ADVERTISEMENT

ಶಿಕ್ಷಕ ದಿನಾಚರಣೆಗೆ ಅಡ್ಡಿ, ಗೊಂದಲ

ಇಂಗ್ಲಿಷ್ ಶಿಕ್ಷಕರಿಗಾಗಿ `ರಾಜಕಾರಣ'

​ಪ್ರಜಾವಾಣಿ ವಾರ್ತೆ
Published 6 ಸೆಪ್ಟೆಂಬರ್ 2013, 6:20 IST
Last Updated 6 ಸೆಪ್ಟೆಂಬರ್ 2013, 6:20 IST

ಕುಷ್ಟಗಿ: ಸರ್ಕಾರಿ ಪ್ರೌಢಶಾಲೆಯಲ್ಲಿ ಇಂಗ್ಲಿಷ್ ಶಿಕ್ಷಕರ ಕೊರತೆ ನೀಗಿಸುವಲ್ಲಿ ಶಿಕ್ಷಣ ಇಲಾಖೆ ಅಧಿಕಾರಿಗಳು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆರೋಪಿಸಿದ ತಾಲ್ಲೂಕಿನ ಜುಮಲಾಪುರ ಗ್ರಾಮದ ಕೆಲ ವ್ಯಕ್ತಿಗಳು ಮತ್ತು ಶಾಲೆ ವಿದ್ಯಾರ್ಥಿಗಳು ಗುರುವಾರ ಪಟ್ಟಣದಲ್ಲಿ ನಡೆಯುತ್ತಿದ್ದ ಶಿಕ್ಷಕರ ದಿನಾಚರಣೆ ಸಮಾರಂಭಕ್ಕೆ ಅಡ್ಡಿಪಡಿಸಿದ ಘಟನೆ ನಡೆಯಿತು.

ಕಾರ್ಯಕ್ರಮ ಗಂಭೀರತೆ ಪಡೆಯುತ್ತಿದ್ದಂತೆ ಏಕಾಏಕಿ ಅಲ್ಲಿಗೆ ಆಗಮಿಸಿದ ಪ್ರತಿಭಟನಾಕಾರರು ಘೋಷಣೆ ಕೂಗಿ ಸ್ಥಳದಲ್ಲೇ ಧರಣಿ ಆರಂಭಿಸಿದ್ದರಿಂದ ಗೊಂದಲ ಉಂಟಾಗಿ ಕಾರ್ಯಕ್ರಮ ಅಸ್ತವ್ಯಸ್ತಗೊಂಡಿತು.

ಪರಿಸ್ಥಿತಿ ಅರಿತು ಅಲ್ಲಿಗೆ ಬಂದ ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಎಚ್.ಗೋನಾಳ ಅವರೊಂದಿಗೆ ಪ್ರತಿಭಟನೆ ನೇತೃತ್ವ ವಹಿಸಿದ್ದ ಗ್ರಾ.ಪಂ ಸದಸ್ಯ ಶಶಿಧರಗೌಡ ಪಾಟೀಲ ವಾಗ್ವಾದಕ್ಕಿಳಿದರು. ಶಿಕ್ಷಕರ ಬೇಡಿಕೆಗಾಗಿ ವಿದ್ಯಾರ್ಥಿಗಳು ಒಂದು ವಾರದಿಂದಲೂ ಶಾಲೆಗೆ ಬೀಗಹಾಕಿದ್ದರೂ ಕ್ರಮ ಕೈಗೊಂಡಿಲ್ಲ ಎಂದು ಅಧಿಕಾರಿಗಳ ವಿರುದ್ಧ ಹರಿಹಾಯ್ದರು.

ಆದರೆ ಬೇರೆ ಶಿಕ್ಷಕರನ್ನು ನಿಯೋಜನೆ ಮಾಡಿದರೆ ನೀವೇ ಬೇಡ ಎಂದು ಹೇಳಿದಿರಿ ಎಂದು ಬಿಇಒ ಹೇಳಿದಾಗ ನಮಗೆ ಕಾಯಂ ಶಿಕ್ಷಕರನ್ನು ಕೊಡಿ ಎಂದು ಜನ ಒತ್ತಾಯಿಸಿದರು.

ಅಲ್ಲದೇ ಧರಣಿ ಸ್ಥಳಕ್ಕೆ ಆಗಮಿಸಿದ ಬಿಜೆಪಿ ಕಾರ್ಯಕರ್ತರದಾ ಚಂದ್ರಶೇಖರ ನಾಲತ್ವಾಡ, ಶಾಮೀದಸಾಬ್ ಬ್ಯಾಲಿಹಾಳ ಮತ್ತಿತರರು ಈ ಹಿಂದೆ ಕಾಂಗ್ರೆಸ್ ಶಾಸಕರು ಇದ್ದಾಗ ಈ ಪ್ರತಿಭಟನೆ ಏಕೆ ನಡೆಯಲಿಲ್ಲ ಎಂದು ಧರಣಿ ನಿರತ ರಾಜಕೀಯ ವ್ಯಕ್ತಿಗಳನ್ನು ತೀವ್ರ ತರಾಟೆಗೆ ತೆಗೆದುಕೊಂಡರು.

ಆದರೂ ಪಟ್ಟು ಬಿಡದೇ ಧರಣಿ ಕುಳಿತದ್ದನ್ನು ಕಂಡು ವೇದಿಕೆಯಿಂದ ಎದ್ದುಬಂದ ಶಾಸಕ ದೊಡ್ಡನಗೌಡ ಪಾಟೀಲ, ಕಾರ್ಯಕ್ರಮ ನಡೆಯುವ ಸ್ಥಳದಲ್ಲಿ ಬಂದು ಈ ರೀತಿ ರಾಜಕಾರಣ ಮಾಡುವುದು ಸರಿಯಲ್ಲ, ನನಗೂ ರಾಜಕೀಯ ಗೊತ್ತಿದೆ ಎಂದು ಖಾರವಾಗಿ ಹೇಳಿದರು. ನಂತರ ಪ್ರತಿಭಟನಾಕಾರರನ್ನು ಸಮಾಧಾನಪಡಿಸಿ ಒಂದು ವಾರದ ಒಳಗೆ ಶಿಕ್ಷಕರನ್ನು ಕಳಿಸುವ ವ್ಯವಸ್ಥೆ ಮಾಡುವ ಭರವಸೆ ನೀಡಿದರು.

ಸಿಪಿಐ ನೀಲಪ್ಪ ಓಲೇಕಾರ, ಸಬ್‌ಇನ್ಸ್‌ಪೆಕ್ಟರ್ ಮಹಾದೇವ ಪಂಚಮುಖಿ, ಎಎಸ್‌ಐ ಸತ್ಯಪ್ಪ ಇದ್ದರು.

ಶಾಲೆ ಮಕ್ಕಳನ್ನು ಕರೆತಂದು ಶಿಕ್ಷಕ ದಿನಾಚರಣೆ ನಡೆಯುತ್ತಿದ್ದ ಸ್ಥಳದಲ್ಲಿ ಪ್ರತಿಭಟನೆ ನಡೆಸಿ ಕಾರ್ಯಕ್ರಮ ಅಸ್ತವ್ಯಸ್ತಗೊಳಿಸಿದ ಗ್ರಾಮಸ್ಥರ ವರ್ತನೆ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶಿಕ್ಷಕರು, ಸಾರ್ವಜನಿಕರು, ದಾಂಧಲೆ ಎಬ್ಬಿಸುವುದಕ್ಕೆ ಇದೇ ದಿನ ಬೇಕಿತ್ತೆ ಎಂದು ಆಕ್ಷೇಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.