ADVERTISEMENT

ರಾಜಕೀಯ ಇಚ್ಛಾಶಕ್ತಿ ಕೊರತೆ: ವಿಷಾದ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2011, 8:15 IST
Last Updated 16 ಮಾರ್ಚ್ 2011, 8:15 IST

ಕುಷ್ಟಗಿ: ಕೇಂದ್ರದಲ್ಲಿ ಅಧಿಕಾರ ನಡೆಸುತ್ತ ಬಂದಿರುವ ಎಲ್ಲ ಸರ್ಕಾರಗಳು ಹೈದರಾಬಾದ ಪ್ರಾಂತ್ಯದ ಜಿಲ್ಲೆಗಳಿಗೆ ಸಂವಿಧಾನದ 371ನೇ ಅನುಚ್ಛೇದಕ್ಕೆ ತಿದ್ದುಪಡಿ ತರಲು ನಿರಾಕರಿಸುತ್ತ ಬಂದಿರುವುದಕ್ಕೆ ರಾಜಕೀಯ ಇಚ್ಛಾಶಕ್ತಿಯ ಕೊರತೆ ಪ್ರಮುಖ ಕಾರಣ ಎಂದು ಮಾಜಿ ಶಾಸಕ ಕೆ.ಶರಣಪ್ಪ ಮಂಗಳವಾರ ಇಲ್ಲಿ ಹೇಳಿದರು.371ನೇ ಅನುಚ್ಛೇದದ ಅನ್ವಯ ವಿಶೇಷ ಸ್ಥಾನಮಾನ ನೀಡುವಲ್ಲಿ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹೇರುವ ನಿಟ್ಟಿನಲ್ಲಿ,  ನಡೆಯುತ್ತಿರುವ ‘371ನೇ ತಿದ್ದುಪಡಿ ಜನಜಾಗೃತಿ ಅಭಿಯಾನ’ದ ಅಂಗವಾಗಿ ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ಪೂರ್ವಭಾವಿ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

 ಹೈ.ಕ ಹಿಂದುಳಿದೆ ಎಂದರೆ ಏನು ಎಂಬ ಬಗ್ಗೆ ಈ ಭಾಗದ ಜನರಲ್ಲಿ ಸ್ಪಷ್ಟ ಕಲ್ಪನೆ ಇಲ್ಲ, ಅದನ್ನು ತಿಳಿಸಿಕೊಡುವ ಮೂಲಕ ಚಳುವಳಿ ಜನಾಂದೋಲವಾಗಿ ಹೊರಹೊಮ್ಮಬೇಕು ಎಂದರು. ಎನ್‌ಡಿಎ ಅಧಿಕಾರದಲ್ಲಿನ ಗೃಹಸಚಿವ ಎಲ್.ಕೆ.ಅದ್ವಾನಿ, ಈಗಿನ ಯುಪಿಎ ಸರ್ಕಾರದ ಪಿ.ಚಿದಂಬರಮ್ ಅವರು ಹೈ.ಕ ಭಾಗಕ್ಕೆ ವಿಶೇಷ ಸ್ಥಾನಮಾನ ಕೊಡಲು 371ನೇ ತಿದ್ದುಪಡಿಗೆ ತರುವ ಅಗತ್ಯತೆಗಳು ಕಂಡುಬರುತ್ತಿಲ್ಲ ಎಂದು ಹೇಳಿದ್ದಾರೆ ತಿದ್ದುಪಡಿಯ ಅವಶ್ಯಕತೆ ಕುರಿತ ಸ್ಪಷ್ಟ ಕಾರಣಗಳನ್ನು ತಾಂತ್ರಿಕ ಮತ್ತು ವೈಜ್ಞಾನಿಕ ರೀತಿಯಲ್ಲಿ ಕೇಂದ್ರಕ್ಕೆ ಮನದಟ್ಟು ಮಾಡಿಕೊಡುವ ಕೆಲಸ ಆಗಬೇಕು ಎಂದರು. 

ಪ್ರಬಲ ರಾಜಕೀಯ ಪ್ರಭುತ್ವ ಇದ್ದುದರಿಂದಲೇ ತೆಲಂಗಾಣ ವಿಶೇಷ ಸ್ಥಾನಮಾನ ಪಡೆದರೆ ಅದರ ಕೊರತೆಯಿಂದ ಮಹಾರಾಷ್ಟ್ರದ ವಿದರ್ಭಾಕ್ಕೆ ಅಷ್ಟೊಂದು ಪ್ರಾಮುಖ್ಯ ದೊರೆಯಲಿಲ್ಲ. ಕರ್ನಾಟಕದ ಸ್ಥಿತಿಯೂ ಅದೇ ಆಗಿದೆ, ಇಲ್ಲಿಯವರೆಗೆ ಎಷ್ಟು ಜನ ಸಂಸದರು ಈ ನಿಟ್ಟಿನಲ್ಲಿ ಇಚ್ಛಾಶಕ್ತಿ ಪ್ರದರ್ಶಿಸಿದ್ದಾರೆ ಎಂಬುದರ ಬಗ್ಗೆ ಅವರನ್ನು ಕಂಡಲ್ಲಿ ಪ್ರಶ್ನಿಸುವ ಕಾಲ ಬಂದಿದೆ ಎಂದು ಹೇಳಿದರು.

ಸರ್ಕಾರಿ ಸಹಾಯಕ ಅಭಿಯೋಜಕ ಬಿ.ಎಸ್.ಪಾಟೀಲ ಮಾತನಾಡಿ ಹೋರಾಟದ ಧ್ವನಿ ಗಟ್ಟಿಗೊಳಿಸಲು ಜಾಗೃತಿ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಚಳುವಳಿಯ ರೂಪುರೇಷೆಗಳನ್ನು ನಿರ್ಧರಿಸಲು ಜಿಲ್ಲೆಯ ಎಲ್ಲ ತಾಲ್ಲೂಕುಗಳ ಜನರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಕೊಪ್ಪಳದಲ್ಲಿ ಮಾ.19ರಂದು ಸಭೆ ನಡೆಯಲಿದೆ ಎಂದು ಹೇಳಿದರು.ಸಾಹಿತಿ ಡಾ.ಮಹಾಂತೇಶ ಮಲ್ಲನಗೌಡರ್ ಮಾತನಾಡಿ, ಈ ಭಾಗ ಶೈಕ್ಷಣಿಕ ಮತ್ತು ಭೌಗೋಳಿಕವಾಗಿಯೂ ಹಿಂದುಳಿದಿದೆ, ಒಂಭತ್ತು ಬಾರಿ ಸಂವಿಧಾನಕ್ಕೆ ತಿದ್ದುಪಡಿಯಾದರೂ ಈ ಭಾಗವನ್ನು ಕಡೆಗಣಿಸಲಾಯಿತು ಎಂದರು.

ಜಿ.ಪಂ. ಮಾಜಿ ಸದಸ್ಯ ಫಕೀರಪ್ಪ ಚಳಗೇರಿ ಮಾತನಾಡಿ, 371ನೇ ಕಲಂ ಗಾಗಿ ಹೋರಾಟ ನಡೆಸುವ ಮಾದರಿಯಲ್ಲಿ ಕೃಷ್ಣಾ ‘ಬಿ’ ಸ್ಕೀಂ ಜಾರಿಗೂ ಚಳುವಳಿ ಬಲಗೊಳ್ಳಬೇಕಿದೆ ಎಂದರು. ವೀರಸಂಗೇಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿ ಅನಿಸಿಕೆ ವ್ಯಕ್ತಪಡಿಸಿದರು. ಕರವೇ ಅಧ್ಯಕ್ಷ ಬಸನಗೌಡ ಪೊಲೀಸಪಾಟೀಲ, ನಗರಸಭಾ ಮಾಜಿ ಅಧ್ಯಕ್ಷ ಚಂದ್ರಶೇಖರ ಕವಲೂರು, ಶಿವಾನಂದ ಹೊದ್ಲೂರು, ಗೋನಾಳ, ಶಿವಕುಮಾರ, ಶಂಕರ ಕರಪಡಿ, ಎಂ.ದೇವಪ್ಪ, ನಬಿಸಾಬ್ ಕುಷ್ಟಗಿ, ಶರಣಪ್ಪ ವಡಗೇರಿ ಮೊದಲಾದವರು ಅನಿಸಿಕೆ ವ್ಯಕ್ತಪಡಿಸಿದರು.
ನಟರಾಜ ಸೋನಾರ ನಿರೂಪಿಸಿದರು. ಕಸಾಪ ಅಧ್ಯಕ್ಷ ರವೀಂದ್ರ ಬಾಕಳೆ ಸ್ವಾಗತಿಸಿದರು. ಕನ್ನಡಪರ ಸಂಘಟನೆಗಳ ಪದಾಧಿಕಾರಿಗಳು, ಸಾರ್ವಜನಿಕರು ಸಭೆಯಲ್ಲಿದ್ದರು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.