ADVERTISEMENT

ರಾಮುಲು ಕೋಟ್ಯಂತರ ಆಸ್ತಿ ಎಲ್ಲಿಂದ ಬಂತು?

​ಪ್ರಜಾವಾಣಿ ವಾರ್ತೆ
Published 5 ಮೇ 2012, 5:55 IST
Last Updated 5 ಮೇ 2012, 5:55 IST

ಕೊಪ್ಪಳ: ಜನಪರ ಕಾಳಜಿ ಇಲ್ಲದ ಮಾಜಿ ಸಚಿವ ಬಿ.ಶ್ರೀರಾಮುಲು ನೂತನ ಪಕ್ಷ ಕಟ್ಟುವುದರಲ್ಲಿ ಅರ್ಥವಿಲ್ಲ. ಹಾಗೊಂದು ವೇಳೆ ನೂತನ ಪಕ್ಷ ಅಸ್ತಿತ್ವಕ್ಕೆ ಬಂದರೆ ಅದು ಲೂಟಿಕೋರರ ಪಕ್ಷವಾಗುತ್ತದೆ ಎಂದು ಪ್ರಗತಿಪರ ಸಂಘಟನೆಗಳ ಒಕ್ಕೂಟ ಟೀಕಿಸಿದೆ.

ಬಿಎಸ್‌ಆರ್ ಪಕ್ಷದ ಮುಖಂಡ ಹಾಗೂ ಮಾಜಿ ಸಚಿವ ಬಿ.ಶ್ರೀರಾಮುಲು ಕೈಗೊಂಡಿರುವ ಪಾದಯಾತ್ರೆಯನ್ನು ಖಂಡಿಸಿರುವ ಒಕ್ಕೂಟದ ಪದಾಧಿಕಾರಿಗಳು ಈ ಪಾದಯಾತ್ರೆಗೆ ಯಾವುದೇ ಅರ್ಥವಿಲ್ಲ ಎಂದು ಟೀಕಿಸಿದ್ದಾರೆ.
ಅವರು ಶುಕ್ರವಾರ ಇಲ್ಲಿ ಕೊಪ್ಪಳ ಮೀಡಿಯಾ ಕ್ಲಬ್‌ನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಶ್ರೀರಾಮುಲು, ಬಿ.ಜನಾರ್ದನ ರೆಡ್ಡಿ ಮತ್ತಿತರರು ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿರುವುದು ಜಗತ್ತಿಗೇ ಗೊತ್ತಿದೆ. ಮುಂದಿನ ಪೀಳಿಗೆಗೆ ಸೇರಬೇಕಾದ ನೈಸರ್ಗಿಕ ಸಂಪತ್ತನ್ನು ಲೂಟಿ ಮಾಡಿದವರಿಗೆ ಜನಪರ ಕಾಳಜಿ ಇರಲು ಸಾಧ್ಯವಿಲ್ಲ. ಇಂತಹ ವ್ಯಕ್ತಿ ನೂತನ ಪಕ್ಷ ಸ್ಥಾಪಿಸುವುದು ಎಷ್ಟು ಸರಿ ಎಂದು ಒಕ್ಕೂಟದ ಮುಖಂಡ, ತುಂಗಭದ್ರಾ ಮತ್ತು ಜಿಲ್ಲಾ ಬಚಾವೋ ಆಂದೋಲನ ಸಮಿತಿ ಅಧ್ಯಕ್ಷ ವಿಠ್ಠಪ್ಪ ಗೋರಂಟ್ಲಿ ಪ್ರಶ್ನಿಸಿದರು.

ಘಟಾನುಘಟಿ ನಾಯಕರು ಹೊಸ ಪಕ್ಷ ಕಟ್ಟಿ ವಿಫಲರಾಗಿದ್ದಾರೆ. ಅಂಥದ್ದರಲ್ಲಿ ಯಾವುದೇ ಸೈದ್ಧಾಂತಿಕ ಮತ್ತು ತಾತ್ವಿಕ ನೆಲೆಗಟ್ಟೇ ಇಲ್ಲದ ಶ್ರೀರಾಮುಲು ನೂತನ ಪಕ್ಷ ಕಟ್ಟುವುದರಲ್ಲಿ ಏನು ಅರ್ಥವಿದೆ ಎಂದು ಪ್ರಶ್ನಿಸಿದರು.

ನೂತನ ಪಕ್ಷ ಸ್ಥಾಪನೆ, ಪಾದಯಾತ್ರೆ ನಡೆಸುವ ಮೊದಲು ಶ್ರೀರಾಮುಲು ಹಲವಾರು ಪ್ರಶ್ನೆಗಳಿಗೆ ನಾಡಿನ ಜನತೆಗೆ ಉತ್ತರಿಸಬೇಕು. 2008ರಿಂದ 2009ನೇ ವರ್ಷದ ಅವಧಿಯಲ್ಲಿ ಶ್ರೀರಾಮುಲು ಆಸ್ತಿ 54 ಕೋಟಿ ರೂಪಾಯಿಗಳಷ್ಟು ಹೆಚ್ಚಾಗಿದ್ದು ಹೇಗೆ. ಈ ಗಳಿಕೆಯ ಸಂಪೂರ್ಣ ವಿವರಗಳನ್ನು ನಾಡಿನ ಜನತೆಗೆ ನೀಡಬೇಕು ಎಂದು ಒತ್ತಾಯಿಸಿದರು.

ರಾಜ್ಯದ ಗಡಿ ಭಾಗದಲ್ಲಿದ್ದ ಸುಂಕಲಮ್ಮ ದೇವಸ್ಥಾನ ಕೆಡವಿ ಹಾಕಿ ಗಡಿ ರೇಖೆಯನ್ನು ಅಳಿಸಿ ಹಾಕಿರುವ ಬಗ್ಗೆ ಏನು ಹೇಳುತ್ತಾರೆ? ಗದಗ ಬಗ್ಗೆ ವಿಶೇಷ ಕಾಳಜಿ ತೋರುತ್ತಿದ್ದ ಶ್ರೀರಾಮುಲು, ಅಲ್ಲಿನ ಜಮೀನನ್ನು ಪೋಸ್ಕೊ ಕಂಪೆನಿಗೆ ನೀಡುವುದನ್ನು ರೈತರು ವಿರೋಧಿಸಿದಾಗ ಬಾಯ್ಬಿಡಲಿಲ್ಲ ಏಕೆ ಎಂದು ಪ್ರಶ್ನಿಸಿದರು.

ಬಿಜೆಪಿ ಸರ್ಕಾರವನ್ನು ಅಸ್ತಿತ್ವಕ್ಕೆ ತರುವ ಸಲುವಾಗಿ ಬಿ.ಎಸ್.ಯಡಿಯೂರಪ್ಪಗೆ 250 ಕೋಟಿ ರೂಪಾಯಿ ನೀಡಿರುವುದಾಗಿ ಹೇಳಿರುವುದು ಮಾಧ್ಯಮಗಳಲ್ಲಿ ಬಂದಿದೆ. ಈ ರೀತಿ ತಾವು ಹೇಳಿಲ್ಲ ಎಂದು ಶ್ರೀರಾಮುಲು ಹೇಳುತ್ತಿದ್ದರೂ ಸದರಿ ಹೇಳಿಕೆ ಇರುವ ಚಿತ್ರೀಕರಣ ನಕಲಿ ಎಂಬುದನ್ನು ಸಾಬೀತುಪಡಿಸಲಿ ಎಂದು ಸವಾಲು ಹಾಕಿದರು.

ಕ್ರಿಮಿನಲ್ ಹಿನ್ನೆಲೆ ಹೊಂದಿರುವ ಬಿ.ಶ್ರೀರಾಮುಲು ರಾಜಕೀಯ ಪಕ್ಷ ಸ್ಥಾಪಿಸುವುದು ಎಷ್ಟು ಸರಿ ಎಂದು ಎಐಸಿಸಿಟಿಯು ಮುಖಂಡ ಜೆ.ಭಾರದ್ವಾಜ್ ಪ್ರಶ್ನಿಸಿದರು.

ಒಕ್ಕೂಟದ ಮುಖಂಡರಾದ ಬಸವರಾಜ ಶೀಲವಂತರ, ಮಹಾಂತೇಶ ಕೊತಬಾಳ, ವಿರೂಪಾಕ್ಷಪ್ಪ, ತಿಪ್ಪೇಗೌಡ ಮತ್ತಿತರರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.