ADVERTISEMENT

‘ಸಾಲ ಮನ್ನಾ: ಘೋಷಣೆಗಷ್ಟೇ ಸೀಮಿತ’

​ಪ್ರಜಾವಾಣಿ ವಾರ್ತೆ
Published 4 ಜನವರಿ 2014, 8:55 IST
Last Updated 4 ಜನವರಿ 2014, 8:55 IST

ಕುಷ್ಟಗಿ: ಸಂಕಷ್ಟದಲ್ಲಿರುವ ದಾಳಿಂಬೆ ಬೆಳೆಗಾರರ ಸಾಲ ಮತ್ತು ಬಡ್ಡಿ ಮನ್ನಾ ಮಾಡುವ ವಿಷಯದಲ್ಲಿ ಸೂಕ್ತ ಆದೇಶ ಹೊರಡಿಸದೇ ರಾಜ್ಯ ಸರ್ಕಾರ ಮೀನ ಮೇಷ ಎಣಿಸುತ್ತಿದೆ ಎಂದು ರಾಜ್ಯ ದಾಳಿಂಬೆ ಬೆಳೆಗಾರರ ಟ್ರಸ್ಟ್‌ ದೂರಿದೆ.

ಶುಕ್ರವಾರ  ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ, ರಾಜ್ಯ ಘಟಕದ ಅಧ್ಯಕ್ಷ ಅಬ್ದುಲ್‌ ನಯೀಮ್‌ ಮತ್ತು ಇತರ ಪ್ರಮುಖ ದಾಳಿಂಬೆ ಬೆಳೆಗಾರರು, ಶೀಘ್ರದಲ್ಲಿಯೇ ಲೋಕಸಭೆ ಚುನಾ­ವಣೆ ಘೋಷಣೆಯಾಗುವ ಸಾಧ್ಯತೆ ಇದ್ದು ಅಷ್ಟರೊಳಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಘೋಷಣೆ ರಾಜ್ಯ ಸರ್ಕಾರದ ಸ್ಪಷ್ಟ ಆದೇಶದ ಮೂಲಕ ಕಾರ್ಯರೂಪಕ್ಕೆ ಬರಬೇಕು ಎಂದು ಒತ್ತಾಯಿಸಿದರು.

ಅನೇಕ ವರ್ಷಗಳಿಂದಲೂ ಶಾಂತಿ­ಯುತ ಹೋರಾಟದ ಮೂಲಕ ರೈತರ ಸ್ಥಿತಿಯನ್ನು ಸರ್ಕಾರದ ಗಮನಕ್ಕೆ ತರುವುಲ್ಲಿ ಪ್ರಯತ್ನಿಸಿದ್ದೇವೆ. ಬಡ್ಡಿ ಮನ್ನಾ ಮಾಡುವುದಾಗಿ ಮುಖ್ಯ­ಮಂತ್ರಿ ಸಿದ್ದರಾಮಯ್ಯ ಡಿ. 24ರಂದು ಘೋಷಿಸಿದ್ದರೂ ಆದೇಶ ಹೊರಬಿದ್ದಿಲ್ಲ  ಎಂದರು.

ಈ ಮಧ್ಯೆ ದಾಳಿಂಬೆ ಬೆಳೆಗಾರರ ಸಾಲ ಮತ್ತು ಸ್ಥಿತಿಗತಿಗೆ ಸಂಬಂಧಿಸಿದ ವಿವರಗಳನ್ನು ಕುರಿತು ಚರ್ಚಿಸಿ ತೀರ್ಮಾನ ತೆಗೆದುಕೊಳ್ಳಲು ವಿವಿಧ ಇಲಾಖೆಗಳನ್ನು ಒಳಗೊಂಡ ಅಂತರ ಇಲಾಖೆಗಳ ಸಮಿತಿ ರಚಿಸಿ ಸಹಕಾರ ಇಲಾಖೆಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿ­ದ್ದಾರೆ.

ಆದರೆ ಈಗಾಗಲೇ ತೋಟ­ಗಾರಿಕೆ, ಕೃಷಿ, ಸಹಕಾರ ಇಲಾಖೆಗಳು, ರಾಜ್ಯಮಟ್ಟದ ಬ್ಯಾಂಕರ್‌ಗಳ ಸಮಿತಿ (ಎಸ್‌ಎಲ್‌ಬಿಸಿ) ದಾಳಿಂಬೆ ಬೆಳೆ ಮತ್ತು ಬೆಳೆಗಾರರಿಗೆ ಸಂಬಂಧಿಸಿದ ವಾಸ್ತವ ಅಂಶಗಳನ್ನು ಒಳಗೊಂಡ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿವೆ. ಸ್ವತಃ ರಾಜ್ಯ ಸರ್ಕಾರವೇ ₨ 206 ಕೋಟಿ ಸಾಲದ ಮೊತ್ತ ಬಾಕಿ ಇದೆ ಎಂದು ಕೇಂದ್ರಕ್ಕೆ ವರದಿ ನೀಡಿದೆ. ಹೀಗಿದ್ದೂ ಮತ್ತೆ ಅಂತರ ಇಲಾಖೆಗಳ ಸಮಿತಿ ರಚಿಸುವ ಅಗತ್ಯವೇ ಇರಲಿಲ್ಲ. ಇದು ರೈತರ ದಾರಿ ತಪ್ಪಿಸುವ ಕೆಲಸ ಎಂದು ದೂರಿದರು.

ರೈತರ ಆಸ್ತಿ ಮುಟ್ಟುಗೋಲಿಗೆ ಮತ್ತು ಮನೆಗಳನ್ನು ಜಪ್ತಿ ಮಾಡಲು ಬ್ಯಾಂಕ್‌ಗಳು ಒತ್ತಡ ಹೇರುತ್ತಿರು­ವುದ­ಲ್ಲದೇ ನ್ಯಾಯಾಲಯಗಳಲ್ಲಿ ಮೊಕ­ದ್ದಮೆ ದಾಖಲಿಸಿವೆ. ಹಾಗಾಗಿ ರೈತರು ಮಾನಸಿಕ ಒತ್ತಡಕ್ಕೆ ಸಿಲುಕಿದ್ದಾರೆ. ರೈತರ ಸ್ಥಿತಿ ಬಿಗಡಾಯಿಸಿದೆ, ಆದರೂ ರಾಜ್ಯ ಸರ್ಕಾರ ಪರಿಸ್ಥಿತಿಯ ಗಂಭೀರತೆ ಅರ್ಥಮಾಡಿಕೊಳ್ಳದಿರುವುದು ದುರ­ದೃ­ಷ್ಟಕರ ಸಂಗತಿ ಎಂದು ಬೆಳೆಗಾರರು ಆಕ್ರೋಶ ವ್ಯಕ್ತಪಡಿಸಿದರು.

ಪ್ರಮುಖರಾದ ಮಾನಪ್ಪ ಬಡಿ­ಗೇರ, ಶ್ರೀಹರಿ ಆಶ್ರೀತ್‌, ಶಿವನಗೌಡ ಮದ­ಲಗಟ್ಟಿ, ಫೈರೋಜ ಆನೆ­ಹೊಸೂರು, ಮಹೇಶ ಕೊನಸಾಗರ, ಸುರೇಶ ಮಂಗಳೂರು, ಬಸವರಾಜ ಮೇಳಿ, ಹಿರೇಮಠ ಇತರರು ಇದ್ದರು.

ಬ್ಯಾಂಕ್‌ನಿಂದಲೇ ಧರಣಿ ಎಚ್ಚರಿಕೆ: ಪತ್ರಿಕಾಗೋಷ್ಠಿ ವೇಳೆ ದಾಳಿಂಬೆ ಬೆಳೆಗಾರರ ಸಂಘದ ಅಧ್ಯಕ್ಷ ಅಬ್ದುಲ್‌ ನಯೀಮ್‌ ಅವರಿಗೆ ದೂರವಾಣಿ ಕರೆ ಮಾಡಿದ ತುಮಕೂರು ಜಿಲ್ಲೆಯ ಹಿರಿಯೂರಿನ ರೈತ ಗುಣ್ಣಯ್ಯ, ದಾಳಿಂಬೆ ಸಾಲವನ್ನು ಜ.7ರ ಒಳಗೆ ಮರುಪಾವತಿ ಮಾಡದಿದ್ದರೆ ಕೇಂದ್ರ ಕಚೇರಿ ಅಧಿಕಾರಿಗಳು ತಮ್ಮ ಮನೆಯ ಮುಂದೆ ಧರಣಿ ಹೂಡುವುದಲ್ಲದೆ ಮನೆ ಜಪ್ತಿ ಮಾಡುವುದಾಗಿ ಸಹಕಾರ ಬ್ಯಾಂಕ್‌ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ ಎಂಬುದನ್ನು ವಿವರಿಸಿದರು.

ಅಲ್ಲದೇ ಯಲಬುರ್ಗಾ ತಾಲ್ಲೂಕಿನ  ಬೇವೂರಿನ ರೈತ ಟಿ.ಶರಣಪ್ಪ, ಸ್ಥಳೀಯ ಗ್ರಾಮೀಣ ಬ್ಯಾಂಕ್‌ ಶಾಖೆಯವರು ಸಾಲಗಾರರಿಗೆ ಜಾಮೀನು­ದಾರರಾಗಿ­ರುವವರ ವಿರುದ್ಧ ನ್ಯಾಯಾಲಯದಲ್ಲಿ ದಾವೆ ಹೂಡುವುದಾಗಿ ಎಚ್ಚರಿಕೆ ನೀಡಿದ್ದಾರೆ ಎಂದು ಹೇಳಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಅಧ್ಯಕ್ಷ ನಯೀಮ್‌, ಮುಖ್ಯಮಂತ್ರಿಗಳ ನಿರ್ಧಾ­ರವನ್ನು ಗೌರವಿಸದ ಬ್ಯಾಂಕುಗಳ ವಿರುದ್ಧ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.