ADVERTISEMENT

ಮತದಾರರಿಂದ ಉತ್ತಮ ಬೆಂಬಲ: ರಾಯರಡ್ಡಿ

​ಪ್ರಜಾವಾಣಿ ವಾರ್ತೆ
Published 18 ಏಪ್ರಿಲ್ 2018, 9:45 IST
Last Updated 18 ಏಪ್ರಿಲ್ 2018, 9:45 IST

ಯಲಬುರ್ಗಾ: ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕೆಲಸಗಳನ್ನು ನೋಡಿ ಜನರು ಬೆಂಬಲಿಸುವುದರಿಂದ ಕಾಂಗ್ರೆಸ್‌ ಪಕ್ಷ ಮತ್ತೆ ಅಧಿಕಾರಕ್ಕೆ ಬರುವುದು ನಿಶ್ಚಿತ ಎಂದು ಸಚಿವ ಬಸವರಾಜ ರಾಯರಡ್ಡಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ನಡೆದ ಕಾರ್ಯಕರ್ತರ ಹಾಗೂ ಪಕ್ಷ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬೃಹತ್‌ ಯೋಜನೆಗಳ ಜಾರಿಗೆ ತಂದಿರುವ ಹಿರಿಮೆ ಕಾಂಗ್ರೆಸ್‌ ನೇತೃತ್ವದ ಸರ್ಕಾರಕ್ಕೆ ಸಲ್ಲುತ್ತದೆ. ಕ್ಷೇತ್ರದಲ್ಲಿ ಸಹ ನಿರೀಕ್ಷೆಗೂ ಮೀರಿ ಅಭಿವೃದ್ಧಿ ಕಾರ್ಯ ಕೈಗೊಂಡಿದ್ದರಿಂದ ಜನರು ಕೈ ಬಿಡುವುದರಿಲ್ಲ ಎಂದರು.

ಬೇರೆ ಬೇರೆ ಪಕ್ಷದಿಂದ ಕಾಂಗ್ರೆಸ್‌ ಪಕ್ಷಕ್ಕೆ ಸೇರುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಅಭಿವೃದ್ಧಿಯನ್ನು ಬಯಸಿ ಪಕ್ಷಕ್ಕೆ ಸೇರುತ್ತಿದ್ದಾರೆ ಹೊರತು ಯಾವುದೇ ವೈಯಕ್ತಿಕ ಆಸೆ ಆಕಾಂಕ್ಷೆ ಗಳಿಗಾಗಿ ಅಲ್ಲ, ಬಿಜೆಪಿಯವರಿಗೆ ಅಧಿಕಾರ ಹಿಡಿಯಬೇಕೆಂಬುದೇ ಆಸೆ ಹೊರತು ಬೇರೆ ಯಾವುದೇ ಗುರಿಯಿಲ್ಲ ಎಂದು ಹೇಳಿದರು.

ADVERTISEMENT

ನೀರಾವರಿ ಯೋಜನೆಗಳು ಜಾರಿಗೆ ತರುವುದು ಮಾತನಾಡಿದಷ್ಟು ಸುಲಭವಲ್ಲ, ಸುಮಾರು ವರ್ಷಗಳ ಪ್ರಕ್ರಿಯೆ ನಡೆದಾಗ ಮಾತ್ರ ಅನುಷ್ಠಾನಕ್ಕೆ ಬರಲು ಸಾಧ್ಯ. ಕಾಂಗ್ರೆಸ್‌ ಸರ್ಕಾರ ಅತ್ಯಂತ ಹೆಚ್ಚಿನ ಕಾಳಜಿ ತೋರಿ ನೀರಾವರಿ ಯೋಜನೆಯನ್ನು ಪೂರ್ಣಗೊಳಿಸಲು ಬದ್ಧವಾಗಿದೆ ಎಂದು ಅಭಿಪ್ರಾಯಪಟ್ಟರು.

ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಮಾತನಾಡಿ, ತಾಲ್ಲೂಕಿನಲ್ಲಿ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಕಳೆದ ಸಲದ ಚುನಾವಣೆಗಿಂತಲೂ ಹೆಚ್ಚಿನ ರೀತಿಯಲ್ಲಿ ಜನರ ಬೆಂಬಲ ಹಾಗೂ ಅಭಿಮಾನ ಹೆಚ್ಚಾಗಿದೆ ಎಂದು ನುಡಿದರು.

ಬಸಪ್ಪ ಬೆದವಟ್ಟಿ, ಶರಣಯ್ಯ ಹಿರೇಮಠ, ಶರಣಪ್ಪ ಹಳೆಗೌಡ್ರ, ವರದಯ್ಯ, ರಾಜಾಸಾಬ, ರುದ್ರಪ್ಪ ಬತ್ತಿ, ಹನಮಂತಪ್ಪ, ಹನಮಂತಪ್ಪ ಅಳ್ಳಳ್ಳಿ, ಹನಮಂತಪ್ಪ ಮಡಿವಾಳರ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.