ADVERTISEMENT

ಮರಳು ದಂಧೆ: ನಾಲ್ವರ ಅಮಾನತು

​ಪ್ರಜಾವಾಣಿ ವಾರ್ತೆ
Published 20 ಜುಲೈ 2012, 10:00 IST
Last Updated 20 ಜುಲೈ 2012, 10:00 IST

ಗಂಗಾವತಿ: ಕರ್ತವ್ಯಲೋಪ ಎಸಗಿ ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿದ್ದ ಆಪಾದನೆ ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ನಗರಠಾಣೆಯ ಪೊಲೀಸ್ ಇನ್ಸ್‌ಪೆಕ್ಟರ್ ಶಿವಕುಮಾರ ಹಾಗೂ ಮೂವರು ಪೇದೆಗಳನ್ನು ಅಮಾನತು ಮಾಡಿ ಗುಲ್ಬರ್ಗ ಐಜಿಪಿ ಗುರುವಾರ ಆದೇಶ ಜಾರಿ ಮಾಡಿದ್ದಾರೆ.

ನಗರಠಾಣೆಯ ಪಿಐ ಶಿವಕುಮಾರ ಪೇದೆಗಳಾದ ಮಂಜುನಾಥ, ವೀರೇಶ ಮತ್ತು ತಾರಾಸಿಂಗ್ ಎಂಬುವವರೊಂದಿಗೆ ಸೇರಿ ಅಕ್ರಮವಾಗಿ ಮರಳು ದಂಧೆಯಲ್ಲಿ ತೊಡಗಿರುವುದು ವಿಚಾರಣೆಯ ವೇಳೆ ಸಾಬೀತಾಗಿದೆ ಎಂದು ಜಿಲ್ಲಾ ಪೊಲೀಸ್ ವರೀಷ್ಠ ಬಿ.ಎಸ್. ಪ್ರಕಾಶ `ಪ್ರಜಾವಾಣಿ~ಗೆ ಸ್ಪಷ್ಟಪಡಿಸಿದ್ದಾರೆ.

ಪೊಲೀಸ್ ಅಧಿಕಾರಿ ಹಾಗೂ ಪೇದೆಗಳು ಮರಳು ದಂಧೆಯಲ್ಲಿ ತೊಡಗಿರುವ ಬಗ್ಗೆ ನಗರಠಾಣೆಯ ಕೆಲ ಸಿಬ್ಬಂದಿಯಿಂದ ತಮ್ಮ ಗಮನಕ್ಕೆ ಬಂದಿತ್ತು. ಈ ಬಗ್ಗೆ ವಿಚಾರಣೆ ನಡೆಸುವಂತೆ ಡಿವೈಎಸ್‌ಪಿ ಡಿ.ಎಲ್. ಹಣಗಿ ಅವರಿಗೆ ಸೂಚಿಸಿದ್ದೆ ಎಂದರು.

ಡಿವೈಎಸ್‌ಪಿ ವಿಚಾರಣೆ: ಪ್ರಕರಣದ ಬಗ್ಗೆ ವಿಚಾರಣೆ ನಡೆಸಿದ ಡಿವೈಎಸ್‌ಪಿ ಹಣಗಿ ಅವರಿಗೆ, ಅಧಿಕಾರಿಗಳು ಮರಳು ದಂಧೆಯಲ್ಲಿ ತೊಡಗಿರುವುದು, ಅಕ್ರಮವಾಗಿ ನಗರದ ರೈಸ್‌ಮಿಲ್ಲೊಂದರ ಆವರಣದಲ್ಲಿ ಹಾಕಿ ಅಲ್ಲಿಂದ ರಾತ್ರಿಹೊತ್ತಲ್ಲಿ ಕಂಪ್ಲಿಗೆ ಸಾಗಿಸುತ್ತಿದ್ದರು.

ಅಲ್ಲಿಂದ ಸಂಡೂರಿಗೆ ಸಾಗಿಸಲಾಗುತಿತ್ತು. ಬಳಿಕ ಸಂಡೂರಲ್ಲಿ ಮರಳು ಮಾರಾಟದ ವ್ಯಾಪಾರ ನಡೆಯುತಿತ್ತು ಎಂಬ ಅಂಶ ಅಧಿಕಾರಿಗಳಿಗೆ ತಿಳಿಯಿತು. ಈ ಬಗ್ಗೆ ಡಿವೈಎಸ್‌ಪಿ ವಿಡಿಯೋ ಚಿತ್ರೀಕರಣದ ಸಾಕ್ಷಿ ಸಮೇತ ವರದಿ ಒಪ್ಪಿಸಿದ್ದರು ಎಂದು ಎಸ್ಪಿ ತಿಳಿಸಿದರು.   

ಐಜಿಪಿಗೆ ವರದಿ: ಡಿವೈಎಸ್‌ಪಿ ಸಲ್ಲಿಸಿದ ವರದಿಯನ್ನು ಗುಲ್ಬರ್ಗ ವಲಯ ಪೊಲೀಸ್ ಅಧೀಕ್ಷಕರಿಗೆ ಸಲ್ಲಿಸಲಾಗಿತ್ತು. ವರದಿ ಪರಿಶೀಲಿಸಿದ ಐಜಿಪಿ ವಜೀರ್ ಅಹ್ಮದ್ ಅವರು, ಶಿವಕುಮಾರ ಅವರನ್ನು ಹಾಗೂ ಪೇದೆಗಳಾದ ಮಂಜುನಾಥ, ವಿರೇಶ ಮತ್ತು ತಾರಾಸಿಂಗ್‌ರನ್ನು ಅಮಾನತು ಮಾಡಿದ್ದಾಗಿ ಎಸ್‌ಪಿ ತಿಳಿಸಿದರು.

ಪ್ರಕರಣದ ಕುರಿತಾಗಿ `ಪ್ರಜಾವಾಣಿ~ ಜುಲೈ 12ರ ಸಂಚಿಕೆಯಲ್ಲಿ `ಚಿತ್ರದುರ್ಗದಲ್ಲಿ ಮನೆ ಕಟ್ಟಲು ನಗರದಿಂದ ಅಕ್ರಮ ಮರಳು-ಪೊಲೀಸ್ ಅಧಿಕಾರಿಯ ವಿಲಕ್ಷಣ ಕಾರ್ಯ~ ಎಂಬ ಶೀರ್ಷಿಕೆಯಡಿ ವರದಿ ಪ್ರಕಟಿಸಿ ಸಂಬಂಧಿತ ಇಲಾಖೆಯ ಗಮನ ಸೆಳೆದಿತ್ತು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.