ADVERTISEMENT

ರೂ.85.93 ಕೋಟಿ: ಕ್ರಿಯಾ ಯೋಜನೆ ಅನುಮೋದನೆ

ಜಿಲ್ಲಾ ಪಂಚಾಯಿತಿ ಸಾಮಾನ್ಯ ಸಭೆ

​ಪ್ರಜಾವಾಣಿ ವಾರ್ತೆ
Published 3 ಜುಲೈ 2013, 6:13 IST
Last Updated 3 ಜುಲೈ 2013, 6:13 IST

ಕೊಪ್ಪಳ: ಶಿಕ್ಷಣ, ಆರೋಗ್ಯಕ್ಕೆ ಅಗತ್ಯವಿರುವೆಡೆ ಹೆಚ್ಚು ಅನುದಾನ ಮೀಸಲಿಗೆ ಒತ್ತಾಯ. ಕ್ರಿಯಾ ಯೋಜನೆ ಬದಲಾಯಿಸಲು ಆಗ್ರಹ. ಬಿರುಸಿನ ಚರ್ಚೆ ನಡುವೆ ರೂ 85.93 ಕೋಟಿ ಮೊತ್ತದ ಕ್ರಿಯಾ ಯೋಜನೆಗೆ ಅನುಮೋದನೆ, ಉತ್ತರಾಖಂಡದ ಪ್ರವಾಹ ಸಂತ್ರಸ್ತರಿಗೆ ಎರಡು ತಿಂಗಳ ಗೌರವಧನವನ್ನು ಪರಿಹಾರ ನಿಧಿಗೆ ನೀಡಲು ತೀರ್ಮಾನ, ಹೈ-ಕ ಅಭಿಪ್ರಾಯ ಸಂಗ್ರಹ ಸಭೆಯಲ್ಲಿ ಭಾಗವಹಿಸಲು ಒಕ್ಕೊರಲ ನಿರ್ಧಾರ...

-ಇದು ಜಿಲ್ಲಾ ಪಂಚಾಯಿತಿಯಲ್ಲಿ 8 ತಿಂಗಳ ಬಳಿಕ ನೂತನ ಅಧ್ಯಕ್ಷರ ನೇತೃತ್ವದಲ್ಲಿ ನಡೆದ ಸಾಮಾನ್ಯ ಸಭೆಯ ಸಾರಾಂಶ.
ಈ ಬಾರಿಯ ಅನುದಾನದಲ್ಲಿ ರಾಜ್ಯ ಸರ್ಕಾರ ರೂ 44.15 ಕೋಟಿ, ಕೇಂದ್ರ ಸರ್ಕಾರವು 41.77 ಕೋಟಿ ಅನುದಾನ ನಿಗದಿಪಡಿಸಿದೆ. ಶಿಕ್ಷಣ, ಮೂಲಸೌಕರ್ಯ ವೃದ್ಧಿ ಸಂಬಂಧಿಸಿದಂತೆ ಅನುದಾನ ವೆಚ್ಚ ಮಾಡಲಾಗುವುದು ಎಂದು ಜಿಲ್ಲಾ ಪಂಚಾಯ್ತಿ ಮುಖ್ಯ ಯೋಜನಾಧಿಕಾರಿ ಟಿ.ಪಿ. ದಂಡಿಗದಾಸರ ಹೇಳಿದರು.

ಕಿನ್ನಾಳದ ಪ್ರಾಥಮಿಕ ಆರೋಗ್ಯ ಕೇಂದ್ರವನ್ನು ದುರಸ್ತಿಪಡಿಸಬೇಕು. ಅಲ್ಲಿಗೆ ಸೌಲಭ್ಯ ಒದಗಿಸಬೇಕು ಎಂದು ಸದಸ್ಯೆ ಮನಿತಾಗಡಾದ ಒತ್ತಾಯಿಸಿದರು.

ಹಿರೇವಂಕಲಕುಂಟಾ ಜಿ.ಪಂ. ಕ್ಷೇತ್ರದ ಆರೋಗ್ಯ ಕೇಂದ್ರಗಳಿಗೆ ಯಾವುದೇ ಅನುದಾನ ಒದಗಿಸಿಲ್ಲ. ಸ್ವಲ್ಪ ಅತ್ತ ಗಮನಹರಿಸಿ ಎಂದು ಅರವಿಂದಗೌಡ ಗಮನಸೆಳೆದರು. ಹೀಗೆ ಚರ್ಚೆ ಆರೋಗ್ಯ ಇಲಾಖೆ ಸುತ್ತ ಗಿರಕಿ ಹೊಡೆಯಿತು.

ಅದಕ್ಕೆ ಸ್ಪಷ್ಟನೆ ನೀಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ಮಹಾದೇವ ಸ್ವಾಮಿ, ಇದು ಕ್ಷೇತ್ರವಾರು ರೂಪಿಸಿದ ಕ್ರಿಯಾ ಯೋಜನೆ ಅಲ್ಲ. ಅಗತ್ಯಕ್ಕನುಗುಣವಾಗಿ ಅನುದಾನ ಹಂಚಿಕೆ ಮಾಡಲಾಗಿದೆ. ಇನ್ನೂ ಬದಲಾವಣೆ ಬೇಕಿದ್ದರೆ ಸಭೆಯಲ್ಲಿ ನಿರ್ಧರಿಸಿ ಎಂದರು.

ಎಲ್ಲ ಇಲಾಖೆಗಳಿಗೂ ಕೇವಲ ರೂ 20 ಲಕ್ಷ ಅನುದಾನ ಬಂದಿದೆ. ಆದ್ದರಿಂದ ಈ ಅನುದಾನ ಹೆಚ್ಚಿಸಬೇಕು. ಕ್ರಿಯಾ ಯೋಜನೆ ಬದಲಿಸಬೇಕು ಎಂದು ಸದಸ್ಯರು ಪಟ್ಟು ಹಿಡಿದರು.

ಚರ್ಚೆಗೆ ಸ್ಪಷ್ಟನೆ ನೀಡಿದ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಕೆ.ರವಿ, ಇದು ಜಿಲ್ಲಾ ಪಂಚಾಯಿತಿ ವಲಯದ ಕಾರ್ಯ ಯೋಜನೆ. ಮುಂದೆ 13ನೇ ಹಣಕಾಸು ಯೋಜನೆ ಬಂದಾಗ ಅನುದಾನದ ಮೊತ್ತ ಹೆಚ್ಚಳವಾಗುತ್ತದೆ. ಕ್ರಿಯಾ ಯೋಜನೆ ಬದಲಾವಣೆ ಮಾಡುವುದಿದ್ದರೂ ಇಲ್ಲಿಯೇ ಆಗಬೇಕು ಎಂದು ವಿವರಿಸಿದರು.

ಅನುದಾನ ಹಂಚಿಕೆಗೆ ಅಸಮಾಧಾನ
ಈ ಮಧ್ಯೆ ತಮ್ಮ ಕ್ಷೇತ್ರಕ್ಕೆ ಸರಿಯಾಗಿ ಅನುದಾನ ಹಂಚಿಕೆ ಆಗಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿ ಜ್ಯೋತಿ ಬಿಲ್ಗಾರ್ ಸಭೆಯಿಂದ ಹೊರನಡೆದರು.

ಯಲಬುರ್ಗ ಕ್ರೀಡಾಂಗಣಕ್ಕೆ ಸರಿಯಾದ ಕಾವಲುಗಾರರನ್ನು ನೇಮಿಸಬೇಕು. ಕುಷ್ಟಗಿ ತಾಲ್ಲೂಕು ಕ್ರೀಡಾಂಗಣದ ಕಾಮಗಾರಿ ಪೂರ್ಣಗೊಳಿಸಬೇಕು ಎಂದು ಸದಸ್ಯರು ಒತ್ತಾಯಿಸಿದರು. ಅದಕ್ಕೆ ಪ್ರತಿಕ್ರಿಯಿಸಿದ ಸಿಇಒ, ತಾಲ್ಲೂಕುವಾರು ಸಮಗ್ರವಾಗಿ ಕ್ರಿಯಾ ಯೋಜನೆ ಮಾಡಿ ಉಪವಿಭಾಗಾಧಿಕಾರಿ ಮೂಲಕ ಕಳುಹಿಸಿಕೊಡಿ ಎಂದು ನುಡಿದರು.

ಶಿಕ್ಷಣ ಇಲಾಖೆ ಬಗ್ಗೆ ಡಿಡಿಪಿಐ ಜಿ.ಎಚ್.ವೀರಣ್ಣ ಅವರ ಸಂಕ್ಷಿಪ್ತ ಉತ್ತರದಿಂದ ಅತೃಪ್ತರಾದ ಸದಸ್ಯರು, ನೀವು ಸರಿಯಾಗಿ ಮಾಹಿತಿ ಕೊಡುತ್ತಿಲ್ಲ ಎಂದು ಆಕ್ಷೇಪಿಸಿದರು. ಅಧ್ಯಕ್ಷ ಟಿ.ಜನಾರ್ದನ ಹುಲಿಗಿ ಮಾತನಾಡಿ, ಎಲ್ಲ ಅಧಿಕಾರಿಗಳು ತಮ್ಮ ಇಲಾಖೆಯ ಸಮಗ್ರ ವಿವರದ ಪ್ರತಿಯನ್ನು ಎಲ್ಲ ಸದಸ್ಯರಿಗೆ ಕೊಡಬೇಕು ಎಂದು ಸೂಚಿಸಿದರು.

ಸೋಲಾರ್ ಘಟಕಕ್ಕೆ ಸಮ್ಮತಿ: ಜಿಲ್ಲಾಡಳಿತ ಭವನದ ಕಟ್ಟಡಕ್ಕೆ ಸೋಲಾರ್ ವಿದ್ಯುತ್ ಘಟಕದ ಮೊದಲ ಹಂತದ ಕಾಮಗಾರಿ ಕೈಗೊಳ್ಳಲು ಸಭೆ ಅನುಮೋದನೆ ನೀಡಿತು.

ಎಂಜಿನಿಯರಿಂಗ್ ವಿಭಾಗದ ಅಧಿಕಾರಿಗಳ ಬಗ್ಗೆ ಆಕ್ಷೇಪ, ಪಶುಸಂಗೋಪನೆ ಇಲಾಖೆಯಲ್ಲಿ ಕೋಳಿ ಸಾಕಣೆ ಬದಲು ಹಸು ನೀಡುವಂತೆ ನಿಯಮ ರೂಪಿಸಲು ಸಲಹೆ, ಗೋಬರ್ ಗ್ಯಾಸ್ ಅಳವಡಿಕೆ ಸಂಬಂಧ ಪ್ರಚಾರ ನೀಡುವ ಬಗ್ಗೆ ಚರ್ಚೆಗಳಾದವು.
ಜಿ.ಪಂ. ಉಪಾಧ್ಯಕ್ಷೆ ಅನ್ನಪೂರ್ಣ ಕಂದಕೂರಪ್ಪ, ಸ್ಥಾಯಿ ಸಮಿತಿ ಅಧ್ಯಕ್ಷರಾದ ಅಮರೇಶ್ ಕುಳಗಿ, ವಿನಯಕುಮಾರ್ ಮೇಲಿನಮನಿ ಉಪಸ್ಥಿತರಿದ್ದರು.

ಸಿಸಿಟಿವಿ, ಧ್ವನಿಮುದ್ರಣ
ಜಿಲ್ಲಾ ಪಂಚಾಯಿತಿಯ ಎಲ್ಲ ಕಲಾಪಗಳನ್ನು ಸಿಸಿಟಿವಿ ಅಳವಡಿಸಿ ಚಿತ್ರೀಕರಿಸಲಾಗುವುದು. ಧ್ವನಿಮುದ್ರಣವನ್ನೂ ಮಾಡಲಾಗುವುದು.
ಡಿ.ಕೆ.ರವಿ, ಸಿಇಒ (ಸದಸ್ಯರ ಒತ್ತಾಯಕ್ಕೆ ಪ್ರತಿಕ್ರಿಯಿಸಿದ್ದು)

ಅಧ್ಯಕ್ಷರೇ ಸುಮ್ನೆ ಕುಂದರ್ರಿ...
ಅಧ್ಯಕ್ಷರೇ ನೀವು ಸುಮ್ನೆ ಕುಂದರ್ರೀ... ಎಲ್ಲಕ್ಕೂ ನೀವೇ ಮಾತಾಡುತ್ತೀರಿ. ನಮಗೂ ಸ್ವಲ್ಪ ಮಾತನಾಡಲು ಬಿಡಿ. ನಾವು ಹೇಳುವ ಕಾಮಗಾರಿ ಬೇಡ ಅಂತೀರಲ್ಲಾ. ಹಾಗಾದರೆ ಕ್ರಿಯಾ ಯೋಜನೆಗೆ ಅನುಮೋದನೆ ಕೊಡಲಾಗದು.
-ಈರಪ್ಪ ಕುಡಗುಂಟಿ, ಸದಸ್ಯ

ಕೋಳಿಗೆ ಅನುದಾನವೇ
ಕೋಳಿ ಸಾಕಾಣಿಕೆಗೆ ರೂ 2 ಲಕ್ಷ ಅನುದಾನವೇ? ಎಲ್ಲೋ ಜವಾರಿ ಕೋಳಿ ಇರಬೇಕು.
-ಸದಸ್ಯರೊಬ್ಬರ ಪಂಚ್!

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.