ADVERTISEMENT

ಸರ್ಕಾರಿ ವೈದ್ಯರಿಗೆ ಕಾರಣ ಕೇಳಿ ನೋಟಿಸ್‌ ಜಾರಿ

ಪ್ರಜಾವಾಣಿ ಫಲಶೃತಿ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2013, 10:08 IST
Last Updated 20 ಡಿಸೆಂಬರ್ 2013, 10:08 IST

ಗಂಗಾವತಿ: ಸಾರ್ವಜನಿಕ ಸಾರಿಗೆ ಸಂಸ್ಥೆಯ ವಾಹನ ಸುಟ್ಟ ಪ್ರಕರಣ­ದಲ್ಲಿನ ಆರೋಪಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ನಕಲಿ ಪ್ರಮಾಣ ಪತ್ರ ನೀಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ವೈದ್ಯ ಜುಬೇರ್ ಅಹ್ಮದ್‌ ಮತ್ತು ಸಹಾಯಕ ಗೋರು­ಖಾನಾಥ್‌ಗೆ ಇಲಾಖೆ ಕಾರಣ ಕೇಳಿ ಇಲಾಖೆ ನೋಟಿಸ್‌ ಜಾರಿ ಮಾಡಿದೆ.

ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಮದನ್‌ಗೋಪಾಲ್‌ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಕಾರಣ ಕೇಳಿ ನೋಟಿಸ್‌ ಜಾರಿ ಮಾಡಿ­ದ್ದಾರೆ. 2 ವಾರದೊಳಗೆ ಉತ್ತರಿಸು­ವಂತೆ ಸೂಚಿಸಿದ್ದಾರೆ.

ರಾಜಸ್ತಾನದ ಜೋಧ­ಪುರ­ದಲ್ಲಿ 2012ರ ಜುಲೈ 13ರಂದು ಸಾರಿಗೆ ಸಂಸ್ಥೆ ಯ ವಾಹನ ಡಿಕ್ಕಿ ಹೊಡೆದು ಪಾದಚಾರಿ ಮೃತಪಟ್ಟಿದ್ದ. ಘಟನೆ­ಯಿಂದ ಆಕ್ರೋಶಗೊಂಡ ಜನ ವಾಹ­ನಕ್ಕೆ ಬೆಂಕಿ ಹಚ್ಚಿ ಪ್ರತಿಭಟನೆ ನಡೆ­ಸಿದ್ದರು. ವಾಹನಕ್ಕೆ ಬೆಂಕಿ ಹಚ್ಚಿದ ಪ್ರಕರಣದಲ್ಲಿ ನಗರದ ಜವಳಿ ವ್ಯಾಪಾರಿ ಬಾಬುಲಾಲ್‌ ಕೂಡ ಭಾಗಿಯಾಗಿ­ದ್ದಾರೆ ಎಂದು ಮಾಹಿತಿ ಕಲೆ ಹಾಕಿದ ರಾಜಸ್ತಾನದ ಪೊಲೀಸರು ತನಿಖೆಯ ಭಾಗವಾಗಿ ನಗರಕ್ಕೆ ಆಗಮಿಸಿ ಸ್ಥಳಿಯ ಪೊಲೀಸರ ಸಹಕಾರದಿಂದ ತನಿಖೆ ಕೈಗೊಂಡಿದ್ದರು.

ಆದರೆ ಬಾಬುಲಾಲ್‌, ಜೋಧಪು­ರದಲ್ಲಿ ಘಟನೆ ನಡೆದ ದಿನವೇ ಇಲ್ಲಿನ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗಿದ್ದಾಗಿ ವೈದ್ಯ ಜುಬೇರ್‌ ಅಹ್ಮದ್‌ ಅವರ ಸಹಿಯುಳ್ಳ ಪ್ರಮಾಣ ಪತ್ರವನ್ನು ರಾಜಸ್ತಾನದ ಪೊಲೀಸರಿಗೆ ನೀಡಿದ್ದಾರೆ. ಎರಡು ದಿನ ದಾಖಲಾದ ಬಾಬುಲಾಲ್‌ ಅವರಿಗೆ ನೀಡಿದ ಚಿಕಿತ್ಸೆ ಸೇರಿದಂತೆ ಯಾವೊಂದು ಮಾಹಿತಿ ಆಸ್ಪತ್ರೆಯ ದಾಖಲೆಗಳಲ್ಲಿ ಇರದಿರುವುದನ್ನು ಪತ್ತೆ ಹಚ್ಚಿದ ‘ಪ್ರಜಾವಾಣಿ’ ವರದಿ ಮಾಡಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.