ಕೊಪ್ಪಳ: `ತನ್ನ ಭ್ರಷ್ಟಾಚಾರ ಹೊರಬೀಳುವುದನ್ನು ತಡೆಯುವ ಸಲುವಾಗಿ ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ನೂರ್ ಅಹ್ಮದ್ ಹಣಜಗೇರಿ ಜೂ. 13ರಂದು ಕರೆದಿದ್ದ ಸಭೆಗೆ ಪೊಲೀಸ್ ಬಂದೋಬಸ್ತ್ ಹಾಕಿಸಿದ್ದರು. ಸಭೆಗೆ ಪೊಲೀಸರನ್ನು ಕರೆಸಿದ ಕ್ರಮವನ್ನು ಸಭೆಯಲ್ಲಿದ್ದ ಎಲ್ಲ ಸದಸ್ಯರು ಖಂಡಿಸಿದ್ದಾರೆ~ ಎಂದು ಸಮಿತಿ ಸದಸ್ಯ ಶರೀಫ್‌ಸಾಬ ಕಾತರಕಿ ಹೇಳಿದ್ದಾರೆ.
ಭಾನುವಾರ ಪತ್ರಿಕಾ ಹೇಳಿಕೆ ನೀಡಿರುವ ಅವರು, ಸಮಿತಿಯ ಅಧ್ಯಕ್ಷ ಸ್ಥಾನ ಆಕಾಂಕ್ಷಿಗಳು ಕುತಂತ್ರ ಮಾಡಿ ಸಭೆಗೆ ಅಡ್ಡಿಪಡಿಸುವ ಹುನ್ನಾರದ ಹಿನ್ನೆಲೆಯಲ್ಲಿ ಪೊಲೀಸ್ ಬಂದೋಬಸ್ತ್ ಹಾಕಲಾಗಿತ್ತು ಎಂಬ ಸಮಿತಿ ಅಧ್ಯಕ್ಷ ಹಣಜಗೇರಿ ಹೇಳಿಕೆಗೆ ಈ ರೀತಿ ತಿರುಗೇಟು ನೀಡಿದ್ದಾರೆ.
13ರಂದು ನಡೆದ ಸಭೆಯಲ್ಲಿ 9 ಜನ ಹಾಜರಿದ್ದರು. ಕೋರಂ ಭರ್ತಿ ಇತ್ತು. ಆದರೂ ಹಣಜಗೇರಿ ಅವರು ಯಾವುದೇ ವಿಷಯವನ್ನು ಚರ್ಚೆ ಮಾಡಲು ಅವಕಾಶ ನೀಡಲಿಲ್ಲ.
ತಮ್ಮ ಸ್ವಾರ್ಥ ಹಾಗೂ ಭ್ರಷ್ಟಾಚಾರ ಬಯಲಿಗೆ ಬೀಳುತ್ತದೆ ಎಂಬ ಭಯದಿಂದ ಸಮಿತಿ ಕಚೇರಿಗೆ ಪೊಲೀಸರನ್ನು ಕರೆಸಿದ್ದರು.
ಅಧ್ಯಕ್ಷರ ಈ ಕ್ರಮವನ್ನು ಖಂಡಿಸಿದ್ದಲ್ಲದೇ ಮುಂದಿನ ಸಭೆಯನ್ನು ಸಮಿತಿ ಉಪಾಧ್ಯಕ್ಷ ಪೀರಾ ಹುಸೇನ್‌ಹೊಸಳ್ಳಿ ಅವರ ಅಧ್ಯಕ್ಷತೆಯಲ್ಲಿ ಕರೆಯಲು ಸಹ ಸರ್ವಾನುಮತದ ಗೊತ್ತುವಳಿಯನ್ನು ಸ್ವೀಕರಿಸಲಾಯಿತು ಎಂದು ತಿಳಿಸಿದ್ದಾರೆ.
ವಕ್ಫ್ ಅಧಿಕಾರಿ ಮಜರುಲ್ ಖಾನ್ ಜೊತೆ ಕೈಜೋಡಿಸಿರುವ ಸಮಿತಿ ಅಧ್ಯಕ್ಷ ನೂರ ಅಹ್ಮದ್ ಹಣಜಗೇರಿ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ. ಹೀಗಾಗಿ ಮಜರುಲ್‌ಖಾನ್ ಅವರನ್ನು ವರ್ಗಾವಣೆ ಮಾಡುವಂತೆ ಕೋರಿ ಸಮಾಜದ ಮುಖಂಡರೊಬ್ಬರು ಮುಖ್ಯಮಂತ್ರಿ ದೂರು ನೀಡಿದ್ದರು.
ಮುಖ್ಯಮಂತ್ರಿಗಳ ಕಚೇರಿ ಆದೇಶದಂತೆ ಮಜರುಲ್‌ಖಾನ್ ಅವರನ್ನು ವರ್ಗ ಮಾಡಲಾಗಿದ್ದು, ಇದು ನೂರ್ ಅಹ್ಮದ್ ಹಣಜಗೇರಿ ಅವರು ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬುದನ್ನು ಸಾಬೀತುಪಡಿಸುತ್ತದೆ ಎಂದೂ ಹೇಳಿದ್ದಾರೆ.
ನೂರ್ ಅಹ್ಮದ್ ಹಣಜಗೇರಿ ಅವರನ್ನು ಅಧ್ಯಕ್ಷ ಸ್ಥಾನದಿಂದ ಅಮಾನತುಗೊಳಿಸುವಂತೆ ಶಿಫಾರಸು ಮಾಡುವಂತೆ ಜಿಲ್ಲೆಯ 5 ವಿಧಾನಸಭಾ ಕ್ಷೇತ್ರಗಳ ವಕ್ಫ್ ಸಮಿತಿಯ ಪದಾಧಿಕಾರಿಗಳು ಜಿಲ್ಲಾಧಿಕಾರಿಗೆ ಮನವಿಯನ್ನು ಸಲ್ಲಿಸಲಾಗಿದೆ ಎಂದೂ ಸ್ಪಷ್ಟಪಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.