ADVERTISEMENT

ಬಿಎಸ್‍ಎನ್‍ಎಲ್ ಗುಣಮಟ್ಟ ಹೆಚ್ಚಲಿ

ದೂರಸಂಪರ್ಕ ಸಲಹಾ ಸಮಿತಿ ಸಭೆಯಲ್ಲಿ ಸಂಸದ ಸಂಗಣ್ಣ ಕರಡಿ ಸಲಹೆ, 3ಜಿ ಟವರ್ ಮಂಜೂರು

​ಪ್ರಜಾವಾಣಿ ವಾರ್ತೆ
Published 19 ಜೂನ್ 2018, 14:08 IST
Last Updated 19 ಜೂನ್ 2018, 14:08 IST
ಬಿಎಸ್‍ಎನ್‍ಎಲ್ ಗುಣಮಟ್ಟ ಹೆಚ್ಚಲಿ
ಬಿಎಸ್‍ಎನ್‍ಎಲ್ ಗುಣಮಟ್ಟ ಹೆಚ್ಚಲಿ   

ಕೊಪ್ಪಳ: ಟೆಲಿಕಾಂ ಕಂಪನಿಗಳು ಉತ್ತಮ ಸೇವೆ ಹಾಗೂ ಕಡಿಮೆ ದರದಲ್ಲಿ ಸೇವೆ ನೀಡುವ ಮೂಲಕ ಸ್ಪರ್ಧೆ ಒಡ್ಡುತ್ತಿದ್ದು, ಇಂತಹ ಸ್ಪರ್ಧಾತ್ಮಕ ಸಮಯದಲ್ಲಿ ಬಿಎಸ್‍ಎನ್‍ಎಲ್ ಉತ್ತಮ ಸೇವೆ ನೀಡುವ ಮೂಲಕ ತನ್ನ ಅಸ್ತಿತ್ವ ಉಳಿಸಿಕೊಳ್ಳುವ ಅಗತ್ಯವಿದೆ ಎಂದು ಕೊಪ್ಪಳ ಸಂಸದ ಸಂಗಣ್ಣ ಕರಡಿ ಹೇಳಿದರು.

ಜಿಲ್ಲಾ ಪಂಚಾಯಿತಿಯಲ್ಲಿ ಸೋಮವಾರ ಏರ್ಪಡಿಸಿದ್ದ ಬಿಎಸ್‍ಎನ್‍ಎಲ್ ದೂರಸಂಪರ್ಕ ಸಲಹಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ವಿವಿಧ ಟೆಲಿಕಾಂ ಕಂಪನಿಗಳು ಈಗಾಗಲೇ 4ಜಿ ಸೇವೆಯನ್ನು ನೀಡುತ್ತಿವೆ. ಆದರೆ, ಬಿಎಸ್‍ಎನ್‍ಎಲ್ ಇನ್ನೂ 3ಜಿ ಸೇವೆಯನ್ನು ವಿಸ್ತರಿಸುವುದರಲ್ಲಿಯೇ ಇದೆ. ಇನ್ನು ಸ್ಥಿರ ದೂರವಾಣಿ ಸಂಪರ್ಕಕ್ಕೆ ಉತ್ತೇಜನ ನೀಡಲು ಬಿಎಸ್‍ಎನ್‍ಎಲ್ ₹ 99 ನೂತನ ಪ್ಲಾನ್ ಜಾರಿಗೊಳಿಸಿ ಎರಡು ತಿಂಗಳುಗಳೇ ಕಳೆದಿದ್ದರೂ, ಇನ್ನೂ ಜನರಿಗೆ ಈ ಮಾಹಿತಿ ತಲುಪಿಸಲು ಅಧಿಕಾರಿಗಳು ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ADVERTISEMENT

ಬಿಎಸ್‍ಎನ್‍ಎಲ್ ಸ್ಪರ್ಧಾತ್ಮಕ ದರಗಳನ್ನು ನಿಗದಿಪಡಿಸಿ, ವಿಶೇಷ ಆಫರ್‌ಗಳನ್ನು ನೀಡಿದ್ದರೂ, ಪ್ರಚಾರದ ಕೊರತೆಯಿಂದ ಜನರಿಗೆ ಇದು ತಿಳಿಯುತ್ತಿಲ್ಲ. ಬಿಎಸ್‍ಎನ್‍ಎಲ್ ಅಧಿಕಾರಿಗಳು ತಮ್ಮ ಕಚೇರಿಯನ್ನು ಬಿಟ್ಟು ಜನರ ಬಳಿ ಹೋಗುವ ಕಾರ್ಯ ಮಾಡುತ್ತಿಲ್ಲ. ಹೀಗಾಗಿ ಸಂಸ್ಥೆಯ ಸೇವೆ ಬಗ್ಗೆ ಜನರಲ್ಲಿ ವಿಶ್ವಾಸದ ಕೊರತೆ ಇದೆ ಎಂದು ಹೇಳಿದರು.

47 ಹೊಸ 3ಜಿ ಟವರ್ ಮಂಜೂರು: ಕೊಪ್ಪಳ ಮತ್ತು ರಾಯಚೂರು ಜಿಲ್ಲೆಗಳಲ್ಲಿ 3ಜಿ ಸೇವೆ ಇನ್ನೂ ಎಲ್ಲೆಡೆ ಲಭ್ಯವಾಗುತ್ತಿಲ್ಲ. ಹೀಗಾಗಿ 3ಜಿ ಸೇವೆಯನ್ನು ವಿಸ್ತರಿಸುವ ನಿಟಿನಲ್ಲಿ ಕೊಪ್ಪಳ ಜಿಲ್ಲೆಯಲ್ಲಿ 21 ಹಾಗೂ ರಾಯಚೂರು ಜಿಲ್ಲೆಯಲ್ಲಿ 26 ಕಡೆ ಹೊಸದಾಗಿ 3ಜಿ ಟವರ್ ನಿರ್ಮಿಸಲು ಮಂಜೂರಾತಿ ದೊರೆತಿದೆ ಎಂದು ಹೇಳಿದರು.

ಅಲ್ಲದೆ ಕೊಪ್ಪಳ ಜಿಲ್ಲೆಯ 49 ಗ್ರಾಮಗಳಲ್ಲಿ ವೈಫೈ, ಹಾಟ್‌ಸ್ಪಾಟ್‌ ಸೇವೆ ಒದಗಿಸುವ ಯೋಜನೆ ಪ್ರಗತಿಯಲ್ಲಿದೆ. ಜಿಲ್ಲೆಯ ಹಿರೇಸಿಂದೋಗಿ ಹಾಗೂ ತಳಕಲ್‌ನಲ್ಲಿ ಈಗಾಗಲೆ ಸೇವೆ ಪ್ರಾರಂಭಿಸಲಾಗಿದೆ. ಬಿಎಸ್‍ಎನ್‍ಎಲ್ ಸಂಪರ್ಕ ಸೇವೆಯನ್ನು ಉತ್ತಮಪಡಿಸಲು ಆಪ್ಟಿಕಲ್ ಫೈಬರ್ ಸಂಪರ್ಕ ಜಾಲ ವಿಸ್ತರಿಸಲಾಗುತ್ತಿದ್ದು, ಕೊಪ್ಪಳ ಹಾಗೂ ರಾಯೂಚೂರು ಜಿಲ್ಲೆಯ ಒಟ್ಟು 340 ಗ್ರಾಮ ಪಂಚಾಯತಿಗಳಿಗೆ ಬ್ರಾಡ್‌ಬ್ಯಾಂಡ್ ಸೇವೆ ಒದಗಿಸಲಾಗಿದೆ. ಒಟ್ಟು 1,171.8 ಕಿ.ಮೀ. ಆಪ್ಟಿಕಲ್ ಫೈಬರ್ ಜಾಲ ವಿಸ್ತರಿಸಲಾಗಿದೆ ಎಂದು ಹೇಳಿದರು.

ಬಿಎಸ್‍ಎನ್‍ಎಲ್ ರಾಯಚೂರು-ಕೊಪ್ಪಳ ಟೆಲಿಕಾಂ ಜಿಲ್ಲೆಯ ಜನರಲ್ ಮ್ಯಾನೇಜರ್ ವಿವೇಕ್ ಜೈಸ್ವಾಲ್ ಮಾತನಾಡಿ, ಕೊಪ್ಪಳ ಹಾಗೂ ರಾಯಚೂರ ಜಿಲ್ಲೆಯಲ್ಲಿ ಒಟ್ಟು 129 ಟೆಲಿಕಾಂ ಎಕ್ಸ್‌ಚೇಂಜ್‌ಗಳಿದ್ದು, 15,408 ಸ್ಥಿರ ದೂರವಾಣಿ ಸಂಪರ್ಕ ಇವೆ. ಅಲ್ಲದೆ 2,29,425 ಬಿಎಸ್‍ಎನ್‍ಎಲ್ ಪ್ರಿಪೇಯ್ಡ್ ಮೊಬೈಲ್ ಹಾಗೂ 3,778 ಪೋಸ್ಟ್‌ಪೇಯ್ಡ್‌ ಮೊಬೈಲ್ ಗ್ರಾಹಕರಿದ್ದಾರೆ. ಬಿಎಸ್‍ಎನ್‍ಎಲ್ ನಲ್ಲಿ 4ಜಿ ಸೇವೆಯನ್ನು ನೀಡಬೇಕೆನ್ನುವ ಬೇಡಿಕೆ ವ್ಯಕ್ತವಾಗುತ್ತಿದ್ದು, ಇನ್ನೂ ಮೂರ್ನಾಲ್ಕು ತಿಂಗಳುಗಳಲ್ಲಿ 4ಜಿ ಸೇವೆ ಲಭ್ಯವಾಗುವ ನಿರೀಕ್ಷೆ ಇದೆ ಎಂದರು.

ಸಲಹಾ ಸಮಿತಿ ಸದಸ್ಯ ಸಿಂಧನೂರಿನ ಮಧ್ವಾಚಾರ್ಯ ಮಾತನಾಡಿ, ಅಂಚೆ ಇಲಾಖೆ ಹಾಗೂ ಆಕಾಶವಾಣಿಯನ್ನು ಈಗಿನ ಕೇಂದ್ರ ಸರ್ಕಾರ ಹಲವು ಹೊಸ ಹೊಸ ಯೋಜನೆಗಳನ್ನು ರೂಪಿಸುವ ಮೂಲಕ ನಷ್ಟದಲ್ಲಿದ್ದ ಇಲಾಖೆಗಳನ್ನು ಲಾಭದತ್ತ ಮುಖ ಮಾಡುವಂತೆ ಮಾಡಿದೆ. ಅದೇ ರೀತಿ ಬಿಎಸ್‍ಎನ್‍ಎಲ್ ಅನ್ನೂ ಕೂಡ ಮುಂಚೂಣಿಗೆ ಬರುವಂತೆ ಮಾಡಲು ಆರ್ಥಿಕ ಮತ್ತು ತಾಂತ್ರಿಕ ತಜ್ಞರ ಸಲಹೆಗಳನ್ನು ಪಡೆಯಬೇಕಿದೆ ಎಂದು ಹೇಳಿದರು.

ಸಭೆಯಲ್ಲಿ ಬಿಎಸ್‍ಎನ್‍ಎಲ್ ಉಪ ಪ್ರಧಾನ ವ್ಯವಸ್ಥಾಪಕಿ ರಾಧಾ, ಮುಖ್ಯ ಲೆಕ್ಕಾಧಿಕಾರಿ ಶ್ರೀನಿವಾಸ ಪದಕಿ, ಸಲಹಾ ಸಮಿತಿ ಸದಸ್ಯರಾದ ಸಿದ್ದಾರೆಡ್ಡಿ ಡಂಬ್ರಳ್ಳಿ, ವಿರುಪಾಕ್ಷಪ್ಪ ಭತ್ತದ ಹಾಗೂ ಕೊಪ್ಪಳದ ಕಚೇರಿ ಅಧಿಕಾರಿ ರವಿಕುಮಾರ ನಾಯಕ್ ಇದ್ದರು.

'ಡಿಜಿಟಲ್ ಇಂಡಿಯಾಕ್ಕೆ ಅಡ್ಡಿ'

ಪ್ರತಿಯೊಂದು ಗ್ರಾಮ ಪಂಚಾಯಿತಿಗಳಿಗೂ  ಉತ್ತಮ ಟೆಲಿಕಾಂ, ಬ್ರಾಡ್‍ಬ್ಯಾಂಡ್ ಸೇವೆ ನೀಡುವ ಮೂಲಕ ಡಿಜಿಟಲ್ ಭಾರತವನ್ನು ನಿರ್ಮಿಸಲು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಆದರೆ, ಇದಕ್ಕೆ ಬಿಎಸ್‍ಎನ್‍ಎಲ್ ಅಧಿಕಾರಿಗಳ ಸ್ಪಂದನೆ ನಿರೀಕ್ಷಿತ ಮಟ್ಟದಲ್ಲಿಲ್ಲ ಎಂದು  ಸಂಸದ ಸಂಗಣ್ಣ ಕರಡಿ ಬೇಸರ ವ್ಯಕ್ತಪಡಿಸಿದರು.

ಬಿಎಸ್‍ಎನ್‍ಎಲ್ ಯಾವುದೇ  ಗುರಿ ಹೊಂದಿಲ್ಲದೇ ಇರುವುದರಿಂದ ಪ್ರಗತಿ ಸಾಧ್ಯವಾಗುತ್ತಿಲ್ಲ. ಇನ್ನಾದರೂ ಬಿಎಸ್‍ಎನ್‍ಎಲ್ ಅಧಿಕಾರಿಗಳು ತಮ್ಮ ಕಾರ್ಯವೈಖರಿ  ಬದಲಿಸಿಕೊಳ್ಳಬೇಕು  ಎಂದು ಸೂಚಿಸಿದರು.

ಬಿಎಸ್‍ಎನ್‍ಎಲ್ ಉತ್ತಮ ಗುಣಮಟ್ಟದ ಸೇವೆ ನೀಡುವ ಮೂಲಕ ಸ್ಪರ್ಧಾತ್ಮಕ ಕಾಲದಲ್ಲಿ ತನ್ನ ಅಸ್ತಿತ್ವ ಉಳಿಸಿಕೊಳ್ಳಬೇಕು ಎಂದು ಹೇಳಿದರು

ಬಿಎಸ್‍ಎನ್‍ಎಲ್ ಪ್ರಚಾರದಲ್ಲಿ ತೀವ್ರ ಹಿಂದುಳಿದಿದ್ದು, ಆಫರ್‌ಗಳನ್ನು ಜನರು ಕಚೇರಿಗೆ ಹೋಗಿಯೇ ತಿಳಿದುಕೊಳ್ಳಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ
ಮಧ್ವಾಚಾರ್ಯ, ಸಲಹಾ ಸಮಿತಿ ಸದಸ್ಯ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.