ADVERTISEMENT

ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ

ಜಿಲ್ಲಾ ಗೊಲ್ಲ (ಯಾದವ) ಸಮಾಜದ ಪದಾಧಿಕಾರಿಗಳಿಂದ ಮನವಿ ಸಲ್ಲಿಕೆ

​ಪ್ರಜಾವಾಣಿ ವಾರ್ತೆ
Published 5 ಅಕ್ಟೋಬರ್ 2020, 13:48 IST
Last Updated 5 ಅಕ್ಟೋಬರ್ 2020, 13:48 IST
ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಯಾದವ ಸಮಾಜದ ವತಿಯಿಂದ ಸೋಮವಾರ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು
ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ಒತ್ತಾಯಿಸಿ ಜಿಲ್ಲಾ ಯಾದವ ಸಮಾಜದ ವತಿಯಿಂದ ಸೋಮವಾರ ಕೊಪ್ಪಳದ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಲಾಯಿತು   

ಕೊಪ್ಪಳ: ರಾಜ್ಯದಲ್ಲಿ ಗೊಲ್ಲ ಜನಾಂಗದವರು ಹೆಚ್ಚಿನ ಸಂಖ್ಯೆಯಲ್ಲಿದ್ದು,ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಗೊಲ್ಲ ಅಭಿವೃದ್ದಿ ನಿಗಮ ಸ್ಥಾಪಿಸಬೇಕು ಎಂದು ಜಿಲ್ಲಾ ಗೊಲ್ಲ (ಯಾದವ) ಸಮಾಜದ ಪದಾಧಿಕಾರಿಗಳು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ರಾಜ್ಯ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆಗೆ ಆದೇಶಿಸಿರುವುದು ಯಾದವ-ಗೊಲ್ಲ ಸಮುದಾಯಕ್ಕೆ ಅತ್ಯಂತ ವಿಷಾದಕರ ಸಂಗತಿ. ಆದರೆ ಬಹುದಿನಗಳಿಂದ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪನೆ ಮಾಡುವಂತೆ ಸಮಾಜದ ಜನತೆ ಒತ್ತಾಯಿಸುತ್ತ ಬಂದರೂ ಸ್ಪಂದಿಸಿಲ್ಲ ಎಂದು ಪದಾಧಿಕಾರಿಗಳು ಮನವಿಯಲ್ಲಿ ದೂರಿದ್ದಾರೆ.

ರಾಜ್ಯದ ಬೇರೆ ಸಮಾಜಗಳಲ್ಲಿರುವಂತೆ ನಮ್ಮಲ್ಲಿಯೂ ಅನೇಕ ಉಪ ಪಂಗಡಗಳಿವೆ. ಕಾಡುಗೊಲ್ಲ ಎನ್ನುವುದು ಗೊಲ್ಲ ಸಮಾಜದ ಒಂದು ಉಪ ಪಂಗಡ. ಕಾಡು ಗೊಲ್ಲ ಪಂಗಡಕ್ಕೆ ಮಾತ್ರ ಅಭಿವೃದ್ಧಿ ನಿಗಮ ಸ್ಥಾಪಿಸಿರುವುದು ಸರಿಯಾದ ಕ್ರಮವಲ್ಲ. ಈ ಹಿಂದೆ ಕಾಂಗ್ರೆಸ್ ಸರ್ಕಾರ ವೀರಶೈವ ಲಿಂಗಾಯತರನ್ನು ಪ್ರತ್ಯೇಕ ಮಾಡಲು ಹೊರಟಾಗ ಅದನ್ನು ವಿರೋಧಿಸಿದ ನೀವುಗಳೇ ನಮ್ಮಂಥ ಹಿಂದುಳಿದ ಸಮಾಜವನ್ನು ಒಡೆಯುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.

ADVERTISEMENT

‘ನಮ್ಮ ಜನಾಂಗದಏಕೈಕ ಶಾಸಕರಾದ ಹಿರಿಯೂರಿನ ಪೂರ್ಣಿಮಾ ಶ್ರೀನಿವಾಸ್ ಮತ್ತು ಯಾದವ ಸಮಾಜದ ರಾಜ್ಯ ಘಟಕದ ಅಧ್ಯಕ್ಷ ಶ್ರೀನಿವಾಸ್ ಅವರ ಸಲಹೆ ಕಡೆಗಣಿಸಿ ಗೊಲ್ಲ ಅಭಿವೃದ್ಧಿ ನಿಗಮದ ಬದಲಾಗಿ ಕಾಡುಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಮಾಡಿರುವುದು ಖಂಡನೀಯ’ ಎಂದು ಸಮಾಜದ ಮುಖಂಡ ರವಿ ಕುರಗೋಡ ಅಸಮಾಧಾನ ವ್ಯಕ್ತಪಡಿಸಿದರು.

ಆದ್ದರಿಂದ ತಕ್ಷಣವೇ ಕಾಡುಗೊಲ್ಲ ಅಭಿವೃದ್ಧಿ ನಿಗಮವನ್ನು ರದ್ದು ಮಾಡಿ ಸಮಗ್ರ ಗೊಲ್ಲ ಸಮುದಾಯದಎಲ್ಲ ಉಪಪಂಗಡ ಒಳಗೊಂಡಂತ ಗೊಲ್ಲ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಬೇಕು ಎಂದು ಮನವಿ ಮಾಡಿದರು.

ನೇತೃತ್ವವನ್ನು ಜಿಲ್ಲಾ ಗೊಲ್ಲ (ಯಾದವ) ಸಮಾಜದ ಜಗನ್ನಾಥ್ ಹುಲಿಗಿ, ಪ್ರಣವಾನಂದ ಗಂಗಾವತಿ, ಯಮನೂರು ಕುಷ್ಟಗಿ, ಹನಮೇಶ್ ಕುಷ್ಟಗಿ, ಮಾರುತಿ ಕಟಗಾಲಿ, ವೆಂಕಣ್ಣ ಬಂಡ್ಲಿ, ಮಾರುತಿ ಹಣವಾಳ, ಪ್ರಾಣೇಶ್ ಪೂಜಾರ್, ಕುರಗೋಡ ರವಿ, ರಾಜು ಕುರಗೋಡ ಮುಂತಾದವರು ವಹಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.