ADVERTISEMENT

ಸಿಡಿಲಿಗೆ ಒಬ್ಬ ಬಲಿ, 6 ಜನರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 2 ಜೂನ್ 2011, 8:45 IST
Last Updated 2 ಜೂನ್ 2011, 8:45 IST

ಸುರಪುರ: ತಾಲ್ಲೂಕಿನ ಬಾದ್ಯಾಪುರ ಗ್ರಾಮದ ಸೀಮಾಂತರದಲ್ಲಿ ಸಿಡಿಲು ಬಡಿದು ರತ್ತಾಳ ಗ್ರಾಮದ ದೊಡ್ಡಭೀಮಣ್ಣ ಸಾಯಬಣ್ಣ ದೊಡ್ಡಮನಿ (28) ಸ್ಥಳದಲ್ಲೆ ಅಸುನೀಗಿದ ಘಟನೆ ಬುಧವಾರ ನಡೆದಿದೆ.

ಕುರಿ ಮಂದೆ ತೆಗೆದುಕೊಂಡು ಹೊಲಕ್ಕೆ ಹೋಗಿದ್ದ ಮೃತ ವ್ಯಕ್ತಿ ಮಧ್ಯಾಹ್ನದ ಸಮಯದಲ್ಲಿ ಗಿಡದ ಕೆಳಗೆ ಕುಳಿತು ಬುತ್ತಿ ಬಿಚ್ಚಿ ಊಟ ಮಾಡಲು ಸಿದ್ಧತೆ ನಡೆಸಿದ್ದ. ಸಿಡಿಲಿನಿಂದ ಎದೆಗೆ, ತೊಡೆಗೆ ಸುಟ್ಟ ಗಾಯಗಳಾಗಿವೆ. ಮೋಬೈಲ್ ಭಸ್ಮವಾಗಿದೆ. ಊಟದ ಬಿತ್ತಿ ಮೃತ ವ್ಯಕ್ತಿಯ ಪಕ್ಕದಲ್ಲಿ ಅನಾಥವಾಗಿ ಬಿದ್ದಿತ್ತು.

ಘಟನಾ ಸ್ಥಳಕ್ಕೆ ತಹಸೀಲ್ದಾರ್ ರಾಧೆಶಾಮ ಗುಡುಗುಂಟಿ, ಪೊಲೀಸ್ ಇನಸ್ಪೆಕ್ಟರ್ ರವೀಶನಾಯಕ್, ವೈದ್ಯಾಧಿಕಾರಿ ಡಾ. ಸುಭಾಷ ಡಬೀರ್ ಭೇಟಿ ನೀಡಿದ್ದರು. ಶವಸಂಸ್ಕಾರಕ್ಕಾಗಿ ಮೃತನ ಕುಟುಂಬಕ್ಕೆ ಒಂದು ಸಾವಿರ ರೂ. ಪರಿಹಾರ ಧನ ನೀಡಲಾಯಿತು. ಜಿಲ್ಲಾಧಿಕಾರಿ ಅನುಮತಿ ಪಡೆದು ನಂತರ ಒಂದು ಲಕ್ಷ ರೂ. ಪರಿಹಾರ ನೀಡಲಾಗುವುದು ಎಂದು ತಹಸೀಲ್ದಾರ್ ತಿಳಿಸಿದ್ದಾರೆ.

ಗಾಯ: ಮನೆಯಲ್ಲಿ ಪತರಾಗಳನ್ನು ಜೋಡಿಸುತ್ತಿದ್ದ ಐದು ಜನರಿಗೆ ಸಿಡಿಲಿನಿಂದ ಗಾಯಗಳಾಗಿವೆ. ನೀಲಮ್ಮ ರಂಗನಾಥ ದೊರಿ, ಹಣಮಂತ್ರಾಯ ಕೊಂಡಯ್ಯ ಜಾಲಹಳ್ಳಿ, ರಾಮಣ್ಣ ಹಣಮಂತ ಅಂಗಡಿ, ಶರಣಬಸವ ಪಾಂಡುರಂಗ ಧೊರಿ, ರೇಣುಕಾ ಸಕ್ರೆಪ್ಪ ತಳವಾರ ಹಾಗೂ ಮನೆಯಲ್ಲಿ ಕುಳಿತಿದ್ದ ಎಲ್ಲಮ್ಮ ಹಣಮಂತ ತಳವಾರ ಸಿಡಿಲು ಬಡಿದು ಮೂರ್ಛೆ ಹೋದರು. ಎಲ್ಲರನ್ನೂ ಸುರಪುರ ಸರ್ಕಾರಿ ಆಸ್ಪತ್ರೆಗೆ ಸೇರಿಸಲಾಗಿದೆ.

ಎಮ್ಮೆಗಳ ಸಾವು: ದೇವಿಕೇರಿ ಹತ್ತಿರದ ನೆಲಮನೆ ತಿಮ್ಮಪ್ಪನ ದೇವಸ್ಥಾನದ ಸಮೀಪ ಸುರೇಶ ಪುಜಾರಿ ಎಂಬುವವರಿಗೆ ಸೇರಿದ ಎರಡು ಎಮ್ಮೆಗಳು ಸಿಡಿಲು ಬಡಿದು ಮೃತ ಪಟ್ಟಿವೆ.

ಆಗ್ರಹ: ಮೃತ ವ್ಯಕ್ತಿಯ ಕುಟುಂಬಕ್ಕೆ ರೂ. 5 ಲಕ್ಷ, ಗಾಯಾಳುಗಳಿಗೆ ತಲಾ 50 ಸಾವಿರ ರೂ. ಎಮ್ಮೆ ಮಾಲಿಕರಿಗೆ ಅವುಗಳ ಮೌಲ್ಯದ ಪರಿಹಾರ ನೀಡಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ವೆಂಕಟೇಶ ಭೈರಿಮಡ್ಡಿ, ಜೆಡಿಎಸ್ ಮುಖಂಡ ಉಸ್ತಾದ್ ವಜಾಹತ್ ಹುಸೇನ್, ಬಿಜೆಪಿ ಮುಖಂಡರಾದ ಸಾಹೇಬಗೌಡ ದೇವಿಕೇರಿ, ಮಲ್ಕಪ್ಪ ಯಾದವ್, ಹೈ-ಕ ಹೋರಾಟ ಸಮಿತಿಯ ಅಧ್ಯಕ್ಷ ಅನಿಲ ಖಂಡಾರೆ ಆಗ್ರಹಿಸಿದ್ದಾರೆ.

ಸಿಡಿಲು ಆರ್ಭಟಕ್ಕೆ ಹೆದರಿ ವ್ಯಕ್ತಿ ಸಾವು
ರಾಯಚೂರು: ಗುಡುಗು ಸಿಡಿಲಿನ ಭಾರಿ ಶಬ್ದಕ್ಕೆ ಹೆದರಿ ವ್ಯಕ್ತಿಯೊಬ್ಬರು ಸಾವನ್ನಪ್ಪಿದ ಘಟನೆ ರಾಯಚೂರು ತಾಲ್ಲೂಕಿನ ಯರಗೇರಾ ಗ್ರಾಮದಲ್ಲಿ ಸಂಜೆ ನಡೆದಿದೆ.

ಸಾವನ್ನಪ್ಪಿದ ವ್ಯಕ್ತಿ ಪದ್ಮಣ್ಣ(55) ಎಂಬುವವರಾಗಿದ್ದಾರೆ. ಸಂಜೆ ಸುಮಾರು ಅರ್ಧ ತಾಸು ಮಳೆ ಗ್ರಾಮದಲ್ಲಿ ಮತ್ತು ಸುತ್ತಮುತ್ತಲಿನ ಪ್ರದೇಶದಲ್ಲಿ ಸುರಿಯಿತು. ಗುಡುಗು-ಸಿಡಿಲಿನ ಆರ್ಭಟ ಹೆಚ್ಚಾಗಿತ್ತು. ಪದ್ಮಣ್ಣ ಅವರು ಮಳೆ ಬಾಗಿಲಲ್ಲಿ ನಿಂತಿದ್ದಾಗ ಗುಡುಗು ಸಿಡಿಲಿನ ಭಾರಿ ಶಬ್ದಕ್ಕೆ ಹೆದರಿ ಸಾವನ್ನಪ್ಪಿದ್ದಾರೆ ಎಂದು ಯರಗೇರಾ ಪೊಲೀಸ್ ಠಾಣೆ ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.