ADVERTISEMENT

ಭಾರತ ಹುಣ್ಣಿಮೆ: ಗುಗ್ಗರಿ ಮುಟಗಿ ವಿಶೇಷ

​ಪ್ರಜಾವಾಣಿ ವಾರ್ತೆ
Published 9 ಫೆಬ್ರುವರಿ 2012, 8:00 IST
Last Updated 9 ಫೆಬ್ರುವರಿ 2012, 8:00 IST

ಮುನಿರಾಬಾದ್: ಇಲ್ಲಿಗೆ ಸಮೀಪದ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗಿಯ ಶ್ರೀಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಭಾರತ ಹುಣ್ಣಿಮೆ ಅಂಗವಾಗಿ ಮಂಗಳವಾರ ರಾತ್ರಿವಿವಿಧ ಧಾರ್ಮಿಕ ಆಚರಣೆಗಳನ್ನು ಹಮ್ಮಿಕೊಳ್ಳಲಾಗಿತ್ತು.

ಹುಣ್ಣಿಮೆಗಳಲ್ಲಿ ಶ್ರೇಷ್ಠ ಮತ್ತು ದೊಡ್ಡದೆಂದು ನಂಬಲಾಗಿರುವ ಭಾರತ ಹುಣ್ಣಿಮೆ ದಿನದಂದು ರಾಜ್ಯ ಮತ್ತು ಹೊರರಾಜ್ಯದಿಂದ ಬಂದ ಸಾವಿರಾರು ಭಕ್ತರು ತುಂಗಭದ್ರೆಯಲ್ಲಿ ಮಿಂದು ಹುಲಿಗೆಮ್ಮದೇವಿ ದೇವಸ್ಥಾನದಲ್ಲಿ ಬೆಳಿಗ್ಗೆಯಿಂದ ರಾತ್ರಿಯವರೆಗೆ ದೇವಿಯ ದರ್ಶನ ಪಡೆದರು. ಮಂಗಳವಾರ ರಾತ್ರಿ ಗುಗ್ಗರಿಮುಟಗಿ ಎಂಬ ಧಾರ್ಮಿಕ ಆಚರಣೆ ಸಾವಿರಾರು ಭಕ್ತರ ಉಪಸ್ಥಿತಿಯಲ್ಲಿ ನಡೆಯಿತು.

ಏನಿದು ಗುಗ್ಗರಿಮುಟಗಿ ?: ಶಕ್ತಿದೇವತೆ ಶ್ರೀಹುಲಿಗೆಮ್ಮದೇವಿಯ ಸೇವಕ, ಪರಮ ಭಕ್ತ ಎಂದು ನಂಬಲಾಗಿರುವ ಅಜ್ಜಪ್ಪದೇವರ ವಿಗ್ರಹ ಇದೇ ದೇವಸ್ಥಾನದ ಆವರಣದಲ್ಲಿದೆ. ಪ್ರತಿ ವರ್ಷ ಭಾರತ ಹುಣ್ಣಿಮೆ ದಿನದಂದು ಆ ದೇವರಿಗೆ ವಿಶೇಷ ಪೂಜೆ ನೆರವೇರಿಸಿ ಹುರುಳಿಕಾಳುಗಳನ್ನು ಬೇಯಿಸಿ ಗುಗ್ಗರಿ(ಬೆಂದ ಕಾಳುಗಳಿಗೆ ಇರುವ ಗ್ರಾಮ್ಯ ಭಾಷೆ) ಮಾಡಲಾಗುತ್ತದೆ.
 
ಈ ಕಾಳುಗಳ ನೈವೇದ್ಯದ ನಂತರ ಅವುಗಳನ್ನು ದೇವಿಯ ಪರಂಪರಾಗತ ಪೂಜಾರ ಮನೆತನದವರಿಗೆ ಹಂಚಲಾಗುತ್ತದೆ. ಉಳಿದ ಗುಗ್ಗರಿಯನ್ನು ಭಕ್ತಾದಿಗಳಿಗೆ ಹಂಚುವರು. ಈ ಆಚರಣೆಯನ್ನೇ `ಗುಗ್ಗರಿಮುಟಗಿ~ ಎಂದು ಹೇಳಲಾಗುತ್ತದೆ. ಇದೇ ಸಂದರ್ಭದಲ್ಲಿ ಗಂಗಾದೇವಿ ಪೂಜೆ, ಮಾತಂಗಿ ದೇವಿಗೆ ಕ್ಷೀರ ಸಮರ್ಪಣೆ, ಪಡ್ಡಲಗಿ ಪೂಜೆ ಮುಂತಾದ ಕಾರ್ಯಗಳು ನಡೆಯುತ್ತವೆ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸಿ.ಎಸ್.ಚಂದ್ರಮೌಳಿ, ಪೂಜಾರ ಮನೆತನದ ಪ್ರತಿನಿಧಿಗಳು, ಗ್ರಾಮದ ಮುಖಂಡರು ಇದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.