ADVERTISEMENT

ಮುಂದುವರಿದ ನೀರಿನ ಸಮಸ್ಯೆ

​ಪ್ರಜಾವಾಣಿ ವಾರ್ತೆ
Published 24 ಏಪ್ರಿಲ್ 2012, 8:00 IST
Last Updated 24 ಏಪ್ರಿಲ್ 2012, 8:00 IST

ಕುಷ್ಟಗಿ: ಬೇಸಿಗೆ ಮುಗಿದರೂ ಹಳ್ಳಿಗಳಲ್ಲಿನ ಕುಡಿಯುವ ನೀರಿನ ಸಮಸ್ಯೆ ಹಾಗೇ ಮುಂದುವರೆದಿದ್ದು ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಸೋಮವಾರ ಇಲ್ಲಿ ನಡೆದ ತಾ.ಪಂ ಸಾಮಾನ್ಯ ಸಭೆಯಲ್ಲಿ ಸದಸ್ಯರು ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆಯಿತು.

ವಿವಿಧ ಗ್ರಾಮಗಳಲ್ಲಿನ ಸಮಸ್ಯೆ ವಿವರಿಸಿದ ಸದಸ್ಯರಿಗೆ ವಿವರ ಮಾಹಿತಿ ನೀಡಬೇಕಿದ್ದ ಪಂ.ರಾ ಎಂಜಿನಿಯರಿಂಗ್ ಎಇಇ ನೆಪ ಹೇಳಿ ಸಭೆಗೆ ಗೈರು ಹಾಜರಾಗುತ್ತಾರೆ, ಎರಡು ತಿಂಗಳಿಗೊಮ್ಮೆ ಸಭೆ ನಡೆಯುತ್ತದೆ, ಸಮಸ್ಯೆಗಳ ಬಗ್ಗೆ ಯಾರನ್ನು ಕೇಳಬೇಕು?,
 
ಜನರು, ಜನಪ್ರತಿನಿಧಿಗಳು ದೂರವಾಣಿ ಕರೆ ಮಾಡಿದರೆ ಎಇಇ ಬೇಜವಾಬ್ದಾರಿಯಿಂದ ವರ್ತಿಸುತ್ತಾರೆ, ಸೌಜನ್ಯವಿಲ್ಲ, ಸಭೆಯಲ್ಲಿ ಚರ್ಚಿಸಿದ ಯಾವ ವಿಷಯವೂ ಕಾರ್ಯರೂಪಕ್ಕೆ ಬರುವುದಿಲ್ಲವೆಂದರೆ ಸಭೆ ನಡೆಸುವುದರ ಔಚಿತ್ಯವಾದರೂ ಏನು ಎಂದು ಪರಶುರಾಮಪ್ಪ ನಂದ್ಯಾಳ, ಶರಣು ತಳ್ಳಿಕೇರಿ, ಸಿದ್ದಪ್ಪ ಆವಿನ, ಹನುಮಂತಪ್ಪ ರಾಠೋಡ್ ಇತರರು ಪ್ರಶ್ನಿಸಿದರು.

ನೀವು (ಇ.ಒ) ಬಂದು ಮೂರು ತಿಂಗಳಾದರೂ ಹದಗೆಟ್ಟ ವ್ಯವಸ್ಥೆ ಬದಲಾವಣೆ ಕಂಡಿಲ್ಲ ಎಂಬುದಕ್ಕೆ ಉತ್ತರಿಸಿದ ವೀರಣ್ಣ ವಾಲಿ, ಸದಸ್ಯರ ಭಾವನೆಗಳು ಅರ್ಥವಾಗುತ್ತಿದೆ, ದಿನದಿಂದ ದಿನಕ್ಕೆ ಅಂತರ್ಜಲ ಮಟ್ಟ ಕುಸಿಯುತ್ತಿದೆ. ಒತ್ತಡದ ನಡುವೆಯೂ ಸಮಸ್ಯೆಗೆ ಪರಿಹಾರ ಹುಡುಕುದ್ದೇವೆ, ನೀವು ಸಮಸ್ಯೆ ಮನವರಿಕೆ ಮಾಡಿಕೊಟ್ಟರೆ ಪರಿಹಾರಕ್ಕೆ ಸಾಧ್ಯವಾಗುತ್ತದೆ ಎಂಬ ಸಮಜಾಯಿಷಿಯನ್ನು ಕಿವಿಗೆ ಹಾಕಿಕೊಳ್ಳದ ಸದಸ್ಯರು, ಸಭೆಯನ್ನೇ ಬಹಿಷ್ಕರಿಸುತ್ತೇವೆ ಎಂಬ ಬೆದರಿಕೆಯೊಡ್ಡಿದರು.

ಪ್ರಾರಂಭದಲ್ಲಿ ಅಧಿಕಾರಿಗಳ ವಿರುದ್ಧ ಹರಿಹಾಯ್ದಿದ್ದ ಸ್ಥಾಯಿ ಸಮಿತಿ ಅಧ್ಯಕ್ಷ ಶಿವನಗೌಡ ನಂತರ ವಾರ ಕಾಲಾವಕಾಶ ನೀಡೋಣ ಎಂದು ಸದಸ್ಯರನ್ನು ಸಮಾಧಾನಪಡಿಸಲು ಯತ್ನಿಸಿದಾಗ ಕೆಲ ಸದಸ್ಯರು ಅವರ ವಿರುದ್ಧ ತಿರುಗಿಬಿದ್ದರು. ಸಾಕಷ್ಟು ವಾದದ ನಂತರ ನೀರಿನ ವಿಷಯ ಚರ್ಚಿಸಲು ಮೇ 3ರಂದು ಪ್ರತ್ಯೇಕ ಸಭೆ ನಡೆಸುವುದಾಗಿ ಇ.ಒ ಪ್ರಕಟಿಸಿದರು.

ಪಿಡಿಒಗಳ ಬೇಡಿಕೆಗಳಂತೆ 75 ಕೈಪಂಪು ದುರಸ್ತಿ ಸಲಕರಣೆಗಳಿಗೆ ಜಿ.ಪಂಗೆ ಬೇಡಿಕೆ ಸಲ್ಲಿಸಿದ್ದು 8ಕ್ಕೆ ಆಗುವಷ್ಟು ಸಾಮಾನುಗಳು ಬಂದಿವೆ, ಬರ ಪರಿಹಾರಕ್ಕೆ ಸಂಬಂಧಿಸಿದಂತೆ ನೀರಿಗೆ ಮಾತ್ರ ಅನುದಾನ ಬಿಡುಗಡೆಯಾಗಿದ್ದು ಕಾಮಗಾರಿಗಳಿಗೆ ಪ್ರತ್ಯೇಕ ಹಣ ಬಿಡುಗಡೆಯಾಗಿಲ್ಲ, ಉದ್ಯೋಗ ಖಾತರಿ ಯೋಜನೆಯಲ್ಲಿ 6 ನಂ ಫಾರ್ಮ್ ನೀಡಿರುವವರಿಗೆ ಕೆಲಸ ನೀಡಲಾಗುತ್ತಿದೆ.
 
ವೈಯಕ್ತಿಕ ಕೆಲಸ ಕೈಬಿಟ್ಟು ಚೆಕ್‌ಡ್ಯಾಂ ನಾಲಾಬಂಡ್ ಸೇರಿದಂತೆ ಮಳೆ ನೀರು ಸಂಗ್ರಹಣೆಗೆ ಅನುಕೂಲವಾಗುವ ಕೆಲಸಗಳನ್ನು ಮಾತ್ರ ತೆಗೆದುಕೊಳ್ಳಲು ಜಿಲ್ಲಾಧಿಕಾರಿ ಸೂಚನೆ ನೀಡಿದ್ದಾರೆ ಎಂದು ವಾಲಿ ವಿವರಿಸಿದರು. ಆದರೆ ಜನ ಕೆಲಸವಿಲ್ಲದೇ ಗುಳೆ ಹೋಗುತ್ತಿದ್ದಾರೆ, ಜಾನುವಾರುಗಳಿಗೆ ಮೇವಿನ ಕೊರತೆ ಇದೆ ಎಂದು ಸದಸ್ಯರು ದೂರಿದರು.

ಥರ್ಡ್ ಪಾರ್ಟಿಯವರು ಕಾಮಗಾರಿ ಪರಿಶೀಲನೆಗೆ ಬಂದಾಗ ಪಿಡಿಒ, ನೋಡಲ್ ಅಧಿಕಾರಿಗಳು ಗೈರುಹಾಜರಾಗಿದ್ದರಿಂದ ಕೆಲ ಹಳ್ಳಿಗಳಲ್ಲಿ ಖಾತರಿ ಯೋಜನೆಯಲ್ಲಿ ದುಡಿದವರಿಗೆ ಕೂಲಿ ಪಾವತಿಯಾಗಿಲ್ಲ ಅವರ ಮೇಲೆ ಕ್ರಮ ಜರುಗಿಸಿಲ್ಲವೆಂದು ಸದಸ್ಯರು ದೂರಿದರು. ತಪ್ಪು ಮಾಡಿದವರನ್ನು ಹಾಗೇ ಬಿಡುತ್ತಹೋದರೆ ಯಾರಿಗೆ ಭಯವಿರುತ್ತದೆ ಎಂದು ಸುವರ್ಣಮ್ಮ ಕುಂಬಾರ ಪ್ರಶ್ನಿಸಿದರು.ಅಧ್ಯಕ್ಷೆ ಶಾಂತಮ್ಮ ಮೇಟಿ ಅಧ್ಯಕ್ಷತೆ ವಹಿಸಿದ್ದರು. ಉಪಾಧ್ಯಕ್ಷೆ ಯಲ್ಲಮ್ಮ ಭೋವಿ ಇತರರು ಇದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.