ADVERTISEMENT

ಶಾಕ್ ನೀಡುವ ಲೋಡ್‌ ಶೆಡ್ಡಿಂಗ್!

​ಪ್ರಜಾವಾಣಿ ವಾರ್ತೆ
Published 3 ಜನವರಿ 2014, 9:20 IST
Last Updated 3 ಜನವರಿ 2014, 9:20 IST

ಕಾರಟಗಿ: ಚಳಿಗಾಲದಲ್ಲೂ ವಿದ್ಯುತ್ ಲೋಡ್‌ ಶೆಡ್ಡಿಂಗ್ ಸದ್ದಿಲ್ಲದೆ ಆರಂಭಗೊಂಡಿದೆ. ತಾಲ್ಲೂಕಿನಾದ್ಯಂತ ಗ್ರಾಮೀಣ ಪ್ರದೇಶಗಳಲ್ಲಿ ನಿರಂತರ ವಿದ್ಯುತ್ ಯೋಜನೆಯ ಲೈನಿಂಗ್ ಕಾರ್ಯ ಮುಗಿದಿದೆ. 

ವಿದ್ಯುತ್ ಲೋಡ್‌ಶೆಡ್ಡಿಂಗ್ ಹಿಂದಿ­ನಿಂದಲೂ ಇದೆ. ಈ ಬಾರಿ ಕಡ್ಡಾಯವಾಗಿ ಜಾರಿಗೊಳಿಸುವಂತೆ ಮೇಲಿನಿಂದ ಸೂಚನೆ ಇದೆ. ಇದನ್ನು ನಾವು ಕಡ್ಡಾಯವಾಗಿ ಪಾಲಿಸಲೇ­ಬೇಕಿದೆ ಎಂದು ಕೆಪಿಟಿಸಿಎಲ್ ಹಾಗೂ ಜೆಸ್ಕಾಂ ಮೂಲಗಳು ಹೇಳುತ್ತಿವೆ.

ಈಗಿರುವ ಸೂಚನೆಯಂತೆ ನಿರಂತರ ಜ್ಯೋತಿ ಸಂಪರ್ಕ ಪಡೆದಿರುವ ಬಹುತೇಕ ಗ್ರಾಮಗಳು 6 ತಾಸು ಮಾತ್ರ ಪೂರ್ಣ ಪ್ರಮಾಣದ (ತ್ರಿಫೇಸ್) ವಿದ್ಯುತ್ ಪಡೆಯಲಿವೆ. 6 ತಾಸು ವಿದ್ಯುತ್ ಕಡಿತ ಉಳಿದ 12 ತಾಸು ಸಿಂಗಲ್‌ಫೇಸ್ ವಿದ್ಯುತ್ ಸರಬರಾಜು ಇರುತ್ತದೆ.
ನೀಡುವ 6 ತಾಸು ವಿದ್ಯುತ್‌ನಿಂದ ನದಿಪಾತ್ರದ ಸಾವಿರಾರು ಸೇರಿದಂತೆ ವಿವಿಧೆಡೆಯ ಪಂಪ್‌ಸೆಟ್‌­ಗಳಿಂದ ಬೆಳೆದ ಬೆಳೆ ರಕ್ಷಿಸಲು ಅಸಾಧ್ಯ. ನೀಡುವ 6 ತಾಸು ನಿರಂತರ ಪೂರೈಕೆ ಇರದೆ ಪಂಪ್‌ಸೆಟ್‌ಗಳು ಹಾಳಾ­ಗುತ್ತಿವೆ, ಬೆಳೆಗಳು ಒಣಗುತ್ತಿವೆ ಎಂಬ ಟೀಕೆ, ಪ್ರತಿಭಟನೆ ಈಗಾಗಲೆ ಆರಂಭ­ಗೊಂಡಿವೆ. ಕುಂಟೋಜಿ, ಈಳಿಗನೂರ, ಈಳಿಗನೂರಕ್ಯಾಂಪ್, ಜಮಾಪೂರ, ಉಳೇನೂರ ಮೊದಲಾದ ಗ್ರಾಮಗಳ ರೈತರು ಗುರುವಾರ ಪ್ರತಿಭಟನೆ ಮಾಡುವ ಮೂಲಕ ಮುಂದಿನ ಪ್ರತಿಭ­ಟನೆಗಳಿಗೆ ಮುನ್ನುಡಿ ಬರೆದಿದ್ದಾರೆ.

ಕಳೆದ ಹಂಗಾಮಿನಲ್ಲಿ ಪ್ರತಿದಿನ ವಿದ್ಯುತ್‌ಗಾಗಿ ವಿವಿಧೆಡೆ ಪ್ರತಿಭಟನೆಗಳು ನಡೆದಿರುವುದು ಈಗ ಮತ್ತೆ ಮರುಕಳಿ­ಸಲಿದೆ. ರೈತರಿಂದ ಭಾರಿ ಪ್ರತಿಭಟನೆ ಕಳೆದ ಹಂಗಾಮಿನಲ್ಲಿ ನಡೆದ ಮೇಲೆ ವಿದ್ಯುತ್ ಕಡ್ಡಾಯ ಕಟ್ ನೀತಿಯನ್ನು ತಾತ್ಕಾಲಿಕವಾಗಿ ಹಿಂಪಡೆಯಲಾಗಿತ್ತು.
ಈಗ ರೈತರ ಬೆಳೆ ರಕ್ಷಣೆಗೆ 6 ತಾಸು ಬದಲು 12 ತಾಸು ನಿರಂತರ ವಿದ್ಯುತ್ ನೀಡಲೇಬೇಕು. ಇಲ್ಲದಿದ್ದರೆ ಭಾರಿ ಪ್ರತಿಭಟನೆ ರೈತರಿಂದ ಆರಂಭವಾ­ಗಲಿವೆ. ನಮ್ಮ ಪಕ್ಷ ರೈತರೊಂದಿಗೆ ಕೈಜೋಡಿಸಲಿದೆ. ಸರ್ಕಾರ ಈಗಲೆ ಎಚ್ಚತ್ತುಕೊಳ್ಳಬೇಕು ಎಂದು ಬಿಜೆಪಿ ಮುಖಂಡ ಬಸವರಾಜ್ ದಡೇಸ್ಗೂರ ಹೇಳುತ್ತಾರೆ.

ಪಂಪ್‌ಸೆಟ್ ಅವಲಂಭಿತ ಸಾವಿರಾರು ರೈತರ ಬೆಳೆ ರಕ್ಷಣೆಗೆ ಸರ್ಕಾರ ಮುಂದಾಗಬೇಕು. ಅಂದಾಗಲೆ ರೈತರ ಸರ್ಕಾರ, ರೈತರ ಹಿತಕ್ಕಾಗಿರುವ ಜನಪ್ರತಿನಿಧಿಗಳು ಎಂಬುದು ಬಹಿರಂಗ ಆಗುವುದು ಎಂದು ಯುವ ಮುಖಂಡ ಜಿ. ತಿಮ್ಮನಗೌಡ ಹೇಳುತ್ತಾರೆ.
ರೈತರ ರಕ್ಷಣೆಗೆ ಸರ್ಕಾರ ಮೀನಮೇಷ ಮಾಡದೆ ಕನಿಷ್ಠ 10 ತಾಸು ನಿರಂತರವಾಗಿ (ಕಡಿತವಿಲ್ಲದೆ) ವಿದ್ಯುತ್ ನೀಡಿದರೆ ರೈತರು ಉಳಿ­ಯುತ್ತಾರೆ ಎಂದು ರೈತ ನಾಗೇಶ್ವರರಾವ್  ತಿಳಿಸುಸುತ್ತಾರೆ.

ನಿರಂತರ ಜ್ಯೋತಿ ಸಂಪರ್ಕಕ್ಕೆ ಒಳಪಟ್ಟ ಅನೇಕ ಗ್ರಾಮಗಳ ನಾಗರಿಕರು ನಮಗೆ ಸಂಪರ್ಕ ಬೇಡ ಎಂದು ಪ್ರತಿಭಟಿಸಿ ಅದರಿಂದ ಮುಕ್ತರಾಗಿದ್ದರು. ಈಗ ಸದ್ದಿಲ್ಲದೆ ಅವೆಲ್ಲಾ ಗ್ರಾಮಗಳು ನಿರಂತರ ಜ್ಯೋತಿ ವ್ಯಾಪ್ತಿಗೆ ಕಡ್ಡಾಯವಾಗಿ ಸೇರಿವೆ ಎಂದು ಅಧಿಕೃತ ಮೂಲಗಳು ಹೇಳುತ್ತಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.