ADVERTISEMENT

‘ಸಚಿವ ಸಂಪುಟದಿಂದ ಲಾಡ್‌ರನ್ನು ಕೈಬಿಡಿ’

​ಪ್ರಜಾವಾಣಿ ವಾರ್ತೆ
Published 25 ಸೆಪ್ಟೆಂಬರ್ 2013, 6:39 IST
Last Updated 25 ಸೆಪ್ಟೆಂಬರ್ 2013, 6:39 IST

ಗಂಗಾವತಿ: ಗಣಿ ಅಕ್ರಮ ನಡೆದಿದೆ ಎಂದು ಬೊಬ್ಬೆ ಹೊಡೆದ ಕಾಂಗ್ರೆಸ್‌, ಸಿದ್ದರಾಮಯ್ಯ ನೇತೃತ್ವದಲ್ಲಿ ಬೆಂಗಳೂರಿನಿಂದ ಬಳ್ಳಾರಿ ವರೆಗೂ ಪಾದಯಾತ್ರೆ ನಡೆಸಿತು. ಸಿದ್ದರಾಮಯ್ಯನವರೆ ಈಗ ನೀವೇ ಮುಖ್ಯಮಂತ್ರಿ. ಆದರೂ ಸಚಿವ ಸಂಪುಟದಲ್ಲಿ ಗಣಿ ಹಗರಣದಲ್ಲಿರುವ ಸಚಿವರನ್ನು ಏಕೆ ಕೈಬಿಡುತ್ತಿಲ್ಲ?

ಹಿಗೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು   ಪ್ರಶ್ನಿಸಿದವರು ಬಿಎಸ್‌ಆರ್‌ ಪಕ್ಷದ ಸಂಸ್ಥಾಪಕ ಅಧ್ಯಕ್ಷ ಹಾಗೂ ಬಳ್ಳಾರಿ ಗ್ರಾಮೀಣ ಕ್ಷೇತ್ರದ ಶಾಸಕ ಬಿ. ಶ್ರೀರಾಮುಲು, ಪ್ರಕರಣವೊಂದಕ್ಕೆ ಸ್ಥಳೀಯ ನ್ಯಾಯಾಲಯದಲ್ಲಿ ಹಾಜರಾಗಲು ಬುಧವಾರ ಇಲ್ಲಿಗೆ ಭೇಟಿ ನೀಡಿದ್ದ ಸಂದ-­ರ್ಭದಲ್ಲಿ ಅವರು ಮಾತ­ನಾ­ಡಿದರು.

ಲೋಕಾ­ಯುಕ್ತ ವರದಿ­ಯಲ್ಲೂ ಸಂತೋಷ್‌ ಲಾಡ್‌ ಗಣಿ ಅಕ್ರಮ ಎಸಗಿರುವ ವರದಿ ಪ್ರಸ್ತಾಪವಾಗಿದೆ. ಕೂಡಲೇ ಸಚಿವ ಸ್ಥಾನದಿಂದ ಸಂತೋಷ್‌ ಲಾಡ್‌ರನ್ನು ಕೈಬಿಡದಿದ್ದರೆ ಮುಂದಿನ ದಿನಗಳಲ್ಲಿ ಹೋರಾಟ ರೂಪಿಸಲಾಗುವುದು ಎಂದು ಶ್ರೀರಾಮುಲು ಎಚ್ಚರಿಸಿದರು.

ಕೊಪ್ಪಳ, ಗದಗ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳಲ್ಲಿ ಡೆಂಗೆ ಪ್ರಕರಣ ವಿಪರೀತವಾಗಿ ಪತ್ತೆಯಾಗುತ್ತಿವೆ. ವಾಸ್ತವಿಕವಾಗಿ ರಾಜ್ಯದಲ್ಲಿ ಆರೋಗ್ಯ ಸಚಿವರು ಇದ್ದಾರೆಯೆ? ಅವರು ಕಾರ್ಯ ನಿವರ್ಹಿಸುತ್ತಿದ್ದಾರೆಯೆ ಎಂಬ ಅನುಮಾನ ಮೂಡುತ್ತಿದೆ ಎಂದರು.

ಅತ್ಯಂತ ಸರಳ ಎಂದು ಭಾವಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಟು–ಬೂಟು ಹಾಕಿಕೊಂಡು ಚೀನಾ ಪ್ರವಾಸ ಮಾಡಿ ಬಂದ ಬಳಿಕ ಅಲ್ಲಿನ ರಸ್ತೆಗಳು, ಅಭಿವೃದ್ಧಿಯ ಬಗ್ಗೆ ಶ್ಲಾಘಿಸುತ್ತಿದ್ದಾರೆ. ಆದರೆ ರಾಜ್ಯದ ರಸ್ತೆಗಳ ಚಿತ್ರಣ ಮುಖ್ಯಮಂತ್ರಿ ಕಣ್ಣಿಗೆ ಗೋಚರಿಸುತ್ತಿಲ್ಲ ಎಂದು ಆರೋಪಿಸಿದರು.

ಕೇವಲ ಮೈಸೂರಿಗಷ್ಟೆ ಸೀಮಿತವಾಗಿರುವ ಮುಖ್ಯಮಂತ್ರಿ, ಮೈಸೂರು, ಬೆಂಗಳೂರು ಭಾಗ ಅಭಿವೃದ್ಧಿಯಾದರೆ ಸಾಕು ಇಡೀ ಕರ್ನಾಟಕ ಅಭಿವೃದ್ಧಿಯಾದಂತೆ ಎಂದು ಸಿದ್ದರಾಮಯ್ಯ ಕನಸು ಕಾಣುತ್ತಿದ್ದಾರೆ ಎಂದು ಶ್ರೀರಾಮುಲು ಆರೋಪಿಸಿದರು.

ಪ್ರವಾಸ ಕೈಗೊಳ್ಳಲಿ: ನೆರೆ ಹಾವಳಿಗೀಡಾದ ಪ್ರದೇಶಗಳ ಸಮೀಕ್ಷೆಗೆ ಕೇಂದ್ರದ ಅಧ್ಯಯನ ತಂಡ ರಾಜ್ಯಕ್ಕೆ ಬರುತ್ತಿದೆ. ಕೇವಲ ಮುಂದುವರಿದ ಜಿಲ್ಲೆಗಳಲ್ಲಿ ಪ್ರವಾಸ ಕೈಗೊಳ್ಳದೇ ಉತ್ತರ ಕರ್ನಾಟಕ ಜಿಲ್ಲೆಗಳಲ್ಲಿ ಹೆಚ್ಚು ಪ್ರವಾಸ ಹಮ್ಮಿಕೊಂಡು ನಿಷ್ಪಕ್ಷಪಾತ ವರದಿ ಕೇಂದ್ರಕ್ಕೆ ನೀಡಬೇಕು.

ಅಧ್ಯಯನ ತಂಡದ ಸಮೀಕ್ಷೆಯ ಪ್ರಕಾರ ಕೇಂದ್ರ ಸರ್ಕಾರ ತಕ್ಷಣ ಪರಿಹಾರವನ್ನು ಅದೂ ಉತ್ತರ ಕರ್ನಾಟಕಕ್ಕೆ ಹೆಚ್ಚಿನ ಪ್ರಮಾಣದ ಅನುದಾನ ಬಿಡುಗಡೆ ಮಾಡಬೇಕೆಂದು  ಒತ್ತಾಯಿಸಿದರು.  ಮುಖಂಡರಾದ ಮುಕುಂದ್‌ ರಾವ್‌ ಭವಾನಿಮಠ, ದಢೇಸ್ಗೂರು ಬಸವರಾಜ ಇತರರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.