ADVERTISEMENT

ನಿರ್ಲಕ್ಷ್ಯ: ಹೆಚ್ಚಿದ ಅಗ್ನಿ ಅನಾಹುತ

ಅಗ್ನಿಶಾಮಕ ಸೇವಾ ಸಪ್ತಾಹ: ನಾಗರಿಕರಿಗೆ ಜಾಗೃತಿ, ಮುಂಜಾಗ್ರತೆಗೆ ಸಲಹೆ

ಶರತ್‌ ಹೆಗ್ಡೆ
Published 16 ಏಪ್ರಿಲ್ 2015, 10:28 IST
Last Updated 16 ಏಪ್ರಿಲ್ 2015, 10:28 IST
ಕೊಪ್ಪಳ ತಾಲ್ಲೂಕು ಗಿಣಿಗೇರಿ ಸಮೀಪ ಅಲ್ಟ್ರಾಟೆಕ್‌ ಸಿಮೆಂಟ್‌ ಕಾರ್ಖಾನೆ ಆವರಣದಲ್ಲಿ ಬುಧವಾರ ಅಗ್ನಿಶಮನ ಅಣಕು ಪ್ರದರ್ಶನ ನಡೆಯಿತು
ಕೊಪ್ಪಳ ತಾಲ್ಲೂಕು ಗಿಣಿಗೇರಿ ಸಮೀಪ ಅಲ್ಟ್ರಾಟೆಕ್‌ ಸಿಮೆಂಟ್‌ ಕಾರ್ಖಾನೆ ಆವರಣದಲ್ಲಿ ಬುಧವಾರ ಅಗ್ನಿಶಮನ ಅಣಕು ಪ್ರದರ್ಶನ ನಡೆಯಿತು   

ಕೊಪ್ಪಳ: ನೂರಾರು ಕೈಗಾರಿಕಾ ಘಟಕಗಳು, ಸಾವಿರಾರು ಎಕರೆ ಕೃಷಿ ಭೂಮಿ ಇರುವ ಜಿಲ್ಲೆಯಲ್ಲಿ ಅಗ್ನಿ ಅನಾಹುತಗಳ ಪ್ರಮಾಣವೂ ವರ್ಷಕ್ಕೆ ಸರಾಸರಿ ಸಾವಿರ ಸಂಖ್ಯೆಯಲ್ಲಿದೆ. ಅಗ್ನಿಶಾಮಕ ಸೇವಾ ಸಪ್ತಾಹ ಆಚರಣೆ ನಡೆಯುತ್ತಿರುವ ಸಂದರ್ಭ ಈ ಅಂಕಿ ಅಂಶಗಳು ಆತಂಕ ಸೃಷ್ಟಿಸುತ್ತವೆ. ಜಿಲ್ಲಾ ಕೇಂದ್ರ ಸಹಿತ 5 ಕಡೆಗಳಲ್ಲಿ ಅಗ್ನಿಶಾಮಕ ಮತ್ತು ತುರ್ತು ಸೇವಾ ಘಟಕದ ಠಾಣೆಗಳಿವೆ. ಇವುಗಳಿಗೆ ವರ್ಷಪೂರ್ತಿ ಕೆಲಸವೂ ಇದೆ. ಸದ್ಯಕ್ಕೆ ಜೀವ ಹಾನಿ ಆಗಿಲ್ಲ ಎಂಬುದು ಸಮಾಧಾನಕರ ಎನ್ನುತ್ತಾರೆ ಅಗ್ನಿಶಾಮಕ ಇಲಾಖೆ ಅಧಿಕಾರಿಗಳು.

ಜಿಲ್ಲೆಯಲ್ಲಿ ವಾರ್ಷಿಕ ಸರಾಸರಿ  700 ರಿಂದ 1,000 ಅಗ್ನಿ ದುರಂತಗಳು ಸಂಭವಿಸುತ್ತವೆ. ಗ್ರಾಮೀಣ ಪ್ರದೇಶಗಳಲ್ಲಿ ಬಣವೆ, ಕಬ್ಬು, ಭತ್ತ ಬೆಳೆಗಳಿಗೆ ಬೆಂಕಿ ತಗಲುವುದು ಹೆಚ್ಚು. ಇದರಲ್ಲಿ ವಿದ್ಯುತ್‌ ತಂತಿಗಳ ಕಿಡಿ ಹಾರಿ ಸಂಭವಿಸಿದ್ದು, ಕಳೆನಾಶಕ್ಕೆ ಹಾಕಿದ ಬೆಂಕಿ ತಗುಲಿದ್ದು, ಕಿಡಿಗೇಡಿಗಳಿಂದ ನಡೆದ ಕೃತ್ಯಗಳು ಜಾಸ್ತಿ.

ಕೈಗಾರಿಕೆಗಳ ಆತಂಕ: ಕೈಗಾರಿಕೆಗಳಲ್ಲಿ ಅತಿಯಾದ ಶಾಖ, ಶಾರ್ಟ್‌ ಸರ್ಕಿಟ್‌, ಕುಲುಮೆಯ ಕಿಡಿ... ಇತ್ಯಾದಿಯಿಂದ ಬೆಂಕಿ ಕಾಣಿಸಿಕೊಳ್ಳಬಹುದು. ಕಳೆದ ವರ್ಷ ಕೊಪ್ಪಳದ ಅಭಯ್‌ ಸಾಲ್ವೆಂಟ್‌ ಘಟಕಕ್ಕೆ ಬೆಂಕಿ ಬಿದ್ದದ್ದು ದೊಡ್ಡ ಘಟನೆ. ಉಳಿದಂತೆ ಕಿರ್ಲೋಸ್ಕರ್‌, ದ್ರುವದೇಶ್‌, ಕಲ್ಯಾಣಿ ಸ್ಟೀಲ್‌ ಕಂಪೆನಿಗಳಲ್ಲಿ ಆಗಾಗ ಸಣ್ಣ ಪ್ರಮಾಣದ ಅಗ್ನಿ ಅವಘಡಗಳು ನಡೆಯುತ್ತಲೇ ಇರುತ್ತವೆ. ಜಿಲ್ಲೆಯಲ್ಲಿ ಹೊಸಪೇಟೆ ಸ್ಟೀಲ್ಸ್‌ ಮತ್ತು ಕೋಕಾಕೋಲಾ ಕಂಪೆನಿಗಳು ಮಾತ್ರ ತಮ್ಮದೇ ಆದ ಅಗ್ನಿಶಮನ ಯಂತ್ರಗಳು ಮತ್ತು ಸಿಬ್ಬಂದಿ ವ್ಯವಸ್ಥೆ ಹೊಂದಿವೆ ಎಂದರು ಜಿಲ್ಲಾ ಅಗ್ನಿ ಶಾಮಕ ಅಧಿಕಾರಿ ಕೆ.ಎಂ.ಪುಟ್ಟಸ್ವಾಮಿ.

ಕೊಪ್ಪಳವೂ ಸುರಕ್ಷಿತವಲ್ಲ: ಇಕ್ಕಟ್ಟಾದ ಓಣಿಗಳು, ದಾರಿ ಒತ್ತುವರಿ ಮಾಡಿದ ಬಡಾವಣೆಗಳು, ದುರ್ಘಟನೆ ಸಂಭವಿಸಿದಾಗ ತಕ್ಷಣಕ್ಕೆ ವಾಹನ ತೆರಳಲು ಅಸಾಧ್ಯವಾದ ದಾರಿಗಳು ಇವೆ. ಚಿತ್ರಮಂದಿರಗಳ ಅಗ್ನಿಶಮನ ವ್ಯವಸ್ಥೆಯಂತೂ ಕೇಳುವುದೇ ಬೇಡ ಎಂಬುದು ಅಗ್ನಿಶಾಮಕ ಇಲಾಖೆ ಹಾಗೂ ಜಿಲ್ಲಾಡಳಿತದ ಮೂಲಗಳ ವಿವರಣೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.