ADVERTISEMENT

`ಪ್ರಧಾನಿ ಹುದ್ದೆಗೆ ಮೋದಿ ಸಮರ್ಥ'

​ಪ್ರಜಾವಾಣಿ ವಾರ್ತೆ
Published 25 ಜೂನ್ 2013, 10:42 IST
Last Updated 25 ಜೂನ್ 2013, 10:42 IST
ಕುಷ್ಟಗಿ ತಾಲ್ಲೂಕು ಕೊರಡಕೇರಾ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಸಚಿವ      ಎಸ್.ಕೆ.ಬೆಳ್ಳುಬ್ಬಿ ಮಾತನಾಡಿದರು. ಜಿಲ್ಲಾಧ್ಯಕ್ಷ ಗಿರೇಗೌಡ, ಶಾಸಕ ದೊಡ್ಡನಗೌಡ ಇತರರು ಇದ್ದರು
ಕುಷ್ಟಗಿ ತಾಲ್ಲೂಕು ಕೊರಡಕೇರಾ ಬಳಿ ನಡೆದ ಬಿಜೆಪಿ ಕಾರ್ಯಕರ್ತರ ಹಾಗೂ ಪದಾಧಿಕಾರಿಗಳ ಸಭೆಯಲ್ಲಿ ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಮಾತನಾಡಿದರು. ಜಿಲ್ಲಾಧ್ಯಕ್ಷ ಗಿರೇಗೌಡ, ಶಾಸಕ ದೊಡ್ಡನಗೌಡ ಇತರರು ಇದ್ದರು   

ಕುಷ್ಟಗಿ: ಗುಜರಾತ್ ಮುಖ್ಯಮಂತ್ರಿ ನರೇಂದ್ರ ಮೋದಿ ಪ್ರಧಾನಿ ಹುದ್ದೆಗೆ ಸಮರ್ಥರಾಗಿದ್ದು, ದೇಶದ ಜನತೆ ಅವರತ್ತ ಭವಿಷ್ಯದ ದೃಷ್ಟಿ ನೆಟ್ಟಿದೆ ಎಂದು ಮಾಜಿ ಸಚಿವ ಎಸ್.ಕೆ.ಬೆಳ್ಳುಬ್ಬಿ ಹೇಳಿದರು.

ಕೊರಡಕೇರಾದ ಪಾಟೀಲ ಫಾರ್ಮ್‌ದಲ್ಲಿ ಸೋಮವಾರ ನಡೆದ ಬಿಜೆಪಿ ತಾಲ್ಲೂಕು ಘಟಕದ ಕಾರ್ಯಕರ್ತರ, ಪದಾಧಿಕಾರಿಗಳ ಸಭೆಯಲ್ಲಿ ಮಾತನಾಡಿ, ಗುಜರಾತದಲ್ಲಿನ ಗೋದ್ರಾ ರೈಲು ಹತ್ಯಾಕಾಂಡಕ್ಕೆ ಪ್ರತೀಕಾರವಾಗಿ ನಂತರ ಗಲಭೆ ನಡೆದಿದೆ. ಅಲ್ಲಿನ ಮುಸಲ್ಮಾನರು ಮೋದಿ ಅಥವಾ ಬಿಜೆಪಿ ವಿರೋಧಿಗಳಲ್ಲ ಎಂಬುಕ್ಕೆ ನಂತರ ನಡೆದ ಚುನಾವಣೆ ಫಲಿತಾಂಶವೇ ಹೇಳುತ್ತದೆ. ಆದರೂ ನರೇಂದ್ರ ಮೋದಿ ಅವರ ಮೇಲೆ ಗೂಬೆ ಕೂರಿಸುವ ಕೆಲಸ ನಡೆದಿದೆ ಆರೋಪಿಸಿದರು.

ಪಕ್ಷದಲ್ಲಿನ ಒಡಕು, ಮತ ವಿಭಜನೆ ಇತರೆ ಕಾರಣಗಳಿಂದಾಗಿ ಕರ್ನಾಟಕದಲ್ಲಿನ ವಿಧಾನಸಭಾ ಚುನಾವಣೆಯಲ್ಲಿ ಸೋತು ಬಿಜೆಪಿ ಅಧಿಕಾರ ಕಳೆದುಕೊಳ್ಳಬೇಕಾಯಿತು, ನೀರಾವರಿ, ಕೆರೆಗಳಿಗೆ ನೀರು ತುಂಬಿಸುವುದು, ಅನೇಕ ಜನಪರ ಯೋಜನೆಗಳನ್ನು ಬಿಜೆಪಿ ಸರ್ಕಾರ ಜಾರಿಗೆ ತಂದರೂ ಜನ ಅದನು ತಿಳಿದುಕೊಳ್ಳಲೇ ಇಲ್ಲ ಎಂದು ವಿಷಾದಿಸಿದ ಬೆಳ್ಳುಬ್ಬಿ, ಪಕ್ಷಕ್ಕೆ ಭವಿಷ್ಯದ ದಿನಗಳು ಆಶಾದಾಯಕವಾಗಿದ್ದು  ಕಾರ್ಯಕರ್ತರು ಧೃತಿಗೆಡದೇ ಮುಂದಿನ ದಿನಗಳಲ್ಲಿ ಬಿಜೆಪಿಯನ್ನು ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರಕ್ಕೆ ತರುವುದಕ್ಕೆ ಈಗಿನಿಂದಲೇ ಕಂಕಣಬದ್ಧರಾಗಿ ದುಡಿಯಬೇಕು ಎಂದರು.

ಕಾಂಗ್ರೆಸ್ ಸರ್ಕಾರ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೀತಿ ನಿರ್ಧಾರಗಳನ್ನು ಟೀಕಿಸಿದ ಮಾಜಿ ಸಚಿವ, ಸಂಪುಟ ರಚನೆ ಮೊದಲೇ ಪ್ರಮುಖ ತೀರ್ಮಾನಗಳನ್ನು ತೆಗೆದುಕೊಳ್ಳಲಾಯಿತು. ಎಪಿಎಲ್ ಕಾರ್ಡ್‌ಗೆ ಅಕ್ಕಿ ರದ್ದು, ಕಡಿಮೆ ದರದ ಮದ್ಯ ತಯಾರಿಕೆ ಮೊದಲಾದ ತೀರ್ಮಾನ ತೆಗೆದುಕೊಂಡ ಕಾಂಗ್ರೆಸ್ ಸರ್ಕಾರ ಈಗ ಅವುಗಳನ್ನು ಅನುಷ್ಟಾನಗೊಳಿಸಲು ಸಾಧ್ಯವಾಗದೇ ಪೇಚಿಗೆ ಸಿಲುಕಿದ್ದು ತನ್ನಿಂದ ಯಾವುದನ್ನೂ ಮಾಡಲು ಸಾಧ್ಯವಾಗುವುದಿಲ್ಲ ಎಂಬುದನ್ನು ಮೊದಲೇ ಒಪ್ಪಿಕೊಂಡಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ದುಡ್ಡಿನ ದರ್ಪ ಮತ್ತು ಕಾಂಗ್ರೆಸ್ ಗಾಳಿಯಲ್ಲೂ ಕ್ಷೇತ್ರದ ಜನತೆ ತಮ್ಮನ್ನು ಆಯ್ಕೆ ಮಾಡುವ ಮೂಲಕ ಸೇವೆಗೆ ಅವಕಾಶ ಕಲ್ಪಿಸಿದ್ದಾರೆ. ರಾಜ್ಯದಲ್ಲಿ ಬಿಜೆಪಿ ಕಷ್ಟಕ್ಕೀಡಾದಾಗಲೆಲ್ಲ ಕ್ಷೇತ್ರದ ಜನತೆ ಕೈ ಹಿಡಿಯುತ್ತ ಬಂದಿದ್ದಾರೆ ಎಂದರು. ಜಿಲ್ಲಾಧ್ಯಕ್ಷ ಎಚ್.ಗಿರೇಗೌಡ, ಮುಖಂಡರಾದ ತಿಪ್ಪೇರುದ್ರಸ್ವಾಮಿ, ಪೀರಾಹುಸೇನ ಹೊಸಳ್ಳಿ ಮತ್ತಿತರರು ಮಾತನಾಡಿದರು.

ಪ್ರಮುಖರಾದ ವಿಠ್ಠಪ್ಪ ನಾಗೂರು, ರಾಜು ಬಾಕಳೆ, ನರಸಿಂಗರಾವ ಕುಲಕರ್ಣಿ, ಅಮರೇಗೌಡ ಪಾಟೀಲ, ಎಂ.ಡಿ.ಇನಾಯತ್, ಬಸವರಾಜ ಹಳ್ಳೂರು, ವೀರಣ್ಣ ಗಜೇಂದ್ರಗಡ, ತಾ.ಪಂ ಅಧ್ಯಕ್ಷ ಶರಣು ತಳ್ಳಿಕೇರಿ, ಪ್ರಹ್ಲಾದ ಕಟ್ಟಿ, ರಾಜು ಗಂಗನಾಳ ಮೊದಲಾದವರು ವೇದಿಕೆಯಲ್ಲಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT