಕೆ.ರವಿ, ಜಿಲ್ಲೆಯ ಎಲ್ಲ ವಿಧಾನಸಭಾ ಕ್ಷೇತ್ರಗಳ ಚುನಾವಣಾಧಿಕಾರಿಗಳು, ತಹಸೀಲ್ದಾರರು, ಫ್ಲೈಯಿಂಗ್ ಸ್ಕ್ವಾಡ್ ತಂಡಗಳ ಮುಖ್ಯಸ್ಥರು, ಸೆಕ್ಟರ್ ಅಧಿಕಾರಿಗಳು, ವಿಡಿಯೋ ವಿಜಿಲೆನ್ಸ್, ವಿಡಿಯೋ ವೀಕ್ಷಣ ತಂಡಗಳ ಮುಖ್ಯಸ್ಥರು ಸಭೆಯಲ್ಲಿ ಭಾಗವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.