ADVERTISEMENT

ನಿರ್ಲಕ್ಷ್ಯಕ್ಕೆ ಒಳಗಾದ ಮುಷ್ಟಿಕಲ್ಲೇಶ್ವರ ದೇಗುಲ

ಪುರಾತತ್ವ ಇಲಾಖೆ ಸಂರಕ್ಷಣೆ ಮಾಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 20 ಮೇ 2018, 13:34 IST
Last Updated 20 ಮೇ 2018, 13:34 IST
ಕುಕನೂರಿನ ಮುಷ್ಟಿಕಲ್ಲೇಶ್ವರ ದೇವಸ್ಥಾನದ ಮೇಲೆ ಬೆಳೆದಿರುವ ಸಸಿಗಳು
ಕುಕನೂರಿನ ಮುಷ್ಟಿಕಲ್ಲೇಶ್ವರ ದೇವಸ್ಥಾನದ ಮೇಲೆ ಬೆಳೆದಿರುವ ಸಸಿಗಳು   

ಕುಕನೂರು: ಪಟ್ಟಣದ ಮುಷ್ಟಿಕಲ್ಲೇಶ್ವರ ದೇವಸ್ಥಾನವು ಪುರಾತತ್ವ ಇಲಾಖೆಯ ನಿರ್ಲಕ್ಷ್ಯದಿಂದ ಅವಸಾನದ ಅಂಚನ್ನು ತಲುಪಿದ್ದು, ದೇವಸ್ಥಾನದ ಮೇಲೆ ಸಸಿಗಳು ಬೆಳೆಯುತ್ತಿದ್ದು ಮುಂದಿನ ದಿನಗಳಲ್ಲಿ ಗೋಪುರ ಬೀಳುವ ಸಾಧ್ಯತೆ ಇದೆ.

ಸುಮಾರು ವರ್ಷಗಳ ಹಿಂದೆ ನಿಧಿ ಆಸೆಗಾಗಿ ನಿಧಿಗಳ್ಳರು ಮುಷ್ಟಿ ಕಲ್ಲೇಶ್ವರ ಮೂರ್ತಿಯ ಜೊತೆಯಲ್ಲಿ ಇಲ್ಲಿನ ವಿವಿಧ ಮೂರ್ತಿಗಳನ್ನು ಭಗ್ನ ಮಾಡಿ ನಿಧಿಯನ್ನು ತೆಗೆದಿರಬೇಕು ಎನ್ನುವದು ಸಂಶಯಕ್ಕೆ ಎಡೆ ಮಾಡಿಕೊಟ್ಟಂತಿದೆ. ದೇವಸ್ಥಾನದ ಸುತ್ತ ಮುತ್ತಲು ಇನ್ನೂ ಹಲವಾರು ದೇವಸ್ಥಾನಗಳು ಮಣ್ಣಿನಲ್ಲಿ ಹುದುಗಿವೆ ಎನ್ನುತ್ತಾರೆ ಇತಿಹಾಸಕಾರರು.

ಇತಿಹಾಸವಿದ್ದು ಅಲ್ಲಿನ ಅನೇಕ ದೇವಾಲಯಗಳಿಂದ ಹಾಗೂ ಮಂಟಪಗಳಿಂದ ಜಗತ್ ಪ್ರಖ್ಯಾತಿ ಪಡೆದಿದೆ ಇಂತಹ ವಿಶೇಷತೆಯನ್ನು ಹೊಂದಿದ ಈ ಪಟ್ಟಣಕ್ಕೆ ಮೊದಲು ಕುಂತಳಪುರ ಎಂದು ಕರೆಯಲಾಗುತ್ತಿತ್ತು ಎಂದು ಈರಪ್ಪ ಗುತ್ತಿ ಹೇಳುತ್ತಾರೆ.

ADVERTISEMENT

ಈ ದೇವಸ್ಥಾನಕ್ಕೆ ಆದಿ ಕಾಲದ ಇತಿಹಾಸವಿದೆ. ತನ್ನದೆ ಆದ ಭವ್ಯ ಪರಂಪರೆಯನ್ನು ಹೊಂದಿರುವ ಕೊಪ್ಪಳ ಜಿಲ್ಲೆಯ ಕುಕನೂರು ತಾಲ್ಲೂಕಿನ ಈ ದೇವಸ್ಥಾನ, ಒಂದು ಕಾಲದಲ್ಲಿ ನಿಜಾಮರ ಆಡಳಿತದ ಕೇಂದ್ರ ಸ್ಥಾನವಾಗಿತ್ತು. ಬಾದಾಮಿ ಚಾಲುಕ್ಯರ ಕುಲದ ಒಂದನೇಯ ವಿಕ್ರಮಾದಿತ್ಯನ ಆಳ್ವಿಕೆಯಲ್ಲಿ ದೊರೆತ ಶಾಸನದ ಪ್ರಕಾರ 7 ನೇ ಶತಮಾನದಷ್ಟು ಹಳೆಯ ಕಾಲದಿಂದ ಈ ಕುಂತಳಪುರವೆಂಬ ಗ್ರಾಮವಾಗಿದೆ ಎಂಬ ಮಾತಿದೆ ಎಂದು ಗುತ್ತಿ ಹೇಳಿದರು.

ಕುಂತಳಪುರದ ಅಂದರೆ ಕುಕನೂರು ಸುತ್ತಲೂ 48 ಕೆರೆಗಳು ಇದ್ದು. ಸುತ್ತಲೂ ಅನೇಕ ದೇವಾಲಯಗಳು, ಮಂಟಪಗಳು, ಪ್ರಾಚೀನ ಕಾಲದ ಕಲ್ಲಿನ ಶಿಲಾಶಾಸನಗಳು ಇಲ್ಲಿ ಇಂದಿಗೂ ಪ್ರಸ್ತುತ. 7 ನೇ ಶತಮಾನದಿಂದ 16 ನೇ ಶತಮಾನದವರೆಗೆ ಬಾದಾಮಿ ಚಾಲುಕ್ಯರು, ರಾಷ್ಟ್ರಕೂಟರು, ಕಲ್ಯಾಣ ಚಾಲುಕ್ಯರು, ಕುಲಚುರಿಗಳು, ದೇವಗಿರಿಯ ಯಾದವರು, ಹೊಯ್ಸಳರು ಹಾಗೂ ವಿಜಯನಗರದ ರಾಜರುಗಳು ಆಳಿಹೋದ ಇತಿಹಾಸವಿದೆ.

ಅಲ್ಲದೆ ಕಾಲ ಕಾಲಕ್ಕೆ ಆ ರಾಜರ ಅಧಿಕಾರಿಗಳು ಇಲ್ಲಿ ಆಡಳಿತ ನಡೆಸುತ್ತಿದ್ದರೆಂದು ಶಾಸನ ಅಧ್ಯಯನಗಳಿಂದ ವ್ಯಕ್ತವಾಗುತ್ತದೆ. ಇಂತಹ ವೈಭವಿಯತೆಯನ್ನು ಹೊಂದಿದ ಮುಷ್ಠಿ ಕಲ್ಲೇಶ್ವರ ದೇವಸ್ಥಾನವನ್ನು ಮುಂದಿನ ಪೀಳಿಗೆಯವರು ನೋಡುವಂತೆ ರಕ್ಷಿಸಬೇಕು. ಮೂರ್ತಿಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆ ಮುಂದಾಗಬೇಕು. ದೇವಸ್ಥಾನದ ಮೇಲಿರುವ ಸಸಿಗಳು ಮರವಾಗಿ ಬೇಳಿಯುವ ಮೊದಲೇ, ಸಂಬಂಧಿಸಿದ ಇಲಾಖೆಯವರು ಇದರ ಪುನರುತ್ಥಾನದ ಕಡೆಗೆ ಗಮನ ಹರಿಸಬೇಕು ಎನ್ನುವದು ಗ್ರಾಮಸ್ಥರ ಆಶಯವಾಗಿದೆ.

**
ದೇವಸ್ಥಾನದ ಮೂರ್ತಿಗಳನ್ನು ಸಂರಕ್ಷಿಸಲು ಪುರಾತತ್ವ ಇಲಾಖೆ ಮುಂದಾಗಬೇಕು
ಡಾ.ಕೆ.ಬಿ ಬ್ಯಾಳಿ, ಹಿರಿಯ ಸಾಹಿತಿ 

ಮಂಜುನಾಥ ಎಸ್‌.ಅಂಗಡಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.