ADVERTISEMENT

‘ಪುರಿ ರಥೋತ್ಸವ ಮೀರಿಸಿದ ಜಾತ್ರೆ’

​ಪ್ರಜಾವಾಣಿ ವಾರ್ತೆ
Published 27 ಜನವರಿ 2016, 7:11 IST
Last Updated 27 ಜನವರಿ 2016, 7:11 IST
ಕೊಪ್ಪಳ ಗವಿಮಠದ ರಥೋತ್ಸವ ಉದ್ಘಾಟನೆ ಸಂದರ್ಭ ಜನಸ್ತೋಮ ವೀಕ್ಷಿಸುತ್ತಿರುವ ವಿಜ್ಞಾನಿ ಡಾ.ಸಿ.ಎನ್‌.ಆರ್‌.ರಾವ್‌. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ
ಕೊಪ್ಪಳ ಗವಿಮಠದ ರಥೋತ್ಸವ ಉದ್ಘಾಟನೆ ಸಂದರ್ಭ ಜನಸ್ತೋಮ ವೀಕ್ಷಿಸುತ್ತಿರುವ ವಿಜ್ಞಾನಿ ಡಾ.ಸಿ.ಎನ್‌.ಆರ್‌.ರಾವ್‌. ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ   

ಕೊಪ್ಪಳ: ಗವಿಮಠದ ಜಾತ್ರೆಗೆ ಸೇರಿದ ಜನ ಸ್ತೋಮವನ್ನು ನೋಡಿದ ಭಾರತ ರತ್ನ ಪುರಸ್ಕೃತ ವಿಜ್ಞಾನಿ ಡಾ.ಸಿ.ಎನ್‌.ಆರ್‌.ರಾವ್‌ ಈ ಜಾತ್ರೆ ಪುರಿ ಜಗನ್ನಾಥ ರಥೋತ್ಸವವನ್ನೂ ಮೀರಿಸುವಷ್ಟಿದೆ ಎಂದು ಉದ್ಗರಿಸಿದರು.

ಜೀವನದಲ್ಲಿ ಇಂಥ ಜನಸ್ತೋಮವನ್ನು ಕಂಡಿರಲಿಲ್ಲ. ನನ್ನ ಇಲ್ಲಿನ ಭೇಟಿ ಸಾರ್ಥಕವಾಗಿದೆ. ಇಂಥ ಜಾತ್ರೆ ಕರ್ನಾಟಕದಲ್ಲಿರುವುದು ಹೆಮ್ಮೆಯ ವಿಷಯ ಎಂದರು.

ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಮಾತನಾಡಿ, ಮನುಷ್ಯರು ಸಾಮರಸ್ಯ, ಪ್ರೇಮದಿಂದ ಬಾಳಬೇಕು ಎಂಬುದೇ ಸಂತರ, ಶರಣರ ದೇವವಾಣಿ ಆಗಿತ್ತು. ದ್ವೇಷ, ಅಸೂಯೆ ಅಳಿಯಬೇಕು. ಭಕ್ತಿ, ಭಾವ ತುಂಬಿ ಸಾಮರಸ್ಯದಿಂದ ಎಲ್ಲರೂ ಬಾಳಬೇಕು ಎಂಬುದೇ ಅವರ ಬದುಕಿನ ಉದ್ದೇಶ ಆಗಿತ್ತು. ಅಜ್ಜನ ಜಾತ್ರೆಗೆ ಬನ್ನಿ ಎಂಬ ಮೂರು ಅಕ್ಷರಗಳಲ್ಲಿ ಸ್ಫೂರ್ತಿಯ ಕಿಡಿ ಇದೆ.

ಹಿಂದಿನ ಶರಣರು ಇಲ್ಲಿನ ಮಠವನ್ನು ಕೇವಲ ಕಲ್ಲಿನೊಳಗೆ ಕೆತ್ತಿದ ಗುಹೆಯಲ್ಲಿ ಸ್ಥಾಪಿಸಿಲ್ಲ. ಪ್ರತಿ ಭಕ್ತರ ಹೃದಯದೊಳಗೆ ಗವಿಮಠ ಸ್ಥಾಪಿಸಿದ್ದಾರೆ. ಮಹಾರಾಜ ಮಣ್ಣನ್ನಾಳಿದರೆ ಮಹಾತ್ಮರು ಜನರ ಮನಸ್ಸು ಹೃದಯವನ್ನು ಆಳುತ್ತಾರೆ.  ಮಹಾರಾಜ ಚಿನ್ನದ ಸಿಂಹಾಸನ ಏರಿದರೆ ಅದನ್ನು ಕಸಿದುಕೊಳ್ಳುವವರು ಬಹಳ ಮಂದಿ. ಮಹಾತ್ಮರು ಜನರ ಮನಸ್ಸು ಹೃದಯದಲ್ಲಿ ಕುಳಿತುಕೊಳ್ಳುತ್ತಾರೆ ಎಂದರು.

ಮಠದಲ್ಲಿ ಆಸ್ತಿ, ಹಣಕಾಸು, ಶಿಕ್ಷಣ ಸಂಸ್ಥೆಗಳು ಇದ್ದರೆ ಅದು ದೊಡ್ಡದೆನಿಸುವುದಿಲ್ಲ. ಭಕ್ತರು ಹೃದಯ, ಮನಸ್ಸಿನಲ್ಲಿ ಜಾಗ ಕೊಟ್ಟರೆ ಮಾತ್ರ ಮಠ ಮತ್ತು ಸ್ವಾಮೀಜಿಗಳು ದೊಡ್ಡವರೆನಿಸಿಕೊಳ್ಳುತ್ತಾರೆ. ಜಾತ್ರೆಯ ಜತೆ ಹೊಸ ಆಲೋಚನೆಗಳು ಕೂಡಬೇಕು. ನಾವೆಲ್ಲರೂ ಸಕಾರಾತ್ಮಕವಾಗಿ ಜಾತಿ, ಪಕ್ಷ ಬೇಧ ಮರೆತು ಹೆಜ್ಜೆ ಇಟ್ಟಾಗ ದೇಶ ಕಟ್ಟುವಲ್ಲಿ ಮುಂದುವರಿದರೆ ದೇಶ ಸಾಕಷ್ಟು ಮುಂದುವರಿಯಲು ಸಾಧ್ಯ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.