ADVERTISEMENT

ಮೈದುಂಬಿದೆ ಕಬ್ಬರಗಿ ಜಲಪಾತ

ಕಿಶನರಾವ್‌ ಕುಲಕರ್ಣಿ
Published 2 ಅಕ್ಟೋಬರ್ 2017, 8:53 IST
Last Updated 2 ಅಕ್ಟೋಬರ್ 2017, 8:53 IST
ಹನುಮಸಾಗರ ಕಬ್ಬರಗಿ ಜಲಪಾತ ಧುಮ್ಮಿಕ್ಕುತ್ತಾ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ
ಹನುಮಸಾಗರ ಕಬ್ಬರಗಿ ಜಲಪಾತ ಧುಮ್ಮಿಕ್ಕುತ್ತಾ ಪ್ರಕೃತಿ ಪ್ರಿಯರನ್ನು ತನ್ನತ್ತ ಸೆಳೆಯುತ್ತಿದೆ   

ಹನುಮಸಾಗರ: ಮುಂಗಾರು ಸಮಯದಲ್ಲಿ ಮುನಿಸಿಕೊಂಡಿದ್ದ ಮಳೆರಾಯ ಕಳೆದ ಹದಿನೈದು ದಿನಗಳಿಂದ ಉತ್ತಮವಾಗಿ ಸುರಿದ ಕಾರಣ ಎರಡು ವರ್ಷಗಳಿಂದ ಸೊರಗಿದ್ದ ಸಮೀಪದ ಕಪ್ಪಲೆಪ್ಪ ಜಲಪಾತಕ್ಕೀಗ ಜೀವಕಳೆ ಬಂದಿದೆ. ಪ್ರತಿದಿನ ನೂರಾರು ಜನ ಪುಣ್ಯ ಸ್ನಾನಕ್ಕಾಗಿ ಬರುತ್ತಿದ್ದಾರೆ.

ಕೊಪ್ಪಳ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಾದ ಬಿಜಾಪುರ, ಬಾಗಲಕೋಟೆ, ಗದಗ, ಬಳ್ಳಾರಿ ಜಿಲ್ಲೆಗಳ ಜನರು ಕಪ್ಪಲೆಪ್ಪ ಸುರಿಯುವುದನ್ನು ಕೇಳಿದರೆ ತಂಡ ತಂಡವಾಗಿ ಬರುತ್ತಾರೆ. ಈ ಭಾಗದಲ್ಲಿ ಜಲಪಾತಗಳಿಲ್ಲದ ಕಾರಣ ಕಪ್ಪಲೆಪ್ಪ, ಕಪಿಲತೀರ್ಥ, ಕಬ್ಬರಗಿ ದಿಡಗ ಎಂದೆಲ್ಲ ಈ ಜಲಧಾರೆಯನ್ನು ನಾಮಕರಣ ಮಾಡಿದ್ದಾರೆ.

ಈ ಭಾಗದಲ್ಲಿ ಉತ್ತಮವಾಗಿ ಮಳೆಯಾಗುತ್ತಿರುವುದರಿಂದಾಗಿ ಜಲಪಾತ ಮೈದುಂಬಿ ಉನ್ಮಾದದಿಂದ ಧರೆಗೆ ಅಪ್ಪಳಿಸುತ್ತಿರುವುದು ನಯನ ಮನೋಹರವಾದ ದೃಶ್ಯವಾಗಿದೆ. ಬಹುತೇಕ ಜಲಪಾತಗಳನ್ನು ದೂರದಿಂದಲೇ ನಿಂತು ನೋಡಿ ಆನಂದಿಸಬಹುದು. ಬೆನ್ನಿನಲ್ಲಿ ಕಸುವು ಹೊಂದಿದ ಯುವಕರು ಜಲಧಾರೆಗೆ ಮೈಯೊಡ್ಡಿ ಮೈ-ಮನ ಹಗುರ ಮಾಡಿಕೊಳ್ಳಬಹುದು. ಜಲಪಾತದ ನೀರು ಗುಪ್ತಗಾಮಿನಿಯಂತೆ ಮುಂದೆ ಹರಿದು ಕೆರೆ ಸೇರುತ್ತದೆ.

ADVERTISEMENT

ಬೆಟ್ಟದ ತಪ್ಪಲಿನಿಂದ ರಭಸವಾಗಿ ಹರಿದು ಬರುವ ನೀರು ಸುಮಾರು 25 ಅಡಿ ಎತ್ತರದಿಂದ ಬೀಳುತ್ತದೆ. ನೀರು ಬೀಳುವ ಅಡಿಯಲ್ಲಿ ನಿಸರ್ಗವೇ ಹಾಸು ಬಂಡೆಯನ್ನು ನಿರ್ಮಿಸಿರುವುದರಿಂದ ಬಂಡೆಗೆ ಅಪ್ಪಳಿಸಿದ ನೀರು ಹನಿ-ಹನಿಯಾಗಿ ಮೇಲಕ್ಕೆ ಚಿಮ್ಮಿ ಜಲ ಪುಂಜವಾಗಿ ಸಮೀಪ ನಿಂತವರ ಮುಖಕ್ಕೆ ಸಿಡಿದು ಮುತ್ತಿಟ್ಟ ಅನುಭವವಾಗುತ್ತದೆ. ಬೆಟ್ಟದಲ್ಲಿ ಅಡಗಿರುವ ಜಲಪಾತ ದ ದಾರಿಯಲ್ಲಿ ಹೋಗುತ್ತಿದ್ದಂತೆಯೇ ಭೋರ್ಗರೆಯುವ ನೀರಿನ ಸದ್ದೇ ಹೊಸದಾಗಿ ಬಂದವರಿಗೆ ಮಾರ್ಗ ತೋರಿಸುತ್ತದೆ.

ಹೇಗೆ ಬರಬೇಕು: ಗದಗದಿಂದ ಗಜೇಂದ್ರಗಡ ಮಾರ್ಗವಾಗಿ ಬಂದರೆ 18ಕಿಲೋ ಮೀಟರ್‌. ಕುಷ್ಟಗಿಯಿಂದ 20 ಕಿಲೋ ಮೀಟರ್‌, ಬಾಗಲಕೋಟ ಜಿಲ್ಲೆ ಇಳಕಲ್‌ನಿಂದ ಬಂದರೆ 19 ಕಿಲೋ ಮೀಟರ್‌ ದೂರವಿದೆ.

ಮಳೆಗಾಲದಲ್ಲಿ ಜಿಲ್ಲೆಯ ಮುಖ್ಯ ಪ್ರವಾಸಿ ತಾಣವಾಗುವ ಎಲ್ಲ ಬಗೆಯ ಅರ್ಹತೆ ಪಡೆದಿರುವ ಈ ಜಲಪಾತಕ್ಕೆ ರಸ್ತೆಯದ್ದೆ ದೊಡ್ಡ ತೊಂದರೆ. ಕಬ್ಬರಗಿ ಗ್ರಾಮದಿಂದ ಸುಮಾರು ನಾಲ್ಕು ಕಿ.ಮೀ ನಡೆದುಕೊಂಡೇ ಹೋಗಬೇಕು. ಕಾಲಿನಲ್ಲಿ ಕಸುವು ಹೊಂದಿದವರು ಮಾತ್ರ ಈ ಜಲಪಾತಕ್ಕೆ ಬರುವಂತಾಗಿದೆ. ದಾರಿಯುದ್ದಕ್ಕೂ ಕಲ್ಲು ಬಂಡೆಗಳು, ಮುಳ್ಳು, ಕಂಟಿಗಳನ್ನು ಭೇದಿಸಿ ಜಲಪಾತ ತಲುಪಬೇಕಾದ ಸ್ಥಿತಿ ಇದೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.