ADVERTISEMENT

ಸ್ವಾಭಿಮಾನದ ಬದುಕಿಗೆ `ಅನ್ನಭಾಗ್ಯ' ಜಾರಿ

ಬಡವರಿಗೆ ಪ್ರತಿ ಕೆಜಿಗೆ ರೂ 1ರ ದರದಲ್ಲಿ ಅಕ್ಕಿ ವಿತರಣೆ, ಸಚಿವ ತಂಗಡಗಿ ಅಭಿಮತ

​ಪ್ರಜಾವಾಣಿ ವಾರ್ತೆ
Published 11 ಜುಲೈ 2013, 10:32 IST
Last Updated 11 ಜುಲೈ 2013, 10:32 IST

ಕೊಪ್ಪಳ: ಬಡಜನರ ಸ್ವಾಭಿಮಾನದ ಬದುಕಿಗಾಗಿ ಚುನಾವಣಾಪೂರ್ವದಲ್ಲಿ ಕೊಟ್ಟ ಭರವಸೆಯಂತೆ `ಅನ್ನಭಾಗ್ಯ' ಯೋಜನೆ ಜಾರಿಗೆ ತರಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದಲ್ಲಿ ಬುಧವಾರ ರಾಜ್ಯ ಸರ್ಕಾರದ ಬಿಪಿಎಲ್ ಕುಟುಂಬಕ್ಕೆ ಪ್ರತಿ ಕೆಜಿಗೆ ರೂ. 1ರ ದರದಲ್ಲಿ ಅಕ್ಕಿ ನೀಡುವ `ಅನ್ನಭಾಗ್ಯ' ಯೋಜನೆ ಉದ್ಘಾಟಿಸಿ ಅವರು ಮಾತನಾಡಿದರು.

ಈ ಯೋಜನೆಗೆ ಜಿಲ್ಲೆಯಲ್ಲಿ ವಿತರಿಸಲು 53,853 ಕ್ವಿಂಟಲ್ ಅಕ್ಕಿ ಬೇಕು. ಇದರಲ್ಲಿ ಅಧಿಕಾರಿಗಳು ಎಲ್ಲಿಯೂ ಅವ್ಯವಹಾರಕ್ಕೆ ಅವಕಾಶ ಮಾಡಿಕೊಡಬಾರದು. ಹಾಗೇನಾದರೂ ಆದರೆ ಗಂಭೀರ ಕ್ರಮ ಕೈಗೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.

ವೈದ್ಯಕೀಯ ಕಾಲೇಜು: ನಗರದಲ್ಲಿ ವೈದ್ಯಕೀಯ ಕಾಲೇಜು ಸ್ಥಾಪಿಸಲು ಜಮೀನು ಮಂಜೂರಾಗಿದೆ. ಶೀಘ್ರವೇ ಶಂಕುಸ್ಥಾಪನೆ ನೆರವೇರಿಸಿ ಕಟ್ಟಡ ನಿರ್ಮಾಣ ಆರಂಭಿಸಲಾಗುವುದು. ರೂ. 6.80 ಕೋಟಿ ವೆಚ್ಚದಲ್ಲಿ ನಗರದಲ್ಲಿ ಆಧುನಿಕ ಮಾರುಕಟ್ಟೆ ಸ್ಥಾಪಿಸಲಾಗುವುದು. ಜಿಲ್ಲೆಯ ಎಲ್ಲ ಭಾಗದಲ್ಲಿ ತೀವ್ರವಾಗಿರುವ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು. ನಗರದ ಪ್ರತಿ ವಾರ್ಡ್‌ಗೆ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಲು ಯೋಜನೆ ಸಿದ್ಧವಾಗಿದೆ ಎಂದರು.

ಶಾಸಕ ದೊಡ್ಡನಗೌಡ ಪಾಟೀಲ ಮಾತನಾಡಿ, ಬಡವರಿಗೆ ಅಕ್ಕಿ ನೀಡಿದಂತೆ  ಮಧ್ಯಮವರ್ಗದವರಿಗೂ ನೀಡಬೇಕು. ನಮ್ಮ ಸಹಿಗಿರುವ ಮೌಲ್ಯ, ಅಧಿಕಾರ ಜನರು ನೀಡಿದ ಬಿಕ್ಷೆ. ಅವರ ಸೇವೆಯ ಮೂಲಕ ಋಣ ತೀರಿಸಬೇಕು.
`ಅನ್ನಭಾಗ್ಯ' ಯೋಜನೆ ಹಾದಿ ತಪ್ಪದಂತೆ ಫಲಾನುಭವಿಗಳ ಜವಾಬ್ದಾರಿಯೂ ಮುಖ್ಯ ಎಂದು ನುಡಿದರು.

ಇದೇ ವೇಳೆ 2011-12ನೇ ಸಾಲಿನ ವಿಶೇಷ ಅನುದಾನ ಯೋಜನೆ ಅಡಿ ಫಲಾನುಭವಿಗಳಿಗೆ ಗ್ಯಾಸ್ ಸಿಲಿಂಡರ್ ಮತ್ತು ಸ್ಟೌವ್ ವಿತರಿಸಲಾಯಿತು.

ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಪಂಚಾಯಿತಿ ಅಧ್ಯಕ್ಷ ಟಿ.ಜನಾರ್ದನ ಹುಲಿಗಿ, ಉಪಾಧ್ಯಕ್ಷೆ ಅನ್ನಪೂರ್ಣಾ ಕಂದಕೂರಪ್ಪ, ತಾ.ಪಂ. ಅಧ್ಯಕ್ಷ ದೇವಣ್ಣ ಭರಮಪ್ಪ ಮೇಕಾಳಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್, ಜಿ.ಪಂ. ಸದಸ್ಯರಾದ ನಾಗನಗೌಡ ಮಾಲಿ ಪಾಟೀಲ, ಡಾ.ಸೀತಾ ಗೂಳಪ್ಪ, ಪ್ರಭಾರ ಜಿಲ್ಲಾಧಿಕಾರಿ ಗೋವಿಂದರೆಡ್ಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಂಜುನಾಥ ಅಣ್ಣಿಗೇರಿ, ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಿ.ಕೆ.ರವಿ ಇದ್ದರು. ಆಹಾರ ಮತ್ತು ನಾಗರಿಕ ಪೂರೈಕೆ ಇಲಾಖೆ ಉಪ ನಿರ್ದೇಶಕ ಕಲಘಟಗಿ ಅಶೋಕ ಭೀಮಣ್ಣ ಸ್ವಾಗತಿಸಿದರು.

ಯಡಿಯೂರಪ್ಪ ಸ್ಮರಣೆ
* ಸಚಿವ ಶಿವರಾಜ್ ತಂಗಡಗಿ ತಮ್ಮ ಭಾಷಣದಲ್ಲಿ ಇಂಥ ಮಹಾತ್ವಾಕಾಂಕ್ಷಿ ಯೋಜನೆಯನ್ನು ನಮ್ಮ ಮುಖ್ಯಮಂತ್ರಿಗಳಾದ ಯಡಿ... (ಯಡಿಯೂರಪ್ಪ) ಎಂದು ಹೇಳಲು ಹೊರಟರು... ತಕ್ಷಣ ಎಚ್ಚೆತ್ತುಕೊಂಡು ಸಿದ್ದರಾಮಯ್ಯ ಎಂದರು.

ಇದೇ ವಿಷಯ ಎತ್ತಿ ಹಿಡಿದ ಶಾಸಕ ದೊಡ್ಡನಗೌಡ ಪಾಟೀಲ, ತಂಗಡಗಿ ಮನಸ್ಸಿನಲ್ಲಿ ನಾವಿದ್ದೇವೆ. ಎಷ್ಟೆಂದರೂ ಅವರು ನಮ್ಮವರು (ಬಿಜೆಪಿ).  ಆ ಅಭಿಮಾನ (ಬಿಜೆಪಿ ಒಲವು) ಇನ್ನೂ ಹೆಚ್ಚಾಗಲಿ ಎಂದು ಒತ್ತಿ ಹೇಳಿದರು.

ರಾಯರೆಡ್ಡಿ ಗೈರು: ಬಹುತೇಕ ಕಾಂಗ್ರೆಸ್ ಬೆಂಬಲಿಗರೂ ವೇದಿಕೆಯಲ್ಲಿ ಕಾಣಿಸಿಕೊಂಡರು. ಯಲಬುರ್ಗದ ಕಾಂಗ್ರೆಸ್ ಶಾಸಕ ಬಸವರಾಜ ರಾಯರೆಡ್ಡಿ ಗೈರು ಹಾಜರಾಗಿದ್ದರು. ಈ ಬಗ್ಗೆ ಕೇಳಿದಾಗ ರಾಯರೆಡ್ಡಿ ಹಿರಿಯರು. ಅವರ ಜತೆ ನಿರಂತರ ಸಂಪರ್ಕದಲ್ಲಿ ಇದ್ದೇನೆ ಎಂದು ತಂಗಡಗಿ ಸಮಜಾಯಿಷಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.