ADVERTISEMENT

ಬರ: ಗಂಗಾವತಿ-ಯಥೇಚ್ಛ ನೀರು ಪೋಲು

​ಪ್ರಜಾವಾಣಿ ವಾರ್ತೆ
Published 20 ಏಪ್ರಿಲ್ 2012, 9:00 IST
Last Updated 20 ಏಪ್ರಿಲ್ 2012, 9:00 IST

ಗಂಗಾವತಿ: ಮುರಾರಿನಗರ, ಲಕ್ಷ್ಮಿಕ್ಯಾಂಪ್ ಮೊದಲಾದ ವಾರ್ಡ್‌ಗಳಿಗೆ ಕುಡಿಯುವ ನೀರು ಸರಬರಾಜು ಮಾಡುವ ಮೂರು ಇಂಚು ಗಾತ್ರದ ಮುಖ್ಯ ಪೈಪ್ ಒಡೆದು ಅಪಾರ ಪ್ರಮಾಣದ ನೀರು ಪೋಲಾದ ಘಟನೆ
ಸತ್ಕಾರ ವಸತಿ ನಿಯಲದ ಬಳಿ ಗುರುವಾರ ಸಂಭವಿಸಿದೆ.

ವಸತಿ ನಿಲಯದ ಬಳಿ ಇರುವ ಬಸ್‌ನಿಲ್ದಾಣ ರಸ್ತೆಯಿಂದ ಲಕ್ಷ್ಮಿ ಆಂಜನೇಯ ದೇವಸ್ಥಾನಕ್ಕೆ ತಿರುವು ಪಡೆದುಕೊಳ್ಳುವ ರಸ್ತೆ ಬದಿಯ ಚರಂಡಿ ಸಮೀಪದ ಕುಡಿಯುವ ನೀರಿನ ಪೈಪ್ ಒಡೆದು ಗಂಟೆಯಾದರೂ ನಗರಸಭೆ ಸಿಬ್ಬಂದಿ ತಕ್ಷಣಕ್ಕೆ ಸ್ಪಂದಿಸಲಿಲ್ಲ.

ಪರಿಣಾಮ ಸಾವಿರಾರು ಲೀಟರ್ ಪ್ರಮಾಣದಷ್ಟು ಕುಡಿಯುವ ನೀರು ವ್ಯರ್ಥವಾಗಿ ಒಡೆದ ಪೈಪನಿಂದ ಕಾರಂಜಿಯಂತೆ ಚಿಮ್ಮಿ ಚರಂಡಿ ಪಾಲಾಯಿತು. ನಗರಸಭೆಯ ಒಂದಿಬ್ಬರು ಎಂಜಿನಿಯರ್‌ಗಳು ತಕ್ಷಣಕ್ಕೆ ಸ್ಥಳಕ್ಕೆ ಆಗಮಿಸಿದರೂ ಕೂಡ ಪೋಲಾಗುತ್ತಿದ್ದ ನೀರು ತಡೆಯುವಲ್ಲಿ ವಿಫಲರಾದರು.

ಪೈಪ್ ಒಡೆದ ಸುದ್ದಿ ಕೇಳಿ ಜನರು ನೆರೆದು ಎಂಜಿನಿಯರ್‌ಗಳನ್ನು ತರಾಟೆಗೆ ತೆಗೆದುಕೊಳ್ಳುತ್ತಿದ್ದರು. ತಕ್ಷಣ ಸಿಬ್ಬಂದಿಯನ್ನು ಕರೆಯಿಸಲು ಒತ್ತಾಯಿಸುತ್ತಿದ್ದರು. ಆದರೆ ಎಂಜಿನಿಯರ್‌ಗಳ ದೂರವಾಣಿ ಕರೆಗೆ ಸ್ಪಂದನೆ ದೊರೆತದ್ದು ಸುಮಾರು 40 ನಿಮಿಷಗಳ ಬಳಿಕವಷ್ಟೆ.

ಜೆಸಿಬಿಯ ಕೆಲಸ:

ಆಗಾಗ ಮಳೆ ಸುರಿಯುತ್ತಿರುವುದರಿಂದ ನಗರದ ಚರಂಡಿ ಮೂಲಕ ನೀರು ಸರಾಗವಾಗಿ ಹರಿದು ಹೋಗಲು ಚರಂಡಿ ಸ್ವಚ್ಛಗೊಳಿಸುವ ಕಾರ್ಯಕ್ಕೆ ನೈರ್ಮಲ್ಯ ವಿಭಾಗದ ಸಿಬ್ಬಂದಿ ಬುಧವಾರದಿಂದ ವಾಹನಗಳ ಸಮೇತ ಕಾರ್ಯಾಚರಣೆಗೆ ಇಳಿದಿದೆ.

ಬುಧವಾರ ಸಂಜೆ ಸತ್ಕಾರ ಲಾಡ್ಜ್ ಬಳಿ ಚರಂಡಿಗೆ ಅಡ್ಡಹಾಕಿದ್ದ ಬೃಹತ್ ಕಲ್ಲುಗಳನ್ನು ಕಿತ್ತುವ ಸಂದರ್ಭದಲ್ಲಿ ಜೆಸಿಬಿಯ ಕೈಗೆ ಸಿಕ್ಕ ಕುಡಿಯುವ ನೀರಿನ ಪೈಪ್ ಸಿಕ್ಕಿದೆ. ಕ್ಷಣಾರ್ಧದಲ್ಲಿ ತುಂಡಾಗಿದೆ. ಆದರೆ ಈ ವಿಷಯವನ್ನು ಜೆಸಿಬಿ ಚಾಲಕ ಮೇಲಧಿಕಾರಿಯ ಗಮನಕ್ಕೆ ತಂದಿಲ್ಲ ಎನ್ನಲಾಗಿದೆ.

ಯಥಾರೀತಿ ನೀರುಗಂಟಿಗಳು ಗುರುವಾರ ಮುರಾರಿನಗರ, ಲಕ್ಷ್ಮಿಕ್ಯಾಂಪ್ ವಾರ್ಡ್‌ಗಳಿಗೆ ನೀರು ಬಿಟ್ಟಿದ್ದಾರೆ. ಪರಿಣಾಮ ಒಡೆದ ಪೈಪಿನಿಂದ ಅಪಾರ ಪ್ರಮಾಣದ ನೀರು ಪೋಲಾಗಿದೆ ಎಂದು ಪ್ರತ್ಯಕ್ಷದರ್ಶಿಗಳಾದ ಅಬ್ದುಲ್ ವಹಾಬ್ ಮುಲ್ಲಾ, ಮಸ್ಕಿ ಮಲ್ಲಿಕಾರ್ಜುನ ದೂರಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.