ADVERTISEMENT

ನೀರು ಪೂರೈಕೆ: ಪಂಚಾಯಿತಿಗೆ ಜವಾಬ್ದಾರಿ

ರಾಜೀವ್‌ಗಾಂಧಿ ಸಬ್‌ಮಿಶನ್ ಯೋಜನೆ

​ಪ್ರಜಾವಾಣಿ ವಾರ್ತೆ
Published 13 ಡಿಸೆಂಬರ್ 2012, 8:39 IST
Last Updated 13 ಡಿಸೆಂಬರ್ 2012, 8:39 IST

ಕೊಪ್ಪಳ: ರಾಜೀವ್‌ಗಾಂಧಿ ಸಬ್‌ಮಿಶನ್ ಕುಡಿಯುವ ನೀರಿನ ಯೋಜನೆಯಡಿ 12 ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ 31 ಗ್ರಾಮಗಳಿಗೆ ಕುಡಿಯುವ ನೀರು ಪೂರೈಕೆಯ ನಿರ್ವಹಣೆಯ ಜವಾಬ್ದಾರಿಯನ್ನು ಆಯಾ ಪಂಚಾಯಿತಿಗಳಿಗೆ ವಹಿಸುವ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಡಿ. 12ರಂದು `ಪ್ರಜಾವಾಣಿ'ಯಲ್ಲಿ ಪ್ರಕಟಗೊಂಡಿರುವ ವರದಿ ಹಿನ್ನೆಲೆಯಲ್ಲಿ ತಾಲ್ಲೂಕಿನ ನೆಲೋಗಿಪುರ ಗ್ರಾಮಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ ನಂತರ ಜಿಲ್ಲಾ ಪಂಚಾಯಿತಿ ಮುಖ್ಯಕಾರ್ಯನಿರ್ವಾಹಕ ಅಧಿಕಾರಿ ಎಸ್. ರಾಜಾರಾಂ ಅವರು ಈ ತಾತ್ಕಾಲಿಕ ವ್ಯವಸ್ಥೆ ಮಾಡಿದ್ದಾರೆ.

`ಪ್ರಜಾವಾಣಿ'ಯೊಂದಿಗೆ ಮಾತನಾಡಿದ ಅವರು, ನೀರು ಪೂರೈಸುವ ಜವಾಬ್ದಾರಿಗೆ ಸಂಬಂಧಿಸಿದಂತೆ ಒಂದು ಗ್ರಾಮ ಪಂಚಾಯಿತಿ ಒಂದು ತಿಂಗಳು ನಿರ್ವಹಣೆ ಮಾಡಬೇಕು ಎಂಬ ತಾತ್ಕಾಲಿಕ ವ್ಯವಸ್ಥೆಮಾಡಲಾಗಿದೆ ಎಂದು ವಿವರಿಸಿದರು.

ಈ ನಿರ್ವಹಣೆಗಾಗಿ ತಿಂಗಳಿಗೆ 5-10 ಸಾವಿರ ರೂಪಾಯಿ ಬೇಕಾಗುತ್ತದೆ. ಈ ಹಣವನ್ನು ಸ್ಥಳೀಯವಾಗಿ ಆಯಾ ಗ್ರಾಮ ಪಂಚಾಯಿತಿಗಳೇ ಕ್ರೋಡೀಕರಿಸುವ ಸಂಬಂಧ ಕ್ರಮ ಕೈಗೊಳ್ಳಲಾಗುತ್ತದೆ. ಅಲ್ಲದೇ, ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರಕ್ಕೆ ಪತ್ರ ಬರೆಯಲಾಗಿದ್ದು, ಸ್ಪಷ್ಟ ನಿರ್ದೇಶನ ದೊರೆತ ನಂತರ ಅದರಂತೆ ಕ್ರಮ ಕೈಗೊಳ್ಳಲಾಗುವುದು ಎಂದು ವಿವರಿಸಿದರು.

ಪ್ರಸ್ತಾವನೆ ಸಲ್ಲಿಸಲಾಗಿದೆ: ಬನ್ನಿಕೊಪ್ಪ ಹಾಗೂ 38 ಗ್ರಾಮಗಳು ಈ ಯೋಜನೆಯಡಿ ಬರುತ್ತಿದ್ದು, ಈಗ 31 ಗ್ರಾಮಗಳಿಗೆ ಮಾತ್ರ ಪೈಪ್‌ಲೈನ್ ಹಾಕಲಾಗಿದೆ.

ಈ ಗ್ರಾಮಗಳಿಗೆ ನೀರು ಪೂರೈಕೆಯ ನಿರ್ವಹಣೆಯನ್ನು ಯಾರಿಗೆ ವಹಿಸಬೇಕು ಎಂಬ ಬಗ್ಗೆ ನಿರ್ದೇಶನ ನೀಡುವಂತೆ ಕೋರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್ ಇಲಾಖೆಗೆ ಪತ್ರ ಬರೆಯಲಾಗಿದೆ.
ಈಗಾಗಲೇ ನಿರ್ವಹಣೆ ಮಾಡುತ್ತಿರುವ ಕರ್ನಾಟಕ ಗ್ರಾಮೀಣ ಮೂಲಸೌಕರ್ಯ ಅಭಿವೃದ್ಧಿ ನಿಗಮಕ್ಕೆ ನೀಡುವ ಸಲುವಾಗಿ 1 ಕೋಟಿ ಬಿಡುಗಡೆ ಮಾಡುವಂತೆಯೂ ಕೋರಲಾಗಿತ್ತು.

ಇದಕ್ಕೆ ಸ್ಪಂದಿಸಿದ ಇಲಾಖೆ ಪಾರದರ್ಶಕ ಕಾಯ್ದೆಯನ್ವಯ ಕ್ರಮ ಕೈಗೊಳ್ಳುವಂತೆ ಸೂಚಿಸಿತ್ತು. ಆದರೆ, ಈ ಬಗ್ಗೆ ಸ್ಪಷ್ಟ ಸೂಚನೆ ನೀಡುವಂತೆ ಹಾಗೂ ಕೆಲವು ಸ್ಪಷ್ಟೀಕರಣ ಕೋರಿ ಹಾಗೂ ಹೆಚ್ಚುವರಿಯಾಗಿ 1 ಕೋಟಿ ರೂಪಾಯಿ ನೀಡುವಂತೆ ಪುನಃ ಪತ್ರ ಬರೆಯಲಾಗಿತ್ತು.

ಹೀಗಾಗಿ ನಿರ್ವಹಣೆ ಜವಾಬ್ದಾರಿಯನ್ನು ವಹಿಸುವ ಸಂಬಂಧ ಇ-ಟೆಂಡರ್ ಕರೆಯುವಂತೆ ಸೂಚನೆ ಬಂದಿದೆ.ಆದರೆ, ಇ-ಟೆಂಡರ್ ಪ್ರಕ್ರಿಯೆಯನ್ನು ಯಾರು ನೆರವೇರಿಸಬೇಕು ಎಂಬ ಬಗ್ಗೆ ಸ್ಪಷ್ಟ ನಿರ್ದೇಶನ ಇಲ್ಲದೇ ಇರುವುದರಿಂದ ಈಗ ಪುನಃ ಮತ್ತೊಂದು ಪತ್ರ ಬರೆದು ಉತ್ತರಕ್ಕಾಗಿ ಕಾಯಲಾಗುತ್ತಿದೆ ಎಂದು ರಾಜಾರಾಂ ವಿವರಿಸಿದರು.

ನಿಗಮದ ಸಹಾಯಕ ನಿರ್ದೇಶಕ ವೆಂಕಟೇಶ್, ಜಿಲ್ಲಾ ಪಂಚಾಯಿತಿ ಸದಸ್ಯ ನಾಗನಗೌಡ ಮಾಲಿಪಾಟೀಲ, ಅಳವಂಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಸುನಂದಮ್ಮ ಉಪಸ್ಥಿತರಿದ್ದರು ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.