ADVERTISEMENT

ಬಿಜೆಪಿಯಲ್ಲಿ ಮೇರೆ ಮೀರಿದ ಗುಂಪುಗಾರಿಕೆ

​ಪ್ರಜಾವಾಣಿ ವಾರ್ತೆ
Published 1 ಜುಲೈ 2013, 5:42 IST
Last Updated 1 ಜುಲೈ 2013, 5:42 IST

ಗಂಗಾವತಿ: ಬಿಜೆಪಿ ಗ್ರಾಮೀಣ ಮತ್ತು ನಗರ ಘಟಕದ ಅಧ್ಯಕ್ಷ ಮತ್ತು ಪದಾಧಿಕಾರಿಗಳ ಆಯ್ಕೆ ಸಂಬಂಧ ಭಾನುವಾರ ಪಕ್ಷದ ಕಚೇರಿಯಲ್ಲಿ ಕರೆಯಲಾಗಿದ್ದ ಸಭೆಯು ಗೊಂದಲಗೂಡಾಗಿತ್ತು. ಗುಂಪುಗಾರಿಕೆಯ ಪರಿಣಾಮವಾಗಿ ಕಾರ್ಯಕರ್ತರು ಪರಸ್ಪರ ಕೈ ಕೈಮಿಲಾಯಿಸುವ ಹಂತಕ್ಕೆ ಹೋದರು.

ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಎಚ್.ಗಿರೇಗೌಡ ಅಧ್ಯಕ್ಷತೆಯಲ್ಲಿ ಪದಾಧಿಕಾರಿಗಳ ಆಯ್ಕೆಗೆ ಕರೆಯಲಾಗಿದ್ದ ಸಭೆಯಲ್ಲಿ ಸಂಸದ ಎಸ್.ಶಿವರಾಮಗೌಡ, ಕುಷ್ಟಗಿ ಶಾಸಕ ದೊಡ್ಡನಗೌಡ ಪಾಟೀಲ್, ಮಾಜಿ ಶಾಸಕ ಪರಣ್ಣ ಮುನವಳ್ಳಿ ಮೊದಲಾದ ಮುಖಂಡರು ಭಾಗವಹಿಸಿದ್ದರು.

ವಿಷಯ ಪ್ರಸ್ತಾಪವಾಗುತ್ತಿದ್ದಂತಯೆ ಹುದ್ದೆಗಳ ಅಕಾಂಕ್ಷಿ ಬಣದ ಕಾರ್ಯಕರ್ತರು, ಬೆಂಬಲಿಗರು ಮುಖಂಡರ ಮೇಲೆ ಒತ್ತಡ ಹೇರಲು ಯತ್ನಿಸಿದರು. ಮತ್ತೊಂದು ಬಣ ವಿರೋಧ ವ್ಯಕ್ತಪಡಿಸಿತು.

ಸಭೆಯಲ್ಲಿ ಕಾರ್ಯಕರ್ತರ ಮಧ್ಯೆ ಪರ, ವಿರೋಧ ಅಭಿಪ್ರಾಯ ವ್ಯಕ್ತವಾಗುತ್ತಿದ್ದಂತೆ ಕಾರ್ಯಕರ್ತರು, ಮುಖಂಡರ ಮಧ್ಯೆ ಮಾತಿನ ಚಕಮಕಿ ನಡೆಯಿತು. ಪರಿಸ್ಥಿತಿ ನಿಭಾಯಿಸಲು ಮುಖಂಡರು ಎಷ್ಟೇ ಯತ್ನಿಸಿದರು ಅಸಮಾಧಾನ ಶಮನವಾಗಲಿಲ್ಲ.

ಬಣಗಳ ವಾದ: ನಗರ ಘಟಕದ ಅಧ್ಯಕ್ಷ ಮನೋಹರ ಹೇರೂರು, ಪಕ್ಷ ಸಂಘಟನೆಯಲ್ಲಿ ಕ್ರೀಯಾಶೀಲರಾಗಿದ್ದು ಅವರನ್ನು ಮತ್ತೊಂದು ಅವಧಿಗೆ ಮುಂದುವರೆಸುವಂತೆ ಬೆಂಬಲಿಗರು ಒತ್ತಡ ಹೇರಿದರು. ಮುಖಂಡ ಟಿ.ಆರ್.ರಾಯಭಾಗರನ್ನು ನೇಮಿಸುವಂತೆ ಮತ್ತೊಂದು ಬಣ ಮುಖಂಡರ ಮೇಲೆ ಒತ್ತಡ ಹೇರಿತು.

ಗ್ರಾಮೀಣ ಘಟಕಕ್ಕೆ ಪ್ರಮುಖವಾಗಿ ಎಪಿಎಂಸಿ ಮಾಜಿ ಸದಸ್ಯ ಚನ್ನನಗೌಡ ಕೋರಿ, ಕೃಷಿಕ ಸಮಾಜದ ಚನ್ನಪ್ಪ ಮಾಳಗಿ ಮತ್ತು ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಸಿದ್ದರಾಮಯ್ಯ ಸ್ವಾಮಿ ಅವರ ಹೆಸರು ಸಭೆಯಲ್ಲಿ ಪ್ರಸ್ತಾಪವಾದವು.

ಸಭೆಯಲ್ಲಿ ಪದಾಧಿಕಾರಿಗಳ ಅವಿರೋಧ ಆಯ್ಕೆಗೆ ಅವಕಾಶ ದೊರೆಯದ್ದರಿಂದ ಮುಖಂಡರು, ಬೆಂಬಲಿಗರನ್ನು ಪ್ರತ್ಯೇಕವಾಗಿ ಕರೆದು ಅಭಿಪ್ರಾಯ ಸಂಗ್ರಹಿಸಿದರು. ಕಾರ್ಯಕರ್ತರ ಆಕ್ರೋಶದಿಂದ ಪಾರಾಗಲು ಕೊನೆಗೆ ಎಲ್ಲ ಮುಖಂಡರು ಸೇರಿ ಆಯ್ಕೆ ಮುಂದೂಡುವ ನಿರ್ಣಯಕೈಗೊಂಡರು.

ಆಯ್ಕೆ ಮುಂದೂಡಿಕೆ
ಸ್ಥಾನಿಕ ಸಮಿತಿಗಳಿಗೆ ಪದಾಧಿಕಾರಿಗಳ ಆಯ್ಕೆ ಪೂರ್ಣವಾಗದ ಹಿನ್ನೆಲೆ ನಗರ ಮತ್ತು ಗ್ರಾಮೀಣ ಮಂಡಲಾಧ್ಯಕ್ಷರ ಆಯ್ಕೆ ಮುಂದೂಡಲಾಗಿದೆ ಎಂದು ಪಕ್ಷದ ಜಿಲ್ಲಾ ಚುನಾವಣಾ ಉಸ್ತುವಾರಿ ಮುಖ್ಯಸ್ಥ ಮೋಹನರೆಡ್ಡಿ ತಿಳಿಸಿದ್ದಾರೆ.

ತಾಲ್ಲೂಕಿನ ನಗರ, ಗ್ರಾಮೀಣ ಭಾಗದಲ್ಲಿ ಶೇ 80ರಷ್ಟು ಸ್ಥಾನಿಕ ಸಮಿತಿ ರಚನೆಯಾಗಿರಬೇಕು. ಆದರೆ ಶೇ 50ರಷ್ಟು ಮಾತ್ರ ಪೂರ್ಣವಾಗಿವೆ. ಈ ಹಿನ್ನೆಲೆ ನಗರ ಮತ್ತು ಗ್ರಾಮೀಣ ಮಂಡಲಾಧ್ಯಕ್ಷರ ಆಯ್ಕೆ ತಾತ್ಕಾಲಿಕ ಮುಂದೂಡಲಾಗಿದೆ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.