ADVERTISEMENT

`ಭಗವದ್ಗೀತೆ ಶಾಂತಿಯುತ ಬಾಳಿಗೆ ಪ್ರೇರಣೆ'

​ಪ್ರಜಾವಾಣಿ ವಾರ್ತೆ
Published 27 ಡಿಸೆಂಬರ್ 2012, 9:17 IST
Last Updated 27 ಡಿಸೆಂಬರ್ 2012, 9:17 IST

ಹನುಮಸಾಗರ: ಭಗವದ್ಗೀತೆಯಂತಹ ಗ್ರಂಥಗಳ ಅಧ್ಯಯನ ಮಾಡುವುದರಿಂದ ಮಾನವನ ಲೌಕಿಕ ಬದುಕಿಗೆ ಸಂಸ್ಕಾರ ನೀಡುವುದರ ಜೊತೆಗೆ ಶಾಂತಿಯುತ ಬಾಳಿಗೆ ಪ್ರೇರಣೆಯಾಗುತ್ತವೆ ಎಂದು ಸುಧಾ ಪಂಡಿತ ಪ್ರಮೋದ ಆಚಾರ ಪೂಜಾರ ಹೇಳಿದರು.

ಮಂಗಳವಾರ ಇಲ್ಲಿನ ರಾಘವೇಂದ್ರಸ್ವಾಮಿ ಮಠದಲ್ಲಿ ಜ್ಞಾನದಾಯಿನಿ ಸಂಸ್ಕೃತ ಪಾಠ ಶಾಲೆಯವತಿಯಿಂದ ಭಗವದ್ಗೀತೆಯ ಅರಿವು ಹಾಗೂ ಪ್ರಚಾರ ಎಂಬ ಕಾರ್ಯಕ್ರಮದಲ್ಲಿ ಹಮ್ಮಿಕೊಳ್ಳಲಾಗಿದ್ದ ರಸ ಪ್ರಶ್ನೆ ಕಾರ್ಯಕ್ರಮ ಉದ್ದೇಶಿಸಿ ಅವರು ಮಾತನಾಡಿದರು.

ಸದ್ಯದ ಸ್ಥಿತಿಯಲ್ಲಿ ಭಾರತ ಸೇರಿದಂತೆ ಉಳಿದೆಲ್ಲ ರಾಷ್ಟ್ರಗಳಲ್ಲಿ ಅಶಾಂತಿ ಮನೆ ಮಾಡಿಕೊಂಡಿದ್ದು ಕಂಡು ಬರುತ್ತಿದೆ. ಅದಕ್ಕೆಲ್ಲ ನಮ್ಮಲ್ಲಾದ ಹಿತಕರವಲ್ಲದ ಸಂಸ್ಕೃತಿಕ ಬದಲಾವಣೆಗಳೆ ಕಾರಣವಾಗಿದೆ. ಆಧ್ಯಾತ್ಮಿಕ ವಿಚಾರದಲ್ಲಿ ಇಡಿ ವಿಶ್ವಕ್ಕೆ ಬೋಧನೆ ಮಾಡಿದ ನಮ್ಮ ಭಾರತ ದೇಶ, ತನ್ನಲ್ಲಿನ ಯುವಕರಿಗೆ ಮಾಡಬೇಕಾಗಿದ್ದ ಮಾರ್ಗದರ್ಶನದಲ್ಲೂ ಕೊಂಚ ಎಡವಿರುವುದು ಕಂಡು ಬರುತ್ತಿದೆ ಎಂದು ವಿಷಾದ ವ್ಯಕ್ತಪಡಿಸಿದರು.

ಭಗವದ್ಗೀತೆ, ವೇದಗಳು, ಉಪನಿಷತ್ತುಗಳು, ರಾಮಾಯಣ, ಮಾಹಾಭಾರತದಂತಹ ಗ್ರಂಥಗಳು ಸೇರಿದಂತೆ ಶರಣರ ವಚನಗಳು, ದಾಸರ ಸ್ತುತಿಗಳು ಇವೆಲ್ಲ ಎಲ್ಲೊ ಒಂದು ಕಡೆ ನಮ್ಮ ಬದುಕಿನ ಅರ್ಥವನ್ನು ತಿಳಿಸಿಕೊಡುತ್ತಿರುವುದನ್ನು ಗಮನಸಿದ್ದೇವೆ. ಇಷ್ಟೆಲ್ಲ ಗ್ರಂಥಗಳ ಪಠಣ ಮಾಡುವುದಾಗಲಿ, ಮತ್ತೊಬ್ಬರಿಗೆ ಮಾರ್ಗದರ್ಶನವಾಗಲಿ ಮಾಡಲಾರದೆ ಹೋದರೆ ಮತ್ತಷ್ಟು ಅಂಶಾಂತತೆಗೆ ನಾವು ಕಾರಣರಾಗುತ್ತೇವೆ ಎಂದು ಹೇಳಿದರು.

ಪ್ರಹ್ಲಾದಾಚಾರ ಪೂಜಾರ, ಯೋಗ ಶಿಕ್ಷಕ ಶಿವಶಂಕರ ಮೆದಿಕೇರಿ, ಶ್ರೀನಿವಾಸ ಜಹಗೀರದಾರ, ಮಹೇಶ, ಎನ್.ಈರೇಶಪ್ಪ ಇತರರು ಮಾತನಾಡಿದರು. ರೇಣುಕಾ ಗರಗ ಹಾಗೂ ಎನ್.ಈರೇಶಪ್ಪ ರಸಪ್ರಶ್ನೆ ಕಾರ್ಯಕ್ರಮ ನಡೆಸಿಕೊಟ್ಟರು. ಗ್ರಾಮದ ವಿವಿಧ ಶಾಲೆಯ ವಿದ್ಯಾರ್ಥಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸ್ಪರ್ಧೆಯಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.