ADVERTISEMENT

ಹೈಕೋರ್ಟ್ ಪೀಠ: ಸರ್ಕಾರಕ್ಕೆ ಮನವರಿಕೆ ಭರವಸೆ

​ಪ್ರಜಾವಾಣಿ ವಾರ್ತೆ
Published 22 ಜುಲೈ 2013, 8:29 IST
Last Updated 22 ಜುಲೈ 2013, 8:29 IST

ಕೊಪ್ಪಳ: ಕೊಪ್ಪಳ -ಬಳ್ಳಾರಿ ಜಿಲ್ಲೆಯನ್ನು ಧಾರವಾಡದ ಹೈಕೋರ್ಟ್ ಪೀಠದಲ್ಲೇ ಮುಂದುವರಿಸಬೇಕು ಎಂಬ ಬಗ್ಗೆ ವಿಧಾನಸಭೆಯಲ್ಲಿ ಈಗಾಗಲೇ ಚರ್ಚೆ ಆಗಿದ್ದು, ಜನರ ಅಭಿಪ್ರಾಯಕ್ಕೆ ತಕ್ಕಂತೆ ತಾವು ಸರ್ಕಾರಕ್ಕೆ ಈ ವಿಷಯವನ್ನು ಮನವರಿಕೆ ಮಾಡುವುದಾಗಿ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಹೇಳಿದರು.

ನಗರದ ವಕೀಲರ ಸಂಘದ ಆಶ್ರಯದಲ್ಲಿ ಕೊಪ್ಪಳ -ಬಳ್ಳಾರಿ ಜಿಲ್ಲೆಯನ್ನು ಧಾರವಾಡದ ಹೈಕೋರ್ಟ್ ಪೀಠ ವ್ಯಾಪ್ತಿಯಲ್ಲೇ ಮುಂದುವರಿಸಬೇಕು. ಗುಲ್ಬರ್ಗ ಪೀಠಕ್ಕೆ ವರ್ಗಾಯಿಸಬಾರದು ಎಂಬ ಒತ್ತಾಯ ಸಂಬಂಧಿಸಿ ನಡೆದ ಸಭೆಯಲ್ಲಿ ಭಾನುವಾರ ಅವರು ಮಾತನಾಡಿದರು.

ವಕೀಲರ, ಸಾರ್ವಜನಿಕರ ಹೋರಾಟದಲ್ಲಿ ತಮ್ಮ ಸಹಭಾಗಿತ್ವವೂ ಇದೆ. ಇನ್ನೊಮ್ಮೆ ವಿಚಾರವನ್ನು ಮುಖ್ಯಮಂತ್ರಿ ಗಮನಕ್ಕೆ ತರಲು ಪ್ರಯತ್ನಿಸುತ್ತೇನೆ. ಕಾನೂನು ಚೌಕಟ್ಟಿನೊಳಗೆ ನ್ಯಾಯಯುತ ಹೋರಾಟವನ್ನು ತಾವು ಬೆಂಬಲಿಸುವುದಾಗಿ ಹೇಳಿದರು.

ಬಳ್ಳಾರಿ ವಕೀಲರ ಸಂಘದ ಅಧ್ಯಕ್ಷ ಎ.ಜಿ.ಶಿವಕುಮಾರ್ ಮಾತನಾಡಿ, ಹೈದರಾಬಾದ್- ಕರ್ನಾಟಕದ ಅಭಿವೃದ್ಧಿಗಾಗಿ ತಂದಿರುವ ಸಂವಿಧಾನದ 371ನೇ (ಜೆ) ಕಲಂ ತಿದ್ದುಪಡಿ ಅಡಿ ತಮ್ಮ ಜಿಲ್ಲೆಗಳನ್ನು ಗುಲ್ಬರ್ಗ ಪೀಠಕ್ಕೆ ವರ್ಗಾಯಿಸುವ ಸಿದ್ಧತೆ ನಡೆಯುತ್ತಿದೆ. ಆದರೆ, ಸಾರ್ವಜನಿಕರ ಹಿತದೃಷ್ಟಿಯಿಂದ ಇದು ಅನನುಕೂಲಕರ ಎಂದು ಅಭಿಪ್ರಾಯಪಟ್ಟರು.

ರಾಜ್ಯ ವಕೀಲರ ಪರಿಷತ್ ಸದಸ್ಯ ಜಿ.ಎಂ.ಅನಿಲ್ ಕುಮಾರ್ ಮಾತನಾಡಿ, ನ್ಯಾಯಪೀಠದ ವಿಷಯದಲ್ಲಿ ಕೊಪ್ಪಳ ಮತ್ತು ಬಳ್ಳಾರಿ ಜಿಲ್ಲೆಯ ಜನತೆ ಆಟದ ಗೊಂಬೆಗಳಾಗಿಬಿಟ್ಟಿದ್ದೇವೆ. ಪೀಠ ವರ್ಗಾಯಿಸುವ ನಿರ್ಧಾರ ಅಧಿಕೃತವಾಗಿ ಹೊರಬೀಳುವ ಮುನ್ನ ಎಚ್ಚೆತ್ತು ಹೋರಾಟ ರೂಪಿಸಿದರೆ ಒಳ್ಳೆಯದು. ಆಗ ಸರ್ಕಾರದ ನಿರ್ಧಾರದಲ್ಲಿ ಬದಲಾವಣೆ ಮಾಡಬಹುದು. ಗುಲ್ಬರ್ಗ ಹೈಕೋರ್ಟ್ ಪೀಠದ ಪುನರುಜ್ಜೀವನಕ್ಕೆ ಈ ವರ್ಗಾವಣೆಯ ಹುನ್ನಾರ ನಡೆಯುತ್ತಿದೆ. ಅದಕ್ಕಾಗಿ ಈ ವಿಷಯದ ಮೇಲೆ ಗಂಭೀರ ಹಾಗೂ ರಚನಾತ್ಮಕ ಹೋರಾಟ ಮಾಡಬೇಕು ಎಂದು ಅಭಿಪ್ರಾಯಪಟ್ಟರು.

ಸಂಡೂರು ವಕೀಲರ ಸಂಘದ ಅಧ್ಯಕ್ಷ ವೀರೇಶ್ ಮಾತನಾಡಿ, ಈಗಾಗಲೇ ಧಾರವಾಡ ಪೀಠದಲ್ಲಿ ಈ ಭಾಗದ ಎಷ್ಟೋ ಪ್ರಕರಣಗಳು ವಿಚಾರಣೆಯಲ್ಲಿವೆ. ಅಲ್ಲಿ ವಕೀಲರನ್ನು ನೇಮಿಸಿ ಕಕ್ಷಿದಾರರು ವಿಚಾರಣೆಗೆ ಹಾಜರಾಗುತ್ತಿದ್ದಾರೆ. ಅದನ್ನು ಈಗ ಸ್ಥಳಾಂತರಿಸಿದರೆ ಗುಲ್ಬರ್ಗದಲ್ಲಿ ಮತ್ತೆ ಹೊಸ ವಕೀಲರನ್ನು ನೇಮಿಸಿ ಪ್ರಕರಣ ಮುಂದುವರಿಸಬೇಕಾಗುತ್ತದೆ. ಅಲ್ಲದೇ ಪ್ರಯಾಣ ವೆಚ್ಚವೂ ದುಬಾರಿಯಾಗುತ್ತದೆ. ಒಮ್ಮೆ ಧಾರವಾಡ ಇನ್ನೊಮ್ಮೆ ಗುಲ್ಬರ್ಗ ಎನ್ನುವ ಮೂಲಕ ಎರಡೂ ಜಿಲ್ಲೆಗಳನ್ನು ಫುಟ್‌ಬಾಲ್ ರೀತಿ ಆಡಿಸಲಾಗುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು.

ಹೊಸಪೇಟೆ ವಕೀಲರ ಸಂಘದ ಅಧ್ಯಕ್ಷ ಕೆ.ರತ್ನಾಕರ ಮಾತನಾಡಿ, ಗುಲ್ಬರ್ಗ ಪೀಠದಲ್ಲಿ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದ್ದರೆ ಅದಕ್ಕೆ ಅಲ್ಲಿನವರೇ ಹೊಣೆ. ಆದ್ದರಿಂದ ಪೀಠ ವರ್ಗಾವಣೆಯನ್ನು ವಿರೋಧಿಸಬೇಕು. ಈ ಹೋರಾಟದ ಬಿಸಿಯನ್ನು ಸಂಬಂಧಿಸಿದವರಿಗೆ ಮುಟ್ಟಿಸಬೇಕು. ಜನಪ್ರತಿನಿಧಿಗಳು, ರಾಜ್ಯಪಾಲರು ಸುಪ್ರೀಂ ಕೋರ್ಟ್‌ಗೆ ಮನವಿ ಕೊಡಬೇಕು ಎಂದು ಹೇಳಿದರು.

ವಕೀಲರ ಸಂಘದ ಅಧ್ಯಕ್ಷ ಎ.ವಿ. ಕಣವಿ ಪ್ರಾಸ್ತಾವಿಕ ಮಾತನಾಡಿದರು. ಆರ್.ವಿ.ಮಠದ್, ಸಂಧ್ಯಾ ಮಾದಿನೂರು ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.