ADVERTISEMENT

ಪೌರಾಯುಕ್ತರ ಮುಂದೆ ನಾಗರಿಕರ ಆಕ್ರೋಶ

ಡೈಲಿ ಮಾರ್ಕೆಟ್‌ನಲ್ಲಿ ಸ್ವಚ್ಛತೆ ಕೊರತೆ

​ಪ್ರಜಾವಾಣಿ ವಾರ್ತೆ
Published 8 ಮಾರ್ಚ್ 2014, 10:13 IST
Last Updated 8 ಮಾರ್ಚ್ 2014, 10:13 IST

ಗಂಗಾವತಿ: ಡೈಲಿ ಮಾರ್ಕೆಟ್‌ಗೆ ಶುಕ್ರವಾರ ಅನಿರೀಕ್ಷಿತವಾಗಿ ಭೇಟಿ ನೀಡಿದ ನಗರಸಭೆಯ ಪೌರಾಯುಕ್ತ ಸಿ.ಆರ್‌. ರಂಗಸ್ವಾಮಿ ಅವರ ಮುಂದೆ ಸ್ಥಳಿಯ ವಾಸಿಗಳು ಸ್ವಚ್ಛತೆ ಕೊರತೆ ಹಿನ್ನೆಲೆ ಅನುಭವಿಸುತ್ತಿರುವ ಸಮಸ್ಯೆ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ಕೋಳಿ ಮಾಂಸದ ವ್ಯಾಪಾರಿಗಳು ನಿತ್ಯ ಬಿಡುತ್ತಿರುವ ತ್ಯಾಜ್ಯ ನೀರು ಒಂದೆಡೆ ನಿಂತು ಇಡೀ ಮಾರ್ಕೆಟ್‌ ಪ್ರದೇಶದಲ್ಲಿ ಗಬ್ಬು ವಾಸನೆ ಹೊಡೆ­ಯುತ್ತಿದೆ. ಇದರಿಂದ ತರಕಾರಿ ಕೊಳ್ಳಲು ಬರುವ ಗ್ರಾಹಕರು ಮೂಗು ಮುಚ್ಚಿಕೊಂಡು ತರಕಾರಿ ಖರೀದಿಸಬೇಕಾದ ಸ್ಥಿತಿ ಬಂದಿದೆ.

ಕೇವಲ ಗ್ರಾಹಕರು ಮಾತ್ರವಲ್ಲ, ನಿತ್ಯ ಈ ಪ್ರದೇಶದಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡು ಜೀವನ ನಡೆಸುತ್ತಿರುವ ನೂರಾರು ವರ್ತಕರಿಗೆ ತೀವ್ರ ತೊಂದರೆಯಾಗಿದೆ. ರೋಗ ರುಜ್ಜೀನಕ್ಕೆ ಕಾರಣವಾಗುತ್ತಿದೆ ಎಂದು ಕಿರಾಣಿ ವರ್ತಕ ಹನುಮಂತಪ್ಪ ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.

ಗಂಗಾವತಿ ವಾಯ್ಸ್‌ ಮತ್ತು ಪವನ್‌ ಬಾರ್ ಮುಂದಿರುವ ಖಾಲಿ ಪ್ರದೇಶ­ದಲ್ಲಿ ಕೋಳಿ, ತರಕಾರಿ ತ್ಯಾಜ್ಯ ಬಿಸಾ­ಡುತ್ತಿರುವುದರಿಂದ ನಿತ್ಯ ಕಸ ಸಂಗ್ರಹ­ವಾಗಿ ಹಂದಿ–ನಾಯಿಗಳ ಬೀಡಾಗಿದೆ. ಅಲ್ಲಿಂದ ಸೊಳ್ಳೆ ಉತ್ಪತ್ತಿಯಾಗಿ ಸಾಕಷ್ಟು ಕಾಯಿಲೆಗೆ ಕಾರಣವಾಗುತ್ತಿದೆ ಎಂದು ಸ್ಥಳೀಯರು ದೂರಿದರು.

ಇದೇ ಸ್ಥಳದಲ್ಲಿದ್ದ ನಗರಸಭೆಯ ಸಾರ್ವಜನಿಕ ಶೌಚಾಲಯವನ್ನು ನೆಲಸಮ ಮಾಡಿದ ಹಿಂದಿನ ನಗರಸಭೆಯ ಸದಸ್ಯ ಒಬ್ಬರು ನಕಲಿ ದಾಖಲೆಗಳನ್ನು ಸೃಷ್ಟಿಸಿ ಸ್ಥಳ ಕಬಳಿಸಲು ಯತ್ನಿಸಿದ್ದಾರೆ. ಕೂಡಲೆ ತ್ಯಾಜ್ಯವನ್ನು ತೆರವು ಮಾಡಿ, ಖಾಸಗಿ ಆಸ್ತಿಯಾಗಿದ್ದರೆ ನೋಟಿಸ್‌ ಜಾರಿ ಮಾಡಬೇಕು.

ನಿಗದಿತ ಅವಧಿಯೊಳಗೆ ನೋಟಿಸ್‌ಗೆ ಉತ್ತರ ದೊರೆಯದಿದ್ದರೆ ನಗರಸಭೆ ಸ್ಥಳವನ್ನು ವಶಪಡಿಸಿಕೊಂಡು ಸಾರ್ವ­ಜನಿಕ ಉಪಯೋಗಕ್ಕೆ ಮೀಸಲಿಡುವಂತೆ ಮಹಿಳೆಯರಾದ ರೇಣುಕಮ್ಮ, ಶಾರದಮ್ಮ ಇತರರು ಪೌರಾಯುಕ್ತರನ್ನು ಒತ್ತಾಯಿಸಿದರು.

ಇದಕ್ಕೆ ಸ್ಪಂದಿಸಿದ ಪೌರಾಯುಕ್ತ ಕೂಡಲೆ ಚಿಕನ್‌ ಸೆಂಟರ್‌ ವರ್ತಕರಿಗೆ ನೋಟಿಸ್‌ ಜಾರಿ ಮಾಡುವಂತೆ ಅಧೀನ ಸಿಬ್ಬಂದಿಗೆ ಸೂಚಿಸಿದರು. ಸೋಮವಾರದೊಳಗೆ ತ್ಯಾಜ್ಯವನ್ನು ತೆರವು ಮಾಡಿ ಸಾಗಿಸುವುದಾಗಿ  ಸ್ಥಳೀಯರಿಗೆ ಪೌರಾಯುಕ್ತ ಭರವಸೆ ನೀಡಿದರು.

ಪೌರಾಯುಕ್ತ ಭೇಟಿ ನೀಡಿದ ಕೇವಲ ಒಂದು ಗಂಟೆಯಲ್ಲೆ ಸಿಬ್ಬಂದಿ ಬ್ಲಿಚಿಂಗ್‌ ಪೌಡರ್‌ ಸುರಿದು ವಾಸನೆ ತಡೆದರು. 4ನೇ ವಾರ್ಡಿ ಡಿನ ಸದಸ್ಯ ಬಿ. ನಾಗರಾಜ, ಪರಿಸರ ಎಂಜಿನಿಯರ್‌ ಶರಣಪ್ಪ, ಆರೋಗ್ಯ ನಿರೀಕ್ಷಕರಾದ ದತ್ತಾತ್ರೇಯ ಹೆಗಡೆ, ಕಿಶನ್‌ರಾವ್‌ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.