ADVERTISEMENT

ಮಳೆ ಹಾನಿ: ಪರಿಹಾರ ನೀಡಲು ಆಗ್ರಹ

​ಪ್ರಜಾವಾಣಿ ವಾರ್ತೆ
Published 25 ಅಕ್ಟೋಬರ್ 2017, 7:26 IST
Last Updated 25 ಅಕ್ಟೋಬರ್ 2017, 7:26 IST

ಕುಷ್ಟಗಿ: ಪಟ್ಟಣ ಸೇರಿದಂತೆ ತಾಲ್ಲೂಕಿನ ಬಹುತೇಕ ಹಳ್ಳಿಗಳಲ್ಲಿ ಮಂಗಳವಾರ ಬೆಳಿಗ್ಗೆ ಉತ್ತಮವಾಗಿ ಮಳೆ ಸುರಿದಿದೆ. ಅನೇಕ ಹಳ್ಳಗಳಿಗೆ ನೀರು ಹರಿದುಬಂದಿದ್ದು, ಒಡ್ಡುಗಳು ಒಡೆದಿವೆ. ಅಲ್ಲದೆ, ಕೃಷಿ ಹೊಂಡಗಳು ಭರ್ತಿಯಾಗಿರುವುದು ಕಂಡುಬಂದಿತು.

ಮದಲಗಟ್ಟಿ ಗ್ರಾಮದ ಬಳಿ ಇರುವ ನಿಡಶೇಸಿ ಕೆರೆಗೆ ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿದುಬಂದಿದ್ದು, ಕೆರೆ ಪೂರ್ಣಪ್ರಮಾಣದಲ್ಲಿ ಭರ್ತಿಯಾಗಲು ಕೇವಲ ಎರಡು ಅಡಿ ಮಾತ್ರ ಬಾಕಿ ಇದೆ. ಆದರೆ, ಮಣ್ಣಿನ ದಿನ್ನೆ ಮತ್ತು ತೆಗೆದ ಹೂಳನ್ನು ಕೆರೆಯಿಂದ ಹೊರಗೆ ಸಾಗಿಸಿದ್ದರೆ ಇನ್ನಷ್ಟು ನೀರು ಸಂಗ್ರಹವಾಗುತ್ತಿತ್ತು ಎಂದು ರೈತರು ಹೇಳಿದರು.

ಈ ಹಿಂದೆ ಸುರಿದ ಮಳೆಗೆ ಮೆಕ್ಕೆಜೋಳ, ಸಜ್ಜೆ, ಸಿರಿಧಾನ್ಯ ಬೆಳೆಗಳಿಗೆ ಧಕ್ಕೆಯಾಗಿತ್ತು. ಕೆಲ ದಿನಗಳಿಂದ ಮಳೆ ಬಿಡುವು ಕೊಟ್ಟಿದ್ದರಿಂದ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗಿದೆ. ಕೊಯಿಲು ಮಾಡಬೇಕೆನ್ನುವಷ್ಟರಲ್ಲಿ ಮತ್ತೆ ಮಳೆ ಬಂದು ಅಡ್ಡಿಯಾಗಿದೆ. ರಾಶಿಮಾಡಿರುವ ಮೆಕ್ಕೆಜೋಳ ಒಣಗಿಸುವುದಕ್ಕೆ ಸಾಧ್ಯವಾಗುತ್ತಿಲ್ಲ ಎಂದು ರೈತರು ಅಳಲು ತೋಡಿಕೊಂಡರು.

ADVERTISEMENT

ಅದೇ ರೀತಿ ಎರೆಮಣ್ಣಿನ ಜಮೀನಿನಲ್ಲಿ ಹಿಂಗಾರು ಹಂಗಾಮಿನ ಕಡಲೆ, ಗೋಧಿ, ಜೋಳ ಬಿತ್ತನೆಗೆ ಸಕಾಲವಾಗಿದ್ದರೂ ಅಧಿಕ ತೇವಾಂಶದಿಂದ ಬಿತ್ತನೆ ಕೈಗೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ವಣಗೇರಿಯ ರೈತರಾದ ಹನುಮಗೌಡ ಪಾಟೀಲ, ಭೀಮಪ್ಪ ವಣಗೇರಿ ತಿಳಿಸಿದರು.

ಪರಿಹಾರ ವಿಳಂಬ:
 ಕುಷ್ಟಗಿ: ಅಧಿಕ ಮಳೆಗೆ ಮನೆಗಳು ಕುಸಿದು ಜನರು ಸಂಕಷ್ಟದಲ್ಲಿದ್ದರೂ ಸರ್ಕಾರ ಸಕಾಲಕ್ಕೆ ಪರಿಹಾರ ವಿತರಿಸದೆ ವಿಳಂಬ ಮಾಡುತ್ತಿದೆ ಎಂದು ಜಿಲ್ಲಾ ಪಂಚಾಯಿತಿ ಮೆಣೆದಾಳ ಕ್ಷೇತ್ರದ ಸದಸ್ಯ ಹನುಮಗೌಡ ಪಾಟೀಲ ದೂರಿದ್ದಾರೆ.

ಈ ಕುರಿತು ಮಂಗಳವಾರ ಇಲ್ಲಿ ತಹಶೀಲ್ದಾರ್ ಎಂ.ಗಂಗಪ್ಪ ಅವರ ಬಳಿ ಅಸಮಾಧಾನ ಹೊರಹಾಕಿದ ಅವರು, ‘ಮಳೆಗೆ ಮನೆ ಹಾಳಾಗಿದ್ದರಿಂದ ಅನೇಕ ಬಡ ಕುಟುಂಬಗಳು ತೊಂದರೆಗೆ ಸಿಲುಕಿವೆ. ಅವರಿಗೆ ನೆರವಾಗುವುದು ಸರ್ಕಾರದ ಕರ್ತವ್ಯ. ಆದರೆ, ಈ ವರ್ಷದ ಮನೆಗಳಿಗೆ ಪರಿಹಾರ ನೀಡದಿರುವುದು ಇರಲಿ ಕಳೆದ ವರ್ಷ ಬಿದ್ದ ಮನೆಗಳ ಮಾಲೀಕರಿಗೇ ಪರಿಹಾರ ನೀಡಿಲ್ಲ’ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಇತ್ತೀಚಿನ ಮಳೆಗೆ ತಾಲ್ಲೂಕಿನಲ್ಲಿ ಸುಮಾರು 25 ಮನೆಗಳಿಗೆ ಧಕ್ಕೆಯಾಗಿದ್ದು, ಸಂಬಂಧಿಸಿದ ಸಿಬ್ಬಂದಿಯಿಂದ ವರದಿ ತರಿಸಿಕೊಂಡು ಪರಿಹಾರ ವಿತರಿಸುವುದಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಎಂ.ಗಂಗಪ್ಪ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.