ADVERTISEMENT

ಹೋಳಿ ರಂಗಿನಾಟಕ್ಕೆ ನಗರ ‘ಬಂದ್‌’

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 6:25 IST
Last Updated 17 ಮಾರ್ಚ್ 2014, 6:25 IST

ಕೊಪ್ಪಳ: ನಗರದ ಎಲ್ಲೆಡೆ ಭಾನುವಾರ ಹೋಳಿ ರಂಗು ಹರಡಿತ್ತು. ಅಬಾಲ ವೃದ್ಧರಾದಿಯಾಗಿ ಎಲ್ಲರೂ ರಂಗಿನ ಆಟದಲ್ಲಿ ಮಿಂದೆದ್ದರು. ಕೆಂಪು, ನೀಲಿ, ಹಸಿರು, ಕಪ್ಪು, ಹೀಗೆ ನಾನಾ ಬಣ್ಣ. ಮಕ್ಕಳ ಕೈಯಲ್ಲಿ ಪಿಚಕಾರಿ, ಹಲವೆಡೆ ಬಕೆಟ್‌ಗಟ್ಟಲೆ ಬಣ್ಣದ ನೀರು ಸುರಿಯುತ್ತಿದ್ದ ಮನೆಮಂದಿ. ಅಕ್ಷರಶಃ ನಗರ ರಂಗಿನಾಟದಲ್ಲೇ ಮುಳುಗಿತ್ತು.

ಇಡೀ ನಗರ ಹಬ್ಬದ ಹಿನ್ನೆಲೆಯಲ್ಲಿ ಅಘೋಷಿತ ಬಂದ್‌ ಆಚರಿಸಿತು. ಪೂರಕವಾಗಿ ಭಾನುವಾರ­ವಾದ್ದ­ರಿಂದ ರಜಾದಿನದ ಪ್ರಭಾವವೂ ಮೇಳೈ­ಸಿತು. ಕಿರಾಣಿ, ಇತರ ಸರಕುಗಳ ಅಂಗಡಿಗಳು ಬಿಡಿ, ಅಗತ್ಯ ಸೇವೆಗಳೆನಿಸಿದ ಔಷಧಿ ಅಂಗಡಿ, ಕ್ಲಿನಿಕ್‌, ಹೋಟೆಲ್‌ಗಳೂ ಮುಚ್ಚಿದ್ದವು. ವಾಹನ ಸಂಚಾರವೂ ಅಷ್ಟಕ್ಕಷ್ಟೇ.

ರಸ್ತೆಯಲ್ಲಿ ನಿತ್ಯಸಂಚಾರಿ ಬಸ್‌ಗಳು, ಹುಡುಗರ ಹುಚ್ಚಾಟದಲ್ಲಿ ಕೆಲವು ಬೈಕ್‌ಗಳು ಭರ್ರನೆ ಸಾಗಿದ್ದನ್ನು ಬಿಟ್ಟರೆ ಉಳಿದ ವಾಹನಗಳು ನಿಲ್ದಾಣದಲ್ಲೇ ಸುಮ್ಮನಿದ್ದವು. ಜವಾಹರ ರಸ್ತೆ, ದಿವಟರ ವೃತ್ತ, ದಿಡ್ಡಿಗೇರಿ ಓಣಿ, ಗೌರಿ ಅಂಗಳ, ಗವಿಮಠದ ಮೈದಾನ, ಭಾಗ್ಯನಗರ ಹೀಗೆ ಎಲ್ಲಿ ನೋಡಿದರಲ್ಲಿ ರಂಗೇ ರಂಗು.

ಮನೆಯಲ್ಲಿ ಸುಮ್ಮನೆ ಕುಳಿತಿದ್ದವರನ್ನೂ ಬಿಡ­ಲಿಲ್ಲ. ಹೊರಗೆಳೆದು ಬಣ್ಣ ಹಚ್ಚಿ ಸಂಭ್ರಮಿಸಿದರು. ತರಲೆ ಮಾಡಿದರೆ ಬಣ್ಣದ ಪುಡಿ ಸುರಿದು ಅದರ ಮೇಲೊಂದು ಮೊಟ್ಟೆ ಒಡೆಯುತ್ತಿದ್ದರು. ಹಾಗೆ ಬಣ್ಣ ಹಚ್ಚಿಸಿಕೊಂಡವ ದಿನವಿಡೀ ಅಂಟಿನಿಂದ ಪರದಾಡಬೇಕು. ಆ ರೀತಿ ಯುವಕರ, ಮಕ್ಕಳ ಗದ್ದಲವಿತ್ತು.

ಈಗಾಗಲೇ ಖರೀದಿಸಿದ್ದ ಬಣ್ಣ ಸಾಲದಾದಾಗ ಬಣ್ಣದ ಪುಡಿಯ ಅಂಗಡಿಗೆ ಬಾಗಿಲು ಮುಚ್ಚಿ­ದ್ದರೂ ಲಗ್ಗೆಯಿಟ್ಟರು. ಮಾಲೀಕರನ್ನು ಕಾಡಿಬೇಡಿ ಬಣ್ಣ ಪಡೆದರು. ರಸ್ತೆಬದಿ ತಳ್ಳುಗಾಡಿಯಲ್ಲಿದ್ದ ಬಣ್ಣಗಳೂ ಖಾಲಿಯಾದವು. ಹೀಗೆ ‘ಬಂದ್‌’ ನಡುವೆ ಯುವಕರ ಸಂಭ್ರಮ­ವಿತ್ತು. ಸೂಕ್ಷ್ಮ ಪ್ರದೇಶಗಳಲ್ಲಿ ಪೊಲೀಸರೂ ಕಾವ­ಲಿ­ಗಿದ್ದರು. ಮದ್ಯ ಮಾರಾಟ ನಿಷೇಧಿಸಲಾಗಿತ್ತು.

ಮಧ್ಯಾಹ್ನದವರೆಗೆ ಸಾಗಿದ ಅದ್ದೂರಿ ರಂಗಿ­ನಾಟ ಮುಂದೆ ನಗರದ ಹೊರಗಿನ ಹಳ್ಳ, ಕೆರೆಗ­ಳಲ್ಲಿ ಸಮಾರೋಪಗೊಂಡಿತು. ಕೆಲವರು ಹಿರೇ­ಹಳ್ಳ ಅಣೆಕಟ್ಟೆಯಲ್ಲಿ, ತುಂಗಭದ್ರಾ ಹಿನ್ನೀರು ಪ್ರದೇ­ಶ­­ದಲ್ಲಿ, ಮುನಿರಾಬಾದ್‌ ಸಮೀಪದ ತುಂಗಭದ್ರಾ ಕಾಲುವೆಯಲ್ಲಿ ಮಿಂದು ಬಣ್ಣ ತೊಳೆದುಕೊಂಡರು. ಹಾಗಿದ್ದರೂ ಬಣ್ಣದ ಛಾಯೆ ಪೂರ್ಣ ಅಳಿಸಿರಲಿಲ್ಲ.

ಕಳೆದ ಮಧ್ಯರಾತ್ರಿ ಕಾಮನಹಬ್ಬ ಆಚರಿಸಿದ ಹುಡುಗರು ಇಂದು ಬಣ್ಣದೋಕುಳಿ ಆಡಿದ್ದಾರೆ. ಇದರಲ್ಲಿ ವಯಸ್ಸು, ಜಾತಿ ಬೇಧವಿಲ್ಲ. ಇದು ನಮ್ಮ ಸಂಸ್ಕೃತಿಯ ಭಾಗ. ಹಾಗಾಗಿ ಎಲ್ಲರೂ ಪಾಲ್ಗೊಂಡಿದ್ದೇವೆ ಎಂದು ರಂಗಿನಾಟದಲ್ಲಿ ತೊಡ­ಗಿದ್ದ ಹಿರಿಯ ನಾಗರಿಕ ಹನುಮಂತಪ್ಪ ತಿಳಿಸಿದರು. ಸಂಜೆ ವೇಳೆಗೆ ನಗರದಲ್ಲಿ ಕೆಲವು ಅಂಗಡಿಗಳು ತೆರೆದಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.