ADVERTISEMENT

ಬೆಳ್ಳಂಬೆಳಗ್ಗೆ ಮತ್ತೆ ರಸ್ತೆ ವಿಸ್ತರಣೆ

​ಪ್ರಜಾವಾಣಿ ವಾರ್ತೆ
Published 27 ಜೂನ್ 2012, 9:45 IST
Last Updated 27 ಜೂನ್ 2012, 9:45 IST
ಬೆಳ್ಳಂಬೆಳಗ್ಗೆ ಮತ್ತೆ ರಸ್ತೆ ವಿಸ್ತರಣೆ
ಬೆಳ್ಳಂಬೆಳಗ್ಗೆ ಮತ್ತೆ ರಸ್ತೆ ವಿಸ್ತರಣೆ   

ಗಂಗಾವತಿ: ಕಳೆದ ಮೂರು ತಿಂಗಳ ಹಿಂದೆ ರಸ್ತೆ ವಿಸ್ತರಣೆ ಕಾರ್ಯಾಚರಣೆ ಕೈಗೊಂಡು ವರ್ತಕರ ಒತ್ತಡಕ್ಕೆ ಮಣಿದು ಸ್ಥಗಿತಗೊಳಿಸಿದ್ದ ನಗರಸಭೆ ಇದ್ದಕ್ಕಿದ್ದಂತೆ ಮಂಗಳವಾರ ಬೆಳ್ಳಂಬೆಳಗ್ಗೆ ಭಾರಿ ಪೊಲೀಸ್ ಬಂದೋಬಸ್ತ್‌ನಲ್ಲಿ ಅಂತಿಮ ಹಂತದ ಕಾರ್ಯಾಚರಣೆ ಕೈಗೊಂಡಿತು.

ನಗರಸಭೆಯ ಪೌರಾಯುಕ್ತ ನಿಂಗಣ್ಣ ಎಚ್. ಕುಮ್ಮಣ್ಣನವರ್ ನೇತೃತ್ವದಲ್ಲಿ ನಗರಸಭೆಯ ಕಾರ್ಯಪಾಲಕ, ಸಹಾಯಕ ಎಂಜಿನಿಯರ್ ಹಾಗೂ ಸಿಬ್ಬಂದಿ ಮೂರ‌್ನಾಲ್ಕು ಜೆಸಿಬಿ ವಾಹನದಿಂದ ರಸ್ತೆಯಲ್ಲಿದ್ದ ಅಕ್ರಮ ಕಟ್ಟಡಗಳನ್ನು ನೆಲಸಮ ಮಾಡಲು ಮುಂದಾದವು. ಬೆಳ್ಳಂಬೆಳಗ್ಗೆ ಆರಂಭವಾದ ನಗರಸಭೆಯ ರಸ್ತೆ ವಿಸ್ತರಣೆಯ ಸಮರೋಪಾದಿಯ ಕಾರ್ಯಾಚರಣೆ ನಾಗರಿಕರಲ್ಲಿ ಕುತೂಹಲ ಮೂಡಿಸಿತ್ತು. ರಸ್ತೆ ಬದಿ ತಂಡೋಪ ತಂಡವಾಗಿ ನಿಂತ ಜನ ಕಟ್ಟಡಗಳು ನೆಲಸಮವಾಗುವುದನ್ನು ಕುತೂಹಲದಿಂದ ನೋಡುತ್ತಿದ್ದರು.

ಗಡುವು ಮುಗಿದಿತ್ತು: ಜಿಲ್ಲಾಧಿಕಾರಿ ಡಾ. ತುಳಸಿ ಮದ್ದಿನೇನಿ ಅವರ ಮುಂದಾಳತ್ವದಲ್ಲಿ ಕಳೆದ ಮಾರ್ಚ್‌ನಲ್ಲಿಯೆ ರಸ್ತೆ ವಿಸ್ತರಣೆ ಕಾಮಗಾರಿಗೆ ಚಾಲನೆ ನೀಡಿದ್ದ ನಗರಸಭೆ, ವರ್ತಕರ ಒತ್ತಡ ಹಾಗೂ ಚುನಾಯಿತರ ಹಸ್ತಕ್ಷೇಪದಿಂದಾಗಿ ವರ್ತಕರಿಗೆ ಗಡುವು ವಿಧಿಸಿ ಕಾರ್ಯಾಚರಣೆ ಸ್ಥಗಿತಗೊಳಿಸಿತ್ತು.

ಅನಧಿಕೃತ ಕಟ್ಟಡಗಳನ್ನು ಸ್ವಯಂ ಪ್ರೇರಣೆಯಿಂದ ತೆರವು ಮಾಡಿಕೊಳ್ಳುವಂತೆ ಅವಕಾಶ ನೀಡಿದ್ದ ನಗರಸಭೆ, ಅದಕ್ಕೆ ಏಪ್ರಿಲ್ ತಿಂಗಳ ಗಡುವು ವಿಧಿಸಿತ್ತು. ಈ ಸದರ್ಭದಲ್ಲಿ ಶೇ,75ರಷ್ಟು ವರ್ತಕರು ತಮ್ಮ ಕಟ್ಟಡಗಳನ್ನು ಹಿಂದಕ್ಕೆ ಪಡೆದಿದ್ದರು.

ಆದರೆ ಇನ್ನುಳಿದ ಶೇ, 25ರಷ್ಟು ವರ್ತಕರು ಜಪ್ಪಯ್ಯ ಎಂದರೂ ರಸ್ತೆ ಬಿಟ್ಟು ಸರಿದಿರಲಿಲ್ಲ. ಅತ್ತ ಎಪ್ರಿಲ್ ಗಡುವು ಮುಗಿದು ಮೇ, ಜೂನ್ ತಿಂಗಳು ಮುಗಿಯುತ್ತಾ ಬಂದರೂ ನಗರಸಭೆ ರಸ್ತೆ ವಿಸ್ತರಣೆಯ ಬಗ್ಗೆ ತಲೆ ಕೆಡಿಸಿಕೊಂಡಿರಲಿಲ್ಲ. 

ಇದರಿಂದ ಸಾರ್ವಜನಿಕ ಮತ್ತು ವಾಹನ ಓಡಾಟಕ್ಕೆ ತೊಂದರೆಯಾಗಿತ್ತು. ನಗರಸಭೆ ಮತ್ತು ಜಿಲ್ಲಾಡಳಿತ ಕಾರ್ಯವೈಖರಿ ಖಂಡಿಸಿ ಮಾಧ್ಯಮಗಳಲ್ಲಿ ವರದಿ ಪ್ರಕಟವಾಗಿದ್ದರಿಂದ ಎಚ್ಚೆತ್ತ ಜಿಲ್ಲಾಡಳಿತ ಮತ್ತೆ ರಸ್ತೆ ವಿಸ್ತರಣೆಗೆ ಮಂಗಳವಾರ ಚಾಲನೆ ನೀಡಿತ್ತು. 

ಸೆಟ್ ಬ್ಯಾಕ್ ವಿವಾದ:
ರಸ್ತೆ ಮಧ್ಯಭಾಗದಿಂದ ಉಬಯ ಭಾಗದಲ್ಲಿ 35 ಅಡಿಯಷ್ಟು ಕಟ್ಟಡಗಳನ್ನು ಹಿಂದಕ್ಕೆ ಪಡೆಯುವಂತೆ ನಗರಸಭೆ ವರ್ತಕರಿಗೆ ಸೂಚಿಸಿತ್ತು. ಆದರೆ ಕೆಲ ಭಾಗದಲ್ಲಿ ಕೇವಲ 25ರಿಂದ 30 ಅಡಿವರೆಗೆ ಮಾತ್ರ ಕಟ್ಟಡ ತೆರವು ಮಾಡಲಾಗಿತ್ತು.

30 ಅಡಿ ರಸ್ತೆ, ಐದು ಅಡಿ ಫುಟ್‌ಪಾತ್ ನಿರ್ಮಾಣಕ್ಕೆ ನಗರಸಭೆಯ ಯೋಜಿಸಿತ್ತು. ಈ ಹಿನ್ನೆಲೆ ಸಿಬಿಎಸ್ ವೃತ್ತದಿಂದ ಮಹಾತ್ಮಗಾಂಧಿ ವೃತ್ತದವರೆಗೆ ರಸ್ತೆ ವಿಸ್ತರಣೆ ಕಾರ್ಯಕ್ಕೆ ಕೈಹಾಕಿತ್ತು. ಬಂದೋಬಸ್ತ್ ನೀಡಲು ಜಿಲ್ಲೆಯ ವಿವಿಧ ಭಾಗದಿಂದ ಹೆಚ್ಚಿನ ಸಂಖ್ಯೆಯಲ್ಲಿ ಪೊಲೀಸರು ಆಗಮಿಸಿದ್ದರು.   
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.