ADVERTISEMENT

ಕೊಪ್ಪಳದಲ್ಲಿ ಎಸಿಬಿ ದಾಳಿ: ₹14 ಲಕ್ಷ ನಗದು, 2 ಕೆ.ಜಿ.ಆಭರಣ ಪತ್ತೆ

ಮುಂದುವರಿದ ಉದಯರವಿ ಮನೆಯ ಪರಿಶೀಲನೆ

​ಪ್ರಜಾವಾಣಿ ವಾರ್ತೆ
Published 17 ಜೂನ್ 2022, 15:56 IST
Last Updated 17 ಜೂನ್ 2022, 15:56 IST
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿರುವ ಗುಪ್ತರಚರ ಇಲಾಖೆ ಅಧಿಕಾರಿ ಉದಯರವಿ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು
ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಗ್ರಾಮದಲ್ಲಿರುವ ಗುಪ್ತರಚರ ಇಲಾಖೆ ಅಧಿಕಾರಿ ಉದಯರವಿ ಅವರ ಮನೆಯ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದು, ಪೊಲೀಸ್‌ ಬಂದೋಬಸ್ತ್ ಕಲ್ಪಿಸಲಾಗಿತ್ತು   

ಗಂಗಾವತಿ: ತಾಲ್ಲೂಕಿನ ಗ್ರಾಮೀಣ ಠಾಣೆಯ ಸಿಪಿಐ ಆಗಿ ಕರ್ತವ್ಯ ನಿರ್ವಹಿಸಿ ರಾಜ್ಯ ಗುಪ್ತಚರ ಇಲಾಖೆಗೆ ವರ್ಗಾವಣೆಗೊಂಡಿರುವ ಉದಯ ರವಿ ಅವರ ಮನೆ, ಸಂಬಂಧಿಕರು ಹಾಗೂ ಆಪ್ತರ ಮನೆಗಳ ಮೇಲೆ ಎಸಿಬಿ ಅಧಿಕಾರಿಗಳು ಶುಕ್ರವಾರ ದಾಳಿ ನಡೆಸಿದ್ದಾರೆ.

ಎಸಿಬಿ ಅಧಿಕಾರಿಗಳು ನಾಲ್ಕು ತಂಡಗಳಾಗಿ ಬಂದಿದ್ದು, ಅದರಲ್ಲಿ ಎರಡು ತಂಡಗಳು ಗಂಗಾವತಿ ತಾಲ್ಲೂಕಿನ ವಡ್ಡರಹಟ್ಟಿ ಚೈತನ್ಯ ಸ್ಕೂಲ್ ಸಮೀಪ ಇರುವ ಉದಯರವಿ ಮನೆ ಹಾಗೂ ಗಂಗಾವತಿ ಬಂಬೂ ಬಜಾರಿನಲ್ಲಿರುವ ಅವರ ಆಪ್ತರ ಮನೆಯಲ್ಲಿ ಶೋಧ ನಡೆಸಿವೆ. ಇನ್ನೆರಡು ತಂಡಗಳು ರಾಯಚೂರು ಜಿಲ್ಲೆಯ ಮುದಗಲ್‌ನಲ್ಲಿರುವ ಉದಯ ರವಿ ಅವರ ಅಕ್ಕನ ಮನೆಯ ಮೇಲೆ ದಾಳಿ ನಡೆಸಿವೆ.

ಬೆಳ್ಳಂಬೆಳಿಗ್ಗೆ ಶುರುವಾದ ದಾಳಿ ಸಂಜೆ ತನಕ ನಡೆಯಿತು. ಅಧಿಕಾರಿಗಳು ದಾಖಲೆ ಪರಿಶೀಲಿಸಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ. ದಾಳಿ ವೇಳೆ ಮುದುಗಲ್‌ನಲ್ಲಿ ಎರಡು ನಿವೇಶನ, ಕೊಪ್ಪಳ ಜಿಲ್ಲೆಯ ವಿವಿಧೆಡೆ 79 ಎಕರೆ 23 ಗುಂಟೆ ಕೃಷಿ ಜಮೀನು, 1 ಕೆ.ಜಿ.36 ಗ್ರಾಂ ಚಿನ್ನಾಭರಣ, 1 ಕೆ.ಜಿ. 90 ಗ್ರಾಂ ಬೆಳ್ಳಿ ಆಭರಣ, 1 ಟ್ರ್ಯಾಕ್ಟರ್‌ ಹಾಗೂ ₹13.96 ಲಕ್ಷ ನಗದು ಪತ್ತೆಯಾಗಿದೆ. ಬಳ್ಳಾರಿ ವಲಯದ ಎಸಿಬಿ ಪೊಲೀಸ್‌ ಅಧೀಕ್ಷಕ ಬಿ.ಎಲ್. ಹರಿಬಾಬು ನೇತೃತ್ವದ ತಂಡ ಈ ದಾಳಿ ನಡೆಸಿದೆ.

ADVERTISEMENT

ಉದಯ ರವಿಗೆ ಏ. 29ರಂದು ರಾಜ್ಯ ಗುಪ್ತದಳ ಇಲಾಖೆಗೆ ಬೆಂಗಳೂರಿಗೆ ವರ್ಗಾವಣೆಯಾಗಿತ್ತು. ಆದರೆ ಅವರು ಹೊಸ ವಿಭಾಗಕ್ಕೆ ಸೇರಿಕೊಂಡಿರಲಿಲ್ಲ.

ವಿಚಾರಣೆಗಾಗಿ ಕೊಪ್ಪಳಕ್ಕೆ: ಎಸಿಬಿ ಅಧಿಕಾರಿಗಳು ಇಲ್ಲಿ ಆಸ್ತಿ, ಜಮೀನು, ಬ್ಯಾಂಕ್ ಖಾತೆಗಳಿಗೆ ಸಂಬಂಧಪಟ್ಟ ದಾಖಲೆಗಳು ಮಾತ್ರ ಪರಿಶೀಲನೆ ನಡೆಸಿದ್ದಾರೆ. ಇನ್ನೂ ಹೆಚ್ಚಿನ ವಿಚಾರಣೆಗಾಗಿ ಉದಯರವಿ ಅವರನ್ನು ಕೊಪ್ಪಳಕ್ಕೆ ಕರೆದುಕೊಂಡು ಹೋಗಲಾಗಿದೆ ಎಂದು ಎಸಿಬಿ ಮೂಲಗಳು ತಿಳಿಸಿವೆ.

ಕೊಪ್ಪಳದಲ್ಲಿ ₹62.50 ಲಕ್ಷ ನಗದು ಪತ್ತೆ
ಕೊಪ್ಪಳ:
ಬಾಗಲಕೋಟೆ ಆರ್‌ಟಿಒ ಯಲ್ಲಪ್ಪ ಪಡಸಾಲಿಮನಿ ಅವರ ಸಂಬಂಧಿಕರು ವಾಸವಿರುವ ಇಲ್ಲಿನ ಭಾಗ್ಯನಗರದಲ್ಲಿ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದ್ದು, ಪರಿಶೀಲನೆ ಮುಂದುವರಿಸಿದ್ದಾರೆ.

ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ 11 ಎಕರೆ 35 ಗುಂಟೆ ಕೃಷಿ ಜಮೀನು, ಎರಡು ದ್ವಿಚಕ್ರ ವಾಹನಗಳು, ಮೂರು ಕಾರುಗಳು, ₹62.50 ಲಕ್ಷ ನಗದು, ವಿವಿಧ ಬ್ಯಾಂಕ್‌ಗಳಲ್ಲಿ 12 ಖಾತೆಗಳು, ₹10 ಬೆಲೆಬಾಳುವ ಗೃಹೋಪಯೋಗಿ ಸಾಮಗ್ರಿಗಳನ್ನು ಅಧಿಕಾರಿಗಳು ಪತ್ತೆ ಹಚ್ಚಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.