ADVERTISEMENT

ಬೆಳೆ ನಾಶ ಖಂಡಿಸಿ ಪ್ರತಿಭಟನೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2017, 8:34 IST
Last Updated 20 ಅಕ್ಟೋಬರ್ 2017, 8:34 IST

ಕನಕಗಿರಿ: ಸಮೀಪದ ತಿಪ್ಪನಾಳ ಗ್ರಾಮದ ಸರ್ವೆ ಸಂಖ್ಯೆ 29/ಎ, 29/ಬಿ, 36, 35/1,  35/2 , 36/1ರ 49 ಎಕರೆ ಪ್ರದೇಶದಲ್ಲಿ ಯಥಾಸ್ಥಿತಿ ಕಾಪಾಡದೆ ಬೆಳೆ ನಾಶ ಮಾಡಿರುವ ಚಿರಸ್ಥಾಯಿ ಸೋಲಾರ್ ಕಂಪೆನಿ ವಿರುದ್ಧ ದಲಿತ ಕುಟುಂಬಗಳು ಬುಧವಾರ ಪ್ರತಿಭಟನೆ ನಡೆಸಿದವು.

ಈ ವೇಳೆ ಮಾತನಾಡಿದ ಸಿಪಿಐ (ಎಂಎಲ್)  ರಾಜ್ಯ ಕಾರ್ಯದರ್ಶಿ ಜೆ. ಭಾರಧ್ವಾಜ್,‘ಪೊಲೀಸರು ಸಹ ಕಂಪೆನಿ ಪರವಾಗಿ ಕೆಲಸ ಮಾಡಿದ್ದು, ನ್ಯಾಯಾಲಯದ ಆದೇಶ ಪಾಲಿಸುವಲ್ಲಿ ವಿಫಲರಾಗಿದ್ದಾರೆ’ ಎಂದು ದೂರಿದರು.

ಸಿಪಿಐ (ಎಂಎಲ್‌)  ಕನಕಗಿರಿ ಕ್ಷೇತ್ರದ ಅಧ್ಯಕ್ಷ ಕೆಂಚಪ್ಪ ಹಿರೇಖೇಡ ಮಾತನಾಡಿ, 96 ಎಕರೆಯಲ್ಲಿ ಬೆಳೆದ ಬೆಳೆ ನಾಶ ಮಾಡುವಾಗ ಬಂದ  ಪೊಲೀಸರು ಈಗ ಏಕೆ ದಲಿತರಿಗ ರಕ್ಷಣೆ ಕೊಡುತ್ತಿಲ್ಲ ಎಂದು ಪ್ರಶ್ನಿಸಿದರು. ಬಡ ದಲಿತರ ಹೊಟ್ಟೆ ಮೇಲೆ ಬರೆ ಹಾಕಿದ ಪೊಲೀಸರು, ಅಧಿಕಾರಿಗಳ ರಕ್ಷಣೆಗೆ ನಿಂತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ADVERTISEMENT

ದಲಿತ ಕುಟುಂಬಗಳು ಸೋಲಾರ್‌ ಕಂಪೆನಿ  ಕಚೇರಿಗೆ ಮುತ್ತಿಗೆ ಹಾಕಿ ಆಕ್ರೋಶ ವ್ಯಕ್ತಪಡಿಸಿದವು. ಕಂದಾಯ ನಿರೀಕ್ಷಕ ವಿಜಯಕುಮಾರ ಚಿತ್ರಗಾರ ಸ್ಥಳಕ್ಕೆ ಭೇಟಿ ನೀಡಿ ಆಯೋಗದ ಆದೇಶದಂತೆ ಭೂಮಿಯಲ್ಲಿ ಯಾವುದೇ ಕಾರ್ಯಾಚರಣೆ ನಡೆಸದೆ ಯಥಾಸ್ಥಿತಿ ಕಾಪಾಡುವಂತೆ ಸೂಚಿಸಿದರು.

ಕರ್ನಾಟಕ ರಾಜ್ಯ ರೈತ ಸಂಘದ ಜಿಲ್ಲಾ ಘಟಕದ ಉಪಾಧ್ಯಕ್ಷ ಹೇಮರಾಜ ವೀರಾಪುರ, ಸಾಗುವಳಿದಾರರಾದ ಹುಲಿಗೆಮ್ಮ, ಮರಿಯಮ್ಮ, ಸಿದ್ದಮ್ಮ ಪ್ರಮುಖರಾದ ನೀಲಕಂಠ ಬಡಿಗೇರ, ಪಾಂಡಪ್ಪ, ಬಸಪ್ಪ ಅರಳಿಗನೂರು, ಕುಮಾರಸ್ವಾಮಿ, ವೆಂಕಟೇಶ ಬಡಿಗೇರ, ರಮೇಶ ಇದ್ದರು,

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.